ಸುಬ್ಬಯ್ಯ ಎಂಬ ಅಪ್ಪಟ ನಿಷ್ಠುರವಾದಿ..!  

ಸುಬ್ಬಯ್ಯ ಎಂಬ ಅಪ್ಪಟ ನಿಷ್ಠುರವಾದಿ..!  

ಎ.ಕೆ.ಸುಬ್ಬಯ್ಯನವರು ನಿಧನರಾದ ವಿಷಯ ಈಗಷ್ಟೇ  the deccan news.com ನಿಂದ ತಿಳಿಯಿತು. ತೀರಾ ದುಃಖ ಸುದ್ದಿಯನ್ನು ನಂಬಲು ಇಷ್ಟವಾಗದ ಮನಸ್ಥಿತಿ, ಒಂದು ರೀತಿಯ ಆಳದ ತೊಳಲಾಟವಾಯಿತು! ಸುಮಾರು ಮೂರು ದಶಕಗಳಿಂದ ಸುಬ್ಬಯ್ಯನವರೊಂದಿಗೆ ಒಡನಾಟದಲ್ಲಿದ್ದ ನನಗೆ ಅವರ ಅಂತಿಮ ದರ್ಶನ ಪಡೆಯಲೂ ಆಗುತ್ತಿಲ್ಲವಲ್ಲ ಎಂಬ ನೋವು,  ಅಸಹಾಯಕತೆಯಲ್ಲಿದ್ದೇನೆ! ಯಾಕೆಂದರೆ ನಾನೀಗ ಕರ್ನಾಟಕಕ್ಕೆ ತಕ್ಷಣಕ್ಕೆ ಬರಲಾಗದಂತಷ್ಟು ದೂರದಲ್ಲಿದ್ದೇನೆ! ಇನ್ನೇನು ಮಾಡುವುದು..? ಸುಬ್ಬಯ್ಯನವರ ಬಗ್ಗೆ ಯೋಚಿಸುತ್ತಾ ಕುಂತಲ್ಲೇ ಕುಂತು ಅವರ ಒಡನಾಟದ ಅನೇಕ ಘಟನಾವಳಿಗಳನ್ನು ಮೆಲಕು ಹಾಕುತಿದ್ದೇನೆ.. 

ಸುಲಭವಾಗಿ ನಗದ, ಮುಖದ ಮೇಲೆ ಯಾವುದೇ ಭಾವನೆಗಳನ್ನು ತಕ್ಷಣದಲ್ಲಿ ತೋರಿಸಿಕೊಳ್ಳಲಾಗದ ಸುಬ್ಬಯ್ಯನವರು ನೋಡಲಿಕ್ಕೆ ಕೊಂಚ ಮುಂಗೋಪಿಯಂತೆ ಕಾಣುತಿದ್ದರು.. ಅವರ ಮಾತು ಸ್ಪಷ್ಟ, ನಿಖರ ಹಾಗೂ ಕಠಿಣ! ಅವರು ಮಾತನಾಡುವಾಗ ಅವರ ಮಾತಿನಲ್ಲಿ ಯಾವುದೇ ರೀತಿಯ ಅಸ್ಪಷ್ಟತೆ, ಗೊಂದಲಗಳಿರುತ್ತಿರಲಿಲ್ಲ. ಆದರೆ ಅವರ ಮುಖಭಾವ ಮಾತ್ರ ಒಂದು ರೀತಿಯಲ್ಲಿ wooden face ಎನ್ನುವಂತಿತ್ತು! ಯಾರೇ ಆದರೂ ಅವರೊಂದಿಗೆ ಸುಲಭವಾಗಿ ಒಡನಾಡಲು ಹಿಂಜರಿಯುತಿದ್ದರು‌.

ಸುಬ್ಬಯ್ಯನವರನ್ನು ವಕೀಲನಾಗಿ ನ್ಯಾಯಾಲಯದ ಕಾರಿಡಾರುಗಳಲ್ಲಿ ನೋಡಿದ್ದೆ ಆದರೆ ಮೊದಲ ಬಾರಿಗೆ ಒಂದು ಸ್ಪಷ್ಟ ಉದ್ದೇಶಕ್ಕೆ ಭೇಟಿಯಾಗಿದ್ದು, ಮಾತನಾಡಿದ್ದು ಎಂಬತ್ತರ ದಶಕದಲ್ಲಿ "ಲಂಕೇಶ್ ಪತ್ರಿಕೆ" ಗಾಗಿ ಸಂದರ್ಶನಕ್ಕೆ ಹೋದಾಗ. ಕೋರ್ಟಿನ ಪ್ರಾಗಂಣದಲ್ಲೇ ಸಂದರ್ಶನ ಮಾಡಬೇಕಾದ ಅನಿವಾರ್ಯತೆ ಇತ್ತು. ಇಬ್ಬರೂ ಕೋಟು, ಗೌನು ತೊಟ್ಟು ರೋಬ್ಸ್ ನಲಿದ್ದೆವು, ಎಲ್ಲಿ ಹೋದರೂ  ವಕೀಲರು ಮತ್ತು ಗುರುತಿನ ಜನ, ಕಡೆಗೆ ಹೈಕೋರ್ಟ್ ಮುಂದಿನ ಹುಲ್ಲಿನ ಲಾನ್ ಮೇಲೆ ಮಾತಿಗೆ ಕುಂತೆವು. ಸಂದರ್ಶನದ ಸೂಕ್ಷ್ಮ ವಿವರಗಳು ಮರೆತು ಹೋಗಿವೆ. ಮಾತಿನ ನಡುವೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ದೇವೇಗೌಡ, ಬೊಮ್ಮಯಿ ಎಲ್ಲರ ಹೆಸರೂ ಬಂದು ಹೋದ ಮುಸುಕು ಮಸುಕಾದ ಮಾತುಗಳು ನೆನಪಿವೆ. ಅದಾಗ ತಾನೆ ಜನಸಂಘ ಅಥವಾ ಬಿಜೆಪಿಯಿಂದ ಹೊರಬಂದಿದ್ದ ಸುಬ್ಬಯ್ಯನವರಿಗೆ ಅತ್ಯಂತ ಮುಜುಗರದ ಪ್ರಶ್ನೆಗಳನ್ನು ಕೇಳುತಿದ್ದೆ. ಆದರೆ ಸುಬ್ಬಯ್ಯನವರು ಮಾತ್ರ ಗುಂಡು ಹೊಡೆದಂತೆ ನೇರವಾಗಿ, ಸ್ಪಷ್ಟವಾಗಿ ಯಾವುದೇ ಗೊಂದಲವಿಲ್ಲದೆ ಉತ್ತರಿಸುತಿದ್ದರು. 'ಪತ್ರಿಕೆ'ಯಲ್ಲಿ ಸಂದರ್ಶನ ಪ್ರಕಟವಾಯಿತು, ಸುಬ್ಬಯ್ಯನವರಿಗೆ ಅದು ಖುಷಿಯಾದಂತೆ ನನಗೆ ಅನಿಸಲಿಲ್ಲ ಅಥವಾ ಅವರ expression ಅಥವಾ stoneface ಮುಖಭಾವ ನನಗೆ ಅರ್ಥವಾಗಲಿಲ್ಲವೋ ಏನೋ..!?

ಅದಾದ ನಂತರ ನಮ್ಮಿಬ್ಬರ ನಡುವಿನ ಏಕರೀತಿಯ ಅಥವ ಸಮಾನಮನಸ್ಕ ಆಲೋಚನೆಯಿಂದಾಗಿ ನಿಧಾನವಾಗಿ ನಮ್ಮಿಬ್ಬರೊಂದಿಗೆ ಒಡನಾಟ ಆರಂಭವಾಯಿತು. ನಂತರ ಹಂತಹಂತವಾಗಿ ಸುಬ್ಬಯ್ಯನವರೊಂದಿಗೆ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ, ಅನೇಕ ಸಭೆ, ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿದ್ದೇನೆ. ಅದರಲ್ಲೂ  ಮಂತ್ರಾಲಯದಲ್ಲಿ ನೆರೆ ಬಂದಾಗ ಗೋಶಾಲೆಯಲ್ಲಿ  ಕಟ್ಟಿಹಾಕಿದ್ದ ಗೋವುಗಳು ಅಸಹಾಯಕವಾಗಿ ಸತ್ತದ್ದು, ಅವುಗಳನ್ನು ಕಾಪಾಡಿಕೊಳ್ಳುವ ಕನಿಷ್ಟ ಜ್ಞಾನ ಅಲ್ಲಿನ ಮಠದವರಿಗೆ ಹೊಳೆಯದೇ ಹೋದುದರ  ಬಗ್ಗೆ ನಾನು ಮಾತನಾಡಿದ್ದು, ಸುಬ್ಬಯ್ಯನವರಿಗೆ ಬಹಳ ಇಷ್ಟವಾದಂತಿತ್ತು. ಪ್ರತಿ ಸಭೆಯಲ್ಲೂ ಇದನ್ನು ಕೋಟ್ ಮಾಡಿ ಮಾತಾಡತೊಡಗಿದರು. ನನ್ನ ಬಗ್ಗೆ ಎಲ್ಲಾ ವಿಷಯದಲ್ಲೂ ಪಾಸಿಟೀವ್ ಆಗಿ ಸ್ಪಂದಿಸತೊಡಗಿದರು.

ಈಚೆಗಷ್ಟೇ ನಾವಿಬ್ಬರೂ ಸಭೆಯೊಂದಕ್ಕೆ ಒಂದೇ ಕಾರಿನಲ್ಲಿ ಹೋಗಿಬಂದು ಅವರ ಅಪಾರ್ಟ್ ಮೆಂಟ್ನಲ್ಲಿ ಕೊಂಚ ಹೊತ್ತು ತಂಗಿದ್ದು, ಮೊದಲ ಬಾರಿಗೆ ನಮ್ಮ ವ್ಯಕ್ತಿಗತ ವಿಷಯಗಳ ಬಗ್ಗೆ ದೀರ್ಘವಾಗಿ ಮಾತನಾಡಿದ್ದೆವು. ನಮ್ಮ ಮಾತಿನ ನಡುವೆ ಅವರ ಮಗ ಪೊನ್ನಣ್ಣ ಕೂಡ ಅನೇಕ ಸಲ ಬಂದುಹೋಗಿದ್ದರು.  ಪೊನ್ನಣ್ಣ ಕೂಡ ಕೋರ್ಟಿನಲ್ಲಿ ಸಿಕ್ಕಾಗಲೆಲ್ಲಾ ಅವರ ತಂದೆ ಸುಬ್ಬಯ್ಯನವರ ಬಗ್ಗೆ ನಾವಿಬ್ಬರೂ ಮಾತನಾಡುತಿದ್ದೆವು.  

ಸುಬ್ಬಯ್ಯನವರು 'ಜಸ್ಟೀಸ್ ಪುಟ್ಟಸ್ವಾಮಿ ಕಮೀಷನ್' ಮುಂದೆ ವಾದ ಮಾಡುವಾಗ ಅತ್ಯಂತ ಜೂನಿಯರ್ ಗಳಾದ ನಾವು ಕೋರ್ಟಿನಲ್ಲಿ ಇವರ ವಾದ ಆಲಿಸುತ್ತಾ ಕೂರುತಿದ್ದೆವು. ಜೇಠ್ ಮಲಾನಿ ಒಂದಷ್ಟು ಕೀಟಲೆಯೆಂಬಂತೆ ಸುಬ್ಬಯ್ಯನವರನ್ನು 'ಸಬ್ಬಯ್ಯ' ಎಂದು ಕರೆಯುತಿದ್ದಾಗ ಒಂದೆರಡು ಬಾರಿ ಸುಬ್ಬಯ್ಯನವರು ಪ್ರತಿಭಟಿಸಿ, ಅವರನ್ನು ತಿದ್ದಲು ಕೂಡ ಪ್ರಯತ್ನಿಸುತಿದ್ದರು. ಆದರೆ ಜೇಠ್ ಮಲಾನಿ ಮತ್ತೆ ಮತ್ತೆ ಸುಬ್ಬಯ್ಯನವರು 'ಸಬ್ಬಯ್ಯ' ಎಂದೇ ಕೊಂಚ  ridicule  ಮಾಡುವಂತೆ ಕರೆಯಲಾರಂಭಿಸಿದಾಗ ಅನಿವಾರ್ಯವಾಗಿ ತಿರುಗಿಬಿದ್ದ ಸುಬ್ಬಯ್ಯನವರು "ನೀವು ನನ್ನನ್ನು 'ಸಬ್ಬಯ್ಯ' ಎಂದೇ ಕರೆಯುವುದನ್ನು ಮುಂದುವರೆಸುವುದಾದರೆ ನಾನು ನಿಮ್ಮನ್ನು ಇನ್ನು ಮುಂದೆ 'ಜೇಠ್ ಮಲಾನಿ' ಅನ್ನುವ ಬದಲು 'ಜೂಟ್ ಮಲಾನಿ' ಎಂದು ಕರೆಯಬೇಕಾಗುತ್ತದೆ ನೋಡಿ.." ಎಂದಾಗ ಜೇಠ್ ಮಲಾನಿ ಯವರು ಸುಬ್ಬಯ್ಯನವರನ್ನು 'ಸಬ್ಬಯ್ಯ' ಎಂದು ಕರೆಯುವುದನ್ನು ಬಿಟ್ಟರು.

ಸುಬ್ಬಯ್ಯನವರು ಕೆ.ಪಿ.ಎಸ್.ಸಿ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಅನ್ಯಾಯಕ್ಕೊಳಗಾದ ಅಸಹಾಯಕರಾದ ಪ್ರತಿಭಾವಂತ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಹುಡುಗರ ನಿಟ್ಟುಸಿರನ್ನು ಕೂಡ ಗ್ರಹಿಸದವರಂತೆ ಸಿದ್ದರಾಮಯ್ಯನವರನ್ನು ಸಮರ್ಥಿಸಿ ಮಾತನಾಡಿದಂತೆಲ್ಲಾ ನಾನು ಸುಬ್ಬಯ್ಯನವರಿಂದ ಅಂತರ ಕಾಪಾಡಿಕೊಂಡೆ! ದೂರವಾದೆ!? ನನಗೆ ಗೊತ್ತಿತ್ತು ಇದು ಸಿದ್ದರಾಮಯ್ಯನವರ ಮೇಲಿನ ಪ್ರೀತಿಗಿಂತಲೂ ಸಂಘಪರಿವಾರದ ಮೇಲಿನ ಅವರಿಗಿದ್ದ ಸಿಟ್ಟು ಎಂಬುದು!  ಇವೆಲ್ಲಾ ಇಬ್ಬರು ಸಮಾನಮನಸ್ಕ ಪ್ರಗತಿಪರರಾಗಿ ಯೋಚಿಸುವವರಲ್ಲಿ ಇರಬಹುದಾದ ತಾತ್ಕಾಲಿಕ ಗೊಂದಲ ಮತ್ತು ಸೆಡವು ಎನ್ನುವುದು ನನಗೂ ಗೊತಿತ್ತು, ಅವರಿಗೂ ಅದರ ಅರಿವಿತ್ತು.. ಇವೆಲ್ಲಾ ಆಗಿಹೋದ ಘಟನಾವಳಿಗಳು..

ಏನೇ ಆಗಲಿ ಎ.ಕೆ.ಸುಬ್ಬಯ್ಯ ಎಲ್ಲೂ ರಾಜಿಯಾಗದ, ಯಾರ ಹಂಗಿನಲ್ಲೂ ಇರಬಯಿಸದ ಅಪ್ಪಟ ಜಾತ್ಯಾತೀತವಾದಿ! ಮತೀಯ ವಾದಿಗಳ ಪಾಲಿಗೆ ಸದಾ ಸಿಂಹಸ್ವಪ್ನ! ಹಾಗೂ ಒಟ್ಟಾರೆಯಾಗಿ ಮಹಾ ಮಾನವತಾವಾದಿ ಎನ್ನಲಿಕ್ಕೆ ಅವರು ದಿಡ್ಡಳ್ಳಿ ಹೋರಾಟದಲ್ಲಿ ತಮ್ಮನ್ನು ಅತ್ಯಂತ ಗಾಡವಾಗಿ ತೊಡಗಿಸಿಕೊಂಡಿದ್ದೇ ಉದಾಹರಣೆ..!

 ಇನ್ನೂ ಅನೇಕ ವಿಷಯಗಳಿವೆ.. ಮುಂದೊಮ್ಮೆ ಸುಬ್ಬಯ್ಯನವರ ಬಗ್ಗೆ ವಿವರವಾಗಿ ಬರೆಯಬೇಕು...