ಭೂಮಂಡಲದ ಉಸಿರಿಗೇ ಬೆಂಕಿ..!!

ಭೂಮಂಡಲದ ಉಸಿರಿಗೇ ಬೆಂಕಿ..!!

ಅಮೆಜಾನ್ ಅರಣ್ಯದಲ್ಲಿ ಬೆಂಕಿಗೆ ಆಹುತಿಯಾದ  ಕಂದನನ್ನು ತಬ್ಬಿ ರೋಧಿಸುತ್ತಿರುವ ತಾಯಿಕೋತಿಯ  ಈ ಚಿತ್ರ ಇಂದು ಇಡೀ ಮನುಷ್ಯತ್ವವನ್ನೇ ಹಿಡಿದು ಅಲ್ಲಾಡಿಸುತ್ತಿದೆ! ಜಗತ್ತಿನ ಜೀವಂತ ಹೃದಯಗಳು ದಹದಹಿಸುವಂತೆ ಮಾಡಿದೆ.!? 

ಅಮೆಜಾನ್ ಅರಣ್ಯ ಈ ಭೂಮಂಡಲಕ್ಕೆ 20% ಆಮ್ಲಜನಕ ನೀಡುತ್ತಾ ಈ ಭೂಮಿ ಮೇಲಿನ ಜೀವಕೋಟಿಗೆ ನಿರಂತರ ಉಸಿರಾಟ ನೀಡುತ್ತಾ ಜೀವಂತವಾಗಿಟ್ಟುಕೊಂಡಿದೆ! ಆದ್ದರಿಂದ ಅಮೆಜಾನಿಗೆ ಬೆಂಕಿ ಬಿದ್ದಿದೆ ಎಂದರೆ ನಮ್ಮ ಶ್ವಾಸಕೋಶಕ್ಕೇ ಬೆಂಕಿ ಬಿದ್ದಿದೆ ಎಂದು ಅರ್ಥ!!

ಅಮೆಜಾನ್ ಅರಣ್ಯಕ್ಕೆ ಬಿದ್ದ ಬೃಹತ್ ಬೆಂಕಿಯಿಂದಾಗಿ ಅರಣ್ಯವನ್ನೇ ನಂಬಿ ಬದುಕಿದ್ದ ಜೀವಜಾಲವೇ ದಹಿಸಿ ಹೋಗುತ್ತಿದೆ! ಅಸಂಖ್ಯಾತ ಸಸ್ಯಪ್ರಭೇದಗಳು ನೋಡುನೋಡುತಿದ್ದಂತೆಯೇ ಕಣ್ಣಳತೆಯಲ್ಲೇ ಬೂದಿಯಾಗುತ್ತಿವೆ! ಕಾಡನ್ನೇ ಬದುಕಾಗಿಸಿಕೊಂಡ ಆದಿವಾಸಿಗಳ ಬದುಕು ಕಂಗಾಲಾಗಿದೆ! ಮನುಷ್ಯನಾಳದ ಕೇಡು ಕ್ಷಣಾದಲ್ಲಿ ತಾನು ನಿಂತ ನೆಲವನ್ನೇ ಅಗ್ನಿಕುಂಡವನ್ನಾಗಿ ಮಾರ್ಪಡಿಸುತ್ತಿದೆ!! 

ಕೇವಲ ಆರೇಳು ತಿಂಗಳ ಹಿಂದೆ ನನ್ನ ಮಗಳು ಅಮೆಜಾನ್ ಕಾಡನ್ನು ಅನೇಕ ದಿನಗಟ್ಟಳೆ ದಾರಾಳವಾಗಿ ಸುತ್ತಿ ಬಂದಿದ್ದಳು. ಆ ಸಮೃದ್ದ ಮಳೆಯ ಕಾಡಿನ ಜೀವಜಾಲ, ಸಸ್ಯ ಸಂಕುಲ, ಎಷ್ಟೇ ಕಷ್ಟಗಳಿದ್ದರೂ ಆದಿವಾಸಿಗಳ  ಸಂಭ್ರಮದ ವರ್ಣಮಯ ಬದುಕಿನಿಂದ ಹಿಡಿದು ಅಲ್ಲಿನ ಕ್ರಿಮಿಕೀಟಗಳ ವೈವಿಧ್ಯತೆಗಳನ್ನು ಅವಳ ಮಾತುಗಳಲ್ಲಿ ಕೇಳಿ ತಲ್ಲೀನನಾಗಿ ಹೋಗಿದ್ದೆ! ಅಮೆಜಾನಿನ ಮಾಂತ್ರಿಕ ಸೆಳೆತಕ್ಕೆ ಸಿಕ್ಕಿಕೊಂಡಿದ್ದೆ! ನಾನೂ ಮತ್ತು  ಅಮೆರಿಕದಲ್ಲಿರುವ ಗೆಳೆಯ ರೆಡ್ಡಿ, ಅಮೆಜಾನಿಗೆ ಹೋಗುವ ತಯಾರಿ ಕೂಡ ನಡೆಸಿದ್ದೆವು. ಅನಿವಾರ್ಯ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಅಮೆಜಾನ್ ಪ್ರಯಾಣವನ್ನು ಮುಂದೂಡಿ‌ ಆಸ್ಟ್ರೇಲಿಯಾಗೆ ಬರಬೇಕಾಯಿತು. ಇಲ್ಲೂ ಕೆಲಸವಿಲ್ಲದಾಗ ಕೂತು ಅಮೆಜಾನಿನ ಡಾಕ್ಯುಮೆಂಟರಿಗಳನ್ನು ನೋಡುತ್ತಾ ಕಾಲಕಳೆಯುತ್ತಿರುವಂತೆಯೇ ಅಚಾನಕ್ಕಾಗಿ ಅಮೆಜಾನ್ ಮಳೆಕಾಡನ್ನು ದಹದಹಿಸುವ ಬೆಂಕಿ ತನ್ನ ದೈತ್ಯ ಜ್ವಾಲೆಗಳ ಕೆನ್ನಾಲಿಗೆಯಿಂದ ಹಸಿರ ಕಾನನವನ್ನು  ನೆಕ್ಕುವ ದೃಶ್ಯಗಳನ್ನು ನೋಡಬೇಕಾಯಿತು!

ನಮ್ಮ ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳಿಗೆ ಆಗಾಗ ಬೆಂಕಿ ಬೀಳುವಂತೆ, ಅಮೆಜಾನಿಗೂ‌ ಆಗಾಗ ಬೆಂಕಿ ಬೀಳುತ್ತಲೇ ಇರುತ್ತದೆ. ಆದರೆ ಈಗ ಬಿದ್ದಿರುವ ಬೃಹತ್ ಮಟ್ಟದಲ್ಲಂತೂ ಅಲ್ಲ! ಪ್ರತಿವರ್ಷ ಈ ಅರಣ್ಯಕ್ಕೆ ಬೀಳುವ ಬೆಂಕಿಗಿಂತ ಈ ಸಲ ಬಿದ್ದಿರುವ ಬೆಂಕಿ ಸಾವಿರಾರು ಪಟ್ಟು ಹೆಚ್ಚಿನದು! ದಾಖಲೆಗಳ ಪ್ರಕಾರ ಈ ವರ್ಷದಲ್ಲಿ 74,155 ರಷ್ಟು ಸಲ ಅಮೆಜಾನ್ ಮಳೆಕಾಡಿಗೆ ಬೆಂಕಿಬಿದ್ದಿದೆ!! ಈ ಬೆಂಕಿಗೆ ಕಾರಣ 90% ಕ್ಷುದ್ರ ಮಾನವ ಎನ್ನುವುದು ಗಮನಾರ್ಹ!?

ಇದನ್ನು ಆರಿಸಲು ಸಾವಿರಾರು ಅಗ್ನಿಶಾಮಕ ದಳಗಳು ರಾತ್ರಿಹಗಲೆನ್ನದೆ ಕೆಲಸ ಮಾಡುತ್ತಿವೆ. ಅಸಮಾನ್ಯ ಶಕ್ತಿಯಿರುವ ಹೆಲಿಕಾಪ್ಟರ್ ಗಳಿಂದ ದಾರಾಕಾರವಾಗಿ ನೀರು ಸುರಿಯಲಾಗುತ್ತಿದೆ. 'ನಾಸಾ' ಬಿಡುಗಡೆ ಮಾಡಿರುವ ಚಿತ್ರಗಳನ್ನು ನೋಡಿದರೆ ಇಲ್ಲಿನ ಸ್ಥಿತಿಯ ಗಂಭೀರತೆಯ ಅರಿವಾಗುತ್ತದೆ!

ಅಮೇಜಾನ್ ಅರಣ್ಯದ ಸುಮಾರು ಅರವತ್ತು ಬಾಗ ಬ್ರೆಸಿಲ್ಲಿಗೆ ಸೇರುತ್ತದೆ, ಮಿಕ್ಕಂತೆ ಪೆರು, ಕೊಲಂಬಿಯ ಮುಂತಾದ ಸಣ್ಣಪುಟ್ಟ ದೇಶಗಳು ಅಮೆಜಾನ್ ಕಾಡನ್ನು  ಹಂಚಿಕೊಳ್ಳುತ್ತವೆ. ದುರಂತವೆಂದರೆ ಇಲ್ಲೂ ಕೂಡ ನಮ್ಮ ರಾಜ್ಯ ಮತ್ತು ದೇಶದಲ್ಲಿದ್ದಂತೆ  wild cat miners ಹೆಸರಿನ ಗಣಿ ಮಾಫಿಯಾಗಳು, ಭೂಕಬಳಿಕೆದಾರರು, ಎಕರೆಗಟ್ಟಳೆ  ranch(ದನದ ದೊಡ್ಡಿಗಳು)ಗಳನ್ನು ಮಾಡಿ ಮಾಂಸಕ್ಕಾಗಿ ದನಗಳನ್ನು ಅಭಿವೃದ್ಧಿ ಪಡಿಸಿ ಕೋಟ್ಯಾಂತರ ಡಾಲರ್ ವಹಿವಾಟು ಮಾಡುವವರು ಸತತವಾಗಿ ಅರಣ್ಯವನ್ನು ಬೆತ್ತಲು ಮಾಡುತ್ತಲೇ ಇರುತ್ತಾರೆ. ಈ ದುಷ್ಟ ಪ್ರಕ್ರಿಯೆಯಲ್ಲಿ ಕಾಡಿಗೆ ಬೆಂಕಿ ಹಾಕುವುದೂ ಒಂದು! ಈ ಅಧಮರಿಗೆ ತಾವು ಮಾಡುತ್ತಿರುವ ಹೇಯ ಕಾರ್ಯ ತಮ್ಮನ್ನೂ ಒಳಗೊಂಡಂತೆ ಇಡೀ ಜೀವ ಸಂಕುಲವನ್ನೇ ದಹಿಸುತ್ತದೆ, ಇಡೀ ಜಗತ್ತಿನ ಶ್ವಾಸಕೋಶಗಳಿಗೆ ಹೊಗೆ ತುಂಬುತ್ತವೆ ಎಂಬ ಕನಿಷ್ಟ ಅರಿವೂ ಇರುವುದಿಲ್ಲ!! ಇವರ ಕಣ್ಣಿಗೆ ಕಾಣುವುದು ಕೇವಲ ಅಮೆರಿಕನ್ ಡಾಲರ್ ಮಾತ್ರ!

ಇದನ್ನು ಬರೆಯುತ್ತಿರುವಾಗ ಇಲ್ಲಿನ ಕ್ವೀನ್ಸ್ ಲ್ಯಾಂಡ್ ನಲ್ಲಿ ಭಾರತದ ಪ್ರಧಾನಿಗಳ ಆಪ್ತರಾದ ಅದಾನಿ   carmichael coal mine ಥರ್ಮಲ್ ಪ್ರಾಜೆಕ್ಟ್ ಕೈಹಾಕಿದ್ದು, ಇದನ್ನು ಇಲ್ಲಿನ ಪರಿಸರವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ದು. ಈ ಎಲ್ಲದರ ನಡುವೆ ಆಸ್ಟ್ರೇಲಿಯಾದ 'ರೈಟ್ ವಿಂಗ್' ರಾಜಕಾರಣ ಭಾರತದ ರೈಟ್ ವಿಂಗ್ ರಾಜಕಾರಣಕ್ಕೆ ಬಂಡವಾಳದಾರನಾದ  ಅದಾನಿಗೆ ತಣ್ಣಗೆ ಸಹಕರಿಸಿದ್ದು, ಕಡೆಗೆ ಅದಾನಿ ಎಲ್ಲಾ ಪ್ರತಿರೋಧಗಳ ನಡುವೆಯೂ ಯಶಸ್ವಿಯಾಗಿದ್ದು..! ಎಲ್ಲಾ ಕಣ್ಣಮುಂದೆ ಬರುತ್ತಿದೆ.

ಅಮೆಜಾನ್ ಅರಣ್ಯಕ್ಕೆ ಬೆಂಕಿ ಬಿದ್ದರುವುದು, ಬ್ರೆಜಿಲ್ ಮತ್ತು ಅಮೆಜಾನ್ ಸುತ್ತಲಿನ ದೇಶಗಳು ಹಗಲಿನಲ್ಲೂ ಹೊಗೆಯ ಕಾರ್ಗತ್ತಲಿಗೆ ಜಾರಿರುವುದು, ಈ ಅಮೆಜಾನ್ ಬೆಂಕಿಯಿಂದಾಗಿ ಇಡೀ ಜಗತ್ತು ತನ್ನ ಶ್ವಾಸಕೋಶಗಳಲ್ಲಿ ಇಂಗಾಲಾಮ್ಲ ತುಂಬಿಸಿಕೊಳ್ಳುತ್ತಿರುವುದು,  ಇಂದು ಇಡೀ ಭೂಮಂಡಲ ಗಾಬರಿಯಾಗಿರುವುದಕ್ಕೆ, ಚಿಂತಾಕ್ರಾಂತವಾಗಿರುವುದಕ್ಕೆ ಕಾರಣವಾಗಿದೆ. ದುರಂತವೆಂದರೆ ಬ್ರೆಜಿಲ್ಲಿನ ಅಧ್ಯಕ್ಷ ಬೋಲ್ಸೋನ್ಯಾರೋ ಕೂಡ ರೈಟ್ ವಿಂಗ್ ರಾಜಕಾರಣಿಯೇ! ಈತ ಮಾಡುತ್ತಿರುವುದೂ ಬಲಪಂಥೀಯ ರಾಜಕಾರಣವನ್ನೇ! ಇಲ್ಲಿನ ಭೂ ಆಕ್ರಮಣಕಾರರಿಗೆ, ವೆನಿಜುಲಾದ ಶಸ್ತ್ರಸಜ್ಜಿತ ಚಿನ್ನದ ಗಣಿಗಳ ಹುಡುಕಾಟದಾರರಿಗೆ, ಬಂಡವಾಳಿಗರಾದ ರಾಂಚ್ ಗಳ ಒಡೆಯರಿಗೆ, ಕಲ್ಲಿದ್ದಲು ಮೈನ್ಸ್ ಮಾಫಿಯಾಗಳಿಗೆ ಬೆಂಬಲಿಸುತ್ತಾ ಭಾರತದ ಪ್ರಧಾನಿಯಂತೆಯೇ ಬಾಯಲ್ಲಿ ಮಾತ್ರ ಅಭಿವೃದ್ದಿಯ ಮಂತ್ರಗಳನ್ನು ಪಠಿಸುತಿದ್ದಾರೆ! 

"ಆದಿವಾಸಿಗಳು ಪ್ರಾಣಿಸಂಗ್ರಹಾಲಯದಲ್ಲಿ ವಾಸಿಸಬಹುದು.. ಅವರಿಗೆ ಒಂದು ಸ್ಕೈಯರ್ ಸೆಂಟಿಮೀಟರ್ ಜಾಗ ಸಾಕು.." ಎಂದು ಒಂದು ಕಡೆ ಉಡಾಫೆಯಿಂದ ಮಾತನಾಡುತ್ತಾ ಮತ್ತೊಂದು ಕಡೆ "ಅವರು ವಿಜ್ಙಾನ, ತಂತ್ರಜ್ಙಾನಗಳಿಗೆ ತೆರೆದುಕೊಳ್ಳಬಾರದೆ..? ಅವರಿಗೆ ಆಧುನಿಕತೆಯೇ ಬೇಡವೇ..?" ಎಂದು‌ ಆದಿವಾಸಿಗಳ ಬಗ್ಗೆ ಕಾಳಜಿ ಇದ್ದಂತೆ ದ್ವಂದ್ವಮಯ ಹೇಳಿಕೆಗಳನ್ನು ನೀಡುತ್ತಾ ಬ್ರೆಜಿಲ್ಲಿನ ಅಧ್ಯಕ್ಷ ಬೊಲ್ಸೋನ್ಯಾರೋ ಕಾಡ್ಗಳ್ಳರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ‌ಬೆಂಬಲಿಸುತಿದ್ದಾರೆ.

ಇಲ್ಲಿನ ಮೂಲನಿವಾಸಿಗಳಾದ ಆದಿವಾಸಿಗಳ ಪರಿಸ್ಥಿತಿಯಂತೂ ಹೇಳತೀರದು. "ಈತ ನಮ್ಮ ಕಾಡನ್ನಷ್ಟೇ ಅಲ್ಲ.. ನಮ್ಮನ್ನೂ ಮಾರಿಬಿಡುತ್ತಾನೆ.." ಎಂದು‌ ಆದಿವಾಸಿಗಳು ಮೀಡಿಯಾ ಮುಂದೆ ಎದೆ ಬಡಿದುಕೊಂಡು ಹೇಳುವುದನ್ನು ಜಗತ್ತಿನ ರೈಟ್ ವಿಂಗ್ ಮೀಡಿಯಾ ಗಮನವಿಟ್ಟು ಕೇಳಿಸಿಕೊಳ್ಳುತ್ತಿಲ್ಲ! ಈ ಕಾರಣಕ್ಕೇ ಅಮೆಜಾನ್ ಅರಣ್ಯಕ್ಕೆ ಬೆಂಕಿ ಬಿದ್ದ ಈ ಪ್ರಮುಖ ವಿಷಯ ಭಾರತದ ಮಾಧ್ಯಮಕ್ಕೂ ಮುಖ್ಯ ಅನಿಸಲ್ಲ! ಭಾರತ ಸರ್ಕಾರದ ಯಾವ ಪ್ರತಿನಿಧಿಯೂ ಈ ಬೆಂಕಿ ಪ್ರಕರಣದ ಬಗ್ಗೆ ಮಾತನಾಡಿದ್ದು ಎಲ್ಲೂ ಪ್ರಮುಖವಾಗಿ ದಾಖಲೆಯಾದಂತಿಲ್ಲ!?

ಭಾರತ, ಎಣ್ಣೆ ಕಾಳುಗಳನ್ನು, ಪ್ರಮುಖವಾಗಿ ಊಟಕ್ಕೆ ಬಳಸುವ ಎಣ್ಣೆಯನ್ನು  ಅಮೆಜಾನ್ ಸುತ್ತಲಿನ ಬ್ರೆಜಿಲ್, ಅರ್ಜೆಂಟೈನಾನೊಂದಿಗೆ ಮಲೇಸಿಯಾ, ಇಂಡೋನೇಸಿಯಾ, ಉಕ್ರೇನ್ ದೇಶಗಳಿಂದ ರಫ್ತು ಮಾಡಿಕೊಳ್ಳುತ್ತದೆ. ಈ ಅಮೆಜಾನ್ ಬೆಂಕಿಯಿಂದಾಗಿ ಕೇವಲ ನಮ್ಮ ದೇಶದ ಪರಿಸರಕ್ಕೆ ಮಾತ್ರ ದಕ್ಕೆಯಾಗುವುದಲ್ಲ, ನಮ್ಮ ಎಣ್ಣೆಯ ರಫ್ತಿನ ವಹಿವಾಟಿನಿಂದಾಗಿ ನಮ್ಮ ಆರ್ಥಿಕ ಪ್ರಗತಿಗೂ ಹೊರೆಯಾಗುತ್ತದೆ! 

ಇಂದು ಜಗತ್ತಿನ ಶ್ವಾಸಕೋಶ ಅಮೆಜಾನ್ ಹತ್ತಿ ಉರಿಯುತ್ತಿರುವದು ಇಡೀ ಜಗತ್ತೇ ಕಲಿಯಬೇಕಾದ ಒಂದು ಪಾಠವಾದರೆ ನಮ್ಮ ದೇಶಕ್ಕೂ ಒಂದು ಮಾನವೀಯ ಪಾಠವಾಗಲಿದೆ. ನಾವಿಂದು ಅಮೆಜಾನ್ ಬೆಂಕಿಗೆ ಸ್ಪಂದಿಸದಿದ್ದರೆ, ಅದರಿಂದ ಪಾಠಗಳನ್ನು ಕಲಿಯದಿದ್ದರೆ, ಕಾಡು ಮೇಡುಗಳಿಂದಾಗಿಯೇ ಉಸಿರಾಡುತ್ತಿರುವ, ಅನ್ನ ತಿನ್ನುತ್ತಿರುವ ನಾವೂ ಕೂಡ ಒಂದು ದಿನ‌ ಅಮೆಜಾನ್ ಕಾಡಿನ‌ ಆದಿವಾಸಿಗಳ ಪಾಡನ್ನೇ ಪಡಬೇಕಾಗುತ್ತದೆ. ಕಾಡಿಲ್ಲದ ಬರಡು ಬಂಡೆಗಳ ಮೇಲೆ ಬೇಯಬೇಕಾಗುತ್ತದೆ...