ನದಿಗಳು ಶಾಂತವಾಗಿದ್ದರೂ ಕೃಷಿ ಭೂಮಿಯಿಂದ ಸರಿಯುತ್ತಿಲ್ಲ ಪ್ರವಾಹದ ನೀರು 

ನದಿಗಳು ಶಾಂತವಾಗಿದ್ದರೂ ಕೃಷಿ ಭೂಮಿಯಿಂದ ಸರಿಯುತ್ತಿಲ್ಲ ಪ್ರವಾಹದ ನೀರು 

ಕೃಷ್ಣ, ಘಟಪ್ರಭಾ ನದಿಗಳು ಶಾಂತವಾಗಿ ಸಂತ್ರಸ್ತರು ಗ್ರಾಮಗಳಿಗೆ ವಾಪಸಾಗುತ್ತಿದ್ದರೂ ಬೆಟ್ಟದಂತಿರುವ ಸಮಸ್ಯೆಗಳು ಎದುರಾಗಿವೆ. ಸರ್ಕಾರ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ನೂರಾರು ಕುಟುಂಬಗಳು ತಮಗೆ ಸಂಬಂಧಿಸಿದ ದಾಖಲೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಪರದಾದಾಡುತ್ತಿದ್ದಾರೆ ಎಂದು  ಲಕ್ಷ್ಮೀ ಮ ಕುಂಬಾರ ವರದಿ ಮಾಡಿದ್ದಾರೆ.

ಬಾಗಲಕೋಟೆ: ತಿಂಗಳಿಂದ ಶಾಲಾ, ಕಾಲೇಜುಗಳಲ್ಲಿ, ಗಂಜಿ ಕೇಂದ್ರಗಳಲ್ಲಿದ್ದ ನೆರೆ ಸಂತ್ರಸ್ಥರು  ಇದೀಗ ಕೃಷ್ಣ, ಘಟಪ್ರಭಾ ನದಿಗಳೆರಡು ಶಾಂತವಾಗಿ ಹರಿಯುತ್ತಿರುವುದರಿಂದ ಗ್ರಾಮಗಳತ್ತ  ವಾಪಸಾಗುತ್ತಿದ್ದಾರೆ. .  

ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ರೈತನ ಜಮೀನು ಸೇರಿದಂತೆ ಜನ-ಜಾನುವಾರಗಳು, ನೀರಲ್ಲಿ ಮುಳುಗಿದ್ದವು. ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಸುತ್ತ-ಮುತ್ತಲಿನ ಗ್ರಾಮಗಳಾದ ಜಿರಗಾಳ, ಮುದ್ದಾಪುರ, ಹೆಬ್ಬಾಳ, ಪೆಟ್ಲೂರು, ಅಮಲಝರಿ, ಕಾತರಕಿ, ಯಡಳ್ಳಿ, ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳು ತೆರೆದಿದ್ದು, ವಾಹನ ಸಂಚಾರ ಪ್ರಾರಂಭವಾಗಿದೆ. ಇದೀಗ ನೀರಿನ ಪ್ರಮಾಣ ಇಳಿದಿದ್ದು, ಗ್ರಾಮಗಳಿಗೆ ನೆರೆ ಸಂತ್ರಸ್ಥರು ಮರಳಿದ್ದಾರೆ. ಆದರೆ, ಗ್ರಾಮಗಳಲ್ಲಿಗ ಸ್ಮಶಾನ ಮೌನ ಆವರಿಸಿದೆ.  ಪ್ರವಾಹದ ನೀರಿನಲ್ಲಿ ನೆನೆದ ಮನೆಗಳು ನೆಲ ಕಚ್ಚಿದ್ದು, ಸಾಮಾನುಗಳೆಲ್ಲ ಸಂಪೂರ್ಣ ನಾಶವಾಗಿ ನೆಲೆ ಕಳೆದುಕೊಂಡ ದೃಶ್ಯ ಒಂದೆಡೆಯಾದರೆ, ಇನ್ನೊಂದೆಡೆ ಬದುಕಿಗೆ ಆಸರೆಯಾಗಿದ್ದ ಬೆಳೆಗಳು, ಕೃಷಿ ಭೂಮಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ರೈತ ಬೆಳೆದ ಕಬ್ಬು, ಈರುಳ್ಳಿ, ಹೆಸರು, ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣವಾಗಿ ಕೊಳೆತು ನಾಶವಾಗಿದೆ. ಫಲವತ್ತಾಗಿ ಬೆಳೆದ ಕಬ್ಬು ಕೂಡ ಕಟಾವಿಗ ಬರುವ ಮುನ್ನವೇ ಪ್ರಕೃತಿ ವಿಕೋಪಕ್ಕೆ ಸಿಕ್ಕು, ರೈತರಿಗೆ ಭಾರೀ ನಷ್ಟ ಉಂಟುಮಾಡಿದೆ.   
 
ಪ್ರವಾಹವೇನೋ ಕಮ್ಮಿ ಆಯ್ತು, ಆದರೆ, ಪ್ರವಾಹದಿಂದ ತಗ್ಗು ಪ್ರದೇಶಗಳಲ್ಲಿ ನುಗ್ಗಿದ ನೀರು ಮಾತ್ರ ಇನ್ನೂ ಹಾಗೇ ಇದೆ. ನಿಧಾನವಾಗಿ ಸರಿಯುತ್ತಿರುವ ನೀರಿನಿಂದ ಬೆಳೆಗಳು ಸಂಪೂರ್ಣ ಕೊಳೆತು, ಗಬ್ಬು ವಾಸನೆ ಹರಡುತ್ತಿದೆ. ಕಬ್ಬು ಬೆಳೆ ನದಿ ನೀರಲ್ಲಿ ಕೊಳೆತು ಹೋಗಿದೆ, ಈರುಳ್ಳಿ ಬೆಳೆಗಳು ಗುರುತಿಗೂ ಸಿಗದೇ ಹಾಗೇ ನೀರಲ್ಲಿ ಮಾಯವಾಗಿದ್ದು, ಕೃಷಿ ಭೂಮಿಯೀಗ ಕೆಸರು ಗದ್ದೆಯಾಗಿದೆ.  ನೀರಿನ ರಭಸದಿಂದಾಗಿ ಗ್ರಾಮಕ್ಕೆ ಮುಳ್ಳು ಕಂಬಿಗಳು, ಪ್ಲಾಸ್ಟಿಕ್ ಕಸ ಬಂದು ರಾಶಿ-ರಾಶಿಯಾಗಿ ಸಂಗ್ರಹವಾಗಿದ್ದು, ಕೊಳೆತ ವಾಸನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ವಿಪರ್ಯಾಸ ಎಂದರೆ, ಸರ್ಕಾರದಿಂದ ಅಲ್ಪ ಪ್ರಮಾಣದ ಪರಿಹಾರವೇನೋ ಹರಿದು ಬಂತು ಆದರೆ, ಅದನ್ನು ಪಡೆಯಲು ಸಹ ಸಂತ್ರಸ್ಥರಲ್ಲಿ ಯಾವುದೇ ರೀತಿಯ ಕಾಗದ ಪತ್ರಗಳು ಇಲ್ಲ. ಎಲ್ಲವೂ ನೀರಲ್ಲಿ ಕೊಚ್ಚಿ ಹೋಗಿದೆ. ಇದೀಗ ನೆಲೆ ಕಳೆದುಕೊಂಡವರಿಗೆ, ಜನ-ಜಾನುವಾರಿನ ಹಾನಿಗೆ 5 ಲಕ್ಷ ರೂಪಾಯಿ ವರೆಗೂ ಪರಿಹಾರ  ನೀಡಿದ್ದು, ಸಂತ್ರಸ್ಥರ ವಾಸಕ್ಕಾಗಿ ಸರ್ಕಾರ ತಾತ್ಕಾಲಿಕ ಶೆಡ್ ನಿರ್ಮಿಸಿದೆ.