ಮೀಸಲಾತಿ ವಿರುದ್ಧದ ಅಸಹನೆಗೆ ಕೊನೆ ಎಂದು?

ಮೀಸಲಾತಿ ವಿರುದ್ಧದ ಅಸಹನೆಗೆ ಕೊನೆ ಎಂದು?

ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರ ಹಿತ ಬಯಸುವ ಎಲ್ಲರಿಗೂ ಸಮಾನ ಹಕ್ಕು ನೀಡುವ ನಮ್ಮ ಸಂವಿಧಾನದ ಬಗೆಗೆ ಸಂಘಪರಿವಾರಕ್ಕೆ ಎಲ್ಲಿಲ್ಲದ ಅತೃಪ್ತಿ, ಆಕ್ರೋಶ ಆಗಿಂದಾಗ್ಗೆ ವ್ಯಕ್ತವಾಗುತ್ತಿರುತ್ತದೆ. ಅದೇ ರೀತಿ ಮೀಸಲಾತಿಯ ಬಗೆಗೂ ಕೂಡ. ಮೀಸಲಾತಿಯ ವಿರುದ್ಧದ ದನಿ ಮತ್ತು ಹೋರಾಟ ಇಂದಿನದಲ್ಲ. ಮೀಸಲಾತಿ ಜಾರಿಗೆ ಬಂದಾಗಿನಿಂದಲೂ ಆ ವ್ಯವಸ್ಥೆಯ ವಿರುದ್ಧ ಬೀದಿ ಹೋರಾಟ ಮತ್ತು ಚರ್ಚೆಗಳು ನಡೆಯುತ್ತಾ ಬಂದಿವೆ.

ಇದೀಗ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಮೀಸಲಾತಿಯ ಪರ ಮತ್ತು ವಿರುದ್ಧ ಇರುವವರು ಈ ವಿಷಯವಾಗಿ ಸೌಹಾರ್ದಯುತವಾಗಿ ಮತ್ತೆ ಚರ್ಚೆ ನಡೆಸಬೇಕು” ಎಂದು ಹುಕುಂ ಹೊರಡಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಶೇ. 18ರಷ್ಟಿದ್ದ ಮೀಸಲಾತಿ 1993ರ ನಂತರ ಹಿಂದುಳಿದವರಿಗೂ ಮಂಡಲ್ ಆಯೋಗದ ಪ್ರಕಾರ ಶೇ. 27ರಷ್ಟು ಮೀಸಲಾತಿ ಬಂದಿತು. ಮೀಸಲಾತಿ ಶೇ. 50ರಷ್ಟು ಮೀರಬಾರದೆಂದು ಸುಪ್ರೀಂ ಕೋರ್ಟ್ ಅದಕ್ಕೊಂದು ಮಿತಿ ಹಾಕಿತು. ಆದರೂ ತಮಿಳುನಾಡಿನಲ್ಲಿ ಶೇ 71 ಮತ್ತು ಈಗ ಛತ್ತೀಸ್ ಗಢದಲ್ಲಿ ಶೇ 72ಕ್ಕೆ ಹೆಚ್ಚಿಸಲಾಗಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕವಾಗಿ ಹಿಂದುಳಿದವರಿಗೆಂದು ಶೇ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದ್ದಾರೆ. ಈ ಎಲ್ಲ ಮೀಸಲಾತಿಯನ್ನು ಗಮನಿಸಿದರೆ ಮೀಸಲಾತಿ ಇಲ್ಲದ ಜಾತಿಗಳನ್ನು ಈಗ ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ವಾಸ್ತವ ಸ್ಥಿತಿ ಹೀಗಿದ್ದರೂ ಮೀಸಲಾತಿಯ ವಿರೋಧಿ ಭಾವನೆ ಮಾತ್ರ ಹಲವು ಜಾತಿಗಳಲ್ಲಿ ಹೋಗಿಲ್ಲ. ಮೀಸಲಾತಿ ಪಡೆಯುತ್ತಿರುವವರೂ ಕೂಡ ಮೀಸಲಾತಿ ಎಂದರೆ ಅದು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಎಂದು ಆತ್ಮವಂಚನೆ ಮಾಡಿಕೊಂಡು ವಾದಿಸುವವರಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಜಾತಿಯ ಜನರಿಗೆ ಸಂವಿಧಾನ ಜಾರಿಗೆ ಬಂದಾಗಿನಿಂದಲೂ ಮೀಸಲಾತಿ ಸೌಲಭ್ಯ ಹೆಸರಿಗೆ ಮತ್ತು ಸರ್ಕಾರದ ಕಡತಗಳಲ್ಲಿ ಮಾತ್ರ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪಮಟ್ಟಿಗೆ ಜಾರಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಮೀಸಲಾತಿಯು ಅನೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಶಿಕ್ಷಿತರನ್ನಾಗಿ ಮಾಡಿದೆ. ಹಾಗೆಯೇ ಅಂತಹವರಿಗಾಗಿ ಸರ್ಕಾರಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.  

ಈ ಮೀಸಲಾತಿ ಸೌಲಭ್ಯ ಪಡೆದು ಕೆಲವರು ಆರ್ಥಿಕವಾಗಿ ಮುಂದೆ ಬಂದಿರುವ ಸಂಗತಿಯನ್ನೂ ತಳ್ಳಿಹಾಕುವಂತಿಲ್ಲ. ಬೆರಳೆಣಿಕೆಯಷ್ಟು ಮಂದಿ ಮೀಸಲಾತಿಯಿಂದ ಬೇರೆ ಜಾತಿಗಳವರ ಸಮಕ್ಕೆ ಬಂದಿರುವ ಹಾಗು ಅವರ ಕಣ್ಣು ಕುಕ್ಕುವಷ್ಟು ಮುಂದುವರಿದಿರುವ ಸತ್ಯವನ್ನೂ ಅಲ್ಲಗಳೆಯಲಾಗದು. ಇದೇ ಈಗ ಸಮಸ್ಯೆಯಾಗಿರುವುದು. ಮೀಸಲಾತಿಯಿಂದ ಮೇಲೆ ಬಂದಿರುವವರ ಮಕ್ಕಳಿಗೆ ಮೀಸಲಾತಿ ಇರಕೂಡದು ಎನ್ನುವ ವಾದವೂ ಇದೆ. ಬಹುತೇಕವಾಗಿ ಇದು ಒಪ್ಪಬಹುದಾದ ಮಾತು. ಆದರೆ ಮೀಸಲಾತಿ ಸೌಲಭ್ಯದ ಹಂಚಿಕೆಯ ಒಳಹೊಕ್ಕಿದರೆ ಇದೊಂದು ಭ್ರಮೆಯನ್ನು ಸೃಷ್ಟಿಸಿರುವ ಸತ್ಯಾಸತ್ಯತೆ ಅನಾವರಣಗೊಳ್ಳುತ್ತದೆ.

ಆದ್ದರಿಂದ ಮೀಸಲಾತಿಯ ಪುನರ್ ವಿಮರ್ಶೆ ಅದರ ಪುನರಾವಲೋಕನ ಮಾಡಬೇಕೆಂದು ಬಯಸುವವರು ಮೀಸಲಾತಿ ಎನ್ನುವುದು ಸರ್ಕಾರದಲ್ಲಿ ಎಷ್ಟರ ಮಟ್ಟಿಗೆ ಜಾರಿಗೆ ಬಂದಿದೆ ಎನ್ನುವ ಸತ್ಯವನ್ನೂ ತಿಳಿಯುವ ದೊಡ್ಡ ಮನಸ್ಸು ಮಾಡಬೇಕಿದೆ. ದಿನ ಬೆಳಿಗ್ಗೆ ಮೀಸಲಾತಿಯ ಜಪ ಮಾಡುವ ಕೆಲವು ಪರಿಶಿಷ್ಟ ಜಾತಿಯ ಯುವಕರು ಕನಸಿನಲ್ಲೂ ಮೀಸಲಾತಿ ಎಂದರೆ ಬೆಚ್ಚಿ ಬೀಳುವವರಿದ್ದಾರೆ. ಈ ಬೆಚ್ಚಿ ಬೀಳುವ ಮಂದಿ ಈ ಆತಂಕದಿಂದ ಹೊರಬರಬೇಕಿದೆ. ಪ್ರತಿಭೆ ಈಗ ಯಾರ ಸ್ವತ್ತೂ ಅಲ್ಲ. ಪರಿಶಿಷ್ಟ ಜಾತಿಯಿಂದ ಬಂದಿರುವ ಅನೇಕ ಯುವಕರು ಮೀಸಲಾತಿಯ ಹಂಗು ಇಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವರಿದ್ದಾರೆ. ಇಂತಹ ಪ್ರತಿಭೆಗಳು ಈಗ ಪರಿಶಿಷ್ಟ ಜಾತಿಯಲ್ಲಿ ಹೆಚ್ಚಬೇಕಾಗಿದೆ. ಅವರು ತಮ್ಮ ಇತರೆ ಸಹೋದರರಿಗೆ ಮಾದರಿಯಾಗಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಐಎಎಸ್ ಪರೀಕ್ಷೆಗಳಲ್ಲಿ ಮೊದಲ ರ್ಯಾಂಕ್ ಪಡೆದವರೂ ಪರಿಶಿಷ್ಟ ಜಾತಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಎನ್ನುವುದನ್ನು ಮೀಸಲಾತಿ ವಿರೋಧಿಸುವ ಮನಸ್ಸುಗಳು ಗಮನಿಸಬೇಕಿದೆ.

1990ರ ದಶಕದ ಆರಂಭದಿಂದ ಜಾರಿಗೆ ಬಂದ ಮುಕ್ತ ಆರ್ಥಿಕ ನೀತಿಯಿಂದ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಬಂದ್ ಆದವು. ಖಾಸಗೀಕರಣ ಎಲ್ಲ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿ ಬಂದಿತು. ಅಲ್ಲಿ ಉದ್ಯೋಗಾವಕಾಶಗಳು ತಪ್ಪಿದವು. ಕೇಂದ್ರ ಸರ್ಕಾರವಿರಲಿ ರಾಜ್ಯ ಸರ್ಕಾರವಿರಲಿ ವರ್ಷ ವರ್ಷವೂ ಖಾಲಿ ಆಗುತ್ತಿರುವ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿಲ್ಲ. ಇತ್ತ ಸಿಬ್ಬಂದಿಯ ನೇಮಕದಲ್ಲಿ ಗುತ್ತಿಗೆ, ತಾತ್ಕಾಲಿಕ ಮತ್ತು ಈಗ ಹೊರಗುತ್ತಿಗೆ ಹೀಗೆ ಹಲವು ರೀತಿಯಲ್ಲಿ ಸರ್ಕಾರಗಳು ನಡೆಯುತ್ತಿವೆ. ಈ ರೀತಿಯ ನೇಮಕದಲ್ಲಿ ಮೀಸಲಾತಿ ಎನ್ನುವುದಿಲ್ಲ. ಹೀಗಾಗಿ ಮೀಸಲಾತಿ ಹುದ್ದೆಗಳ ನೇಮಕ ಈಗ ಕೇವಲ ಬಿಸಿಲ್ಗುದುರೆಯಾಗಿದೆ. ಸರ್ಕಾರದಲ್ಲಿ ಹುದ್ದೆಗಳೇ ಬರಿದಾಗುತ್ತಾ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿವೆ. ಇದರಿಂದ ಮೀಸಲಾತಿಯನ್ನೇ ನಂಬಿದ ಪರಿಶಿಷ್ಟ ಜಾತಿ ಯುವಕರು ಕೆಲಸವಿಲ್ಲದೆ ಅಲೆಯುವಂತಾಗಿರುವ ವಾಸ್ತವವನ್ನೂ ಅರಿಯಬೇಕಿದೆ.

ಮೀಸಲಾತಿಯ ಹಿನ್ನೆಲೆ: ದೇಶದಲ್ಲಿ ಹಿಂದೂ ವರ್ಣವ್ಯವಸ್ಥೆ ಬಂದು ಸಾವಿರಾರು ವರ್ಷಗಳಾಗಿವೆ. ಈ ವರ್ಣ ವ್ಯವಸ್ಥೆಯೇ ಮೀಸಲಾತಿಯ ಮೂಲ. ಬ್ರಾಹ್ಮಣರು ಪೂಜೆ ಪುನಸ್ಕಾರ ಮಾಡಿಕೊಂಡೇ ಮೇಲ್ ಸ್ತರದಲ್ಲಿದ್ದಾರೆ. ನಂತರ ಕ್ಷತ್ರಿಯರು ರಾಜಮಹಾರಾಜರಾಗಿ ಯುದ್ಧ ಮಾಡಿಕೊಂಡು ಬಂದವರು. ವೈಶ್ಯರು ವ್ಯಾಪಾರ ವಹಿವಾಟು ನಡೆಸಿಕೊಂಡು ಹಣಗಳಿಕೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಶೂದ್ರ ವರ್ಗ ಶ್ರಮಪಟ್ಟು ದುಡಿಯುವುದು. ಕೊನೆಯದಾಗಿ ಪಂಚಮರು. ಈ ನಾಲ್ಕೂ ವರ್ಗಗಳ ವ್ಯಾಪ್ತಿಯಲ್ಲಿ ಬಾರದೆ ಊರ ಹೊರಗೆ ಇದ್ದುಕೊಂಡು ಊರನ್ನು ಸ್ವಚ್ಛಗೊಳಿಸುವುದು, ಪ್ರಾಣಿಗಳು ಸತ್ತರೆ ಅವುಗಳನ್ನು ಊರ ಹೊರಗೆ ಸಾಗಿಸುವುದು. ಊರಿನ ಒಳಗೆ ಇರುವ ಜನರಿಂದ ದೂರ ಇದ್ದು ಅವರ ಎಲ್ಲ ಸೇವೆಗಳನ್ನು ಮಾಡಿಕೊಂಡಿರುವುದು. ಇದು ಹಿಂದೂ ಧರ್ಮದಲ್ಲಿ ಜಾರಿಗೆ ಬಂದ ಮೀಸಲಾತಿ ವ್ಯವಸ್ಥೆ.

ಈ ವ್ಯವಸ್ಥೆ ಇನ್ನೂ ಕಣ್ಣಿಗೆ ಕಾಣುವಂತೆ ಮತ್ತು ಕಾಣದಂತೆಯೂ ಜೀವಂತವಾಗಿರುವುದು ಸುಳ್ಳಲ್ಲ. ಸಾವಿರಾರು ವರ್ಷಗಳಿಂದ ಜಾರಿಗೆ ಬಂದ ಈ ವ್ಯವಸ್ಥೆಯಿಂದ ಸಮಾಜದಲ್ಲಿ ಅಸ್ಪೃಶ್ಯರಾಗಿ ಅಂದರೆ ಈಗಿನ ಪರಿಶಿಷ್ಟ ಜಾತಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ವಂಚಿತರಾಗಿ ಹಿಂದುಳಿಯುವಂತಾದದ್ದು ನಮಗೆಲ್ಲ ತಿಳಿದಿರುವುದು ಸತ್ಯ ಸಂಗತಿ. ಧಾರ್ಮಿಕವಾಗಿ ಜೀವಂತವಾಗಿರುವ ಈ ಮೀಸಲಾತಿಯನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಹಿಂದೂ ಧರ್ಮದ ಆಚರಣೆ ಪ್ರಕಾರ ಇದು ಹುಟ್ಟಿನಿಂದ ಬಂದ ಫಲ ಎನ್ನುವ ವಾದ. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅಂಟಿರುವ ಅಸ್ಪೃಶ್ಯತೆ ಎನ್ನುವುದು ಅವರ ಪೂರ್ವ ಜನ್ಮದ ಕರ್ಮ ಎನ್ನುವ ಮೌಢ್ಯವನ್ನು ಬಿತ್ತಲಾಗಿದೆ. ಈ ಕರ್ಮ ಸಿದ್ಧಾಂತವನ್ನು ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದಂತೆ ತುಂಬಲಾಗಿದೆ. 

ಈ ಕರ್ಮಸಿದ್ಧಾಂತವೇ ಈ ಎಲ್ಲ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ ಎನ್ನುವುದನ್ನು ಪರಿಶಿಷ್ಟೇತರ ಜನರು ಒಪ್ಪುವುದಿಲ್ಲ. ಈ ಅಸಮಾನತೆ ಹೋಗಬೇಕೆಂದು ಸನಾತನ ಧರ್ಮವನ್ನು ನಂಬಿದವರಾರೂ ಹೇಳಲು ಹೋಗುವುದಿಲ್ಲ. ಇಂತಹ ಅಸಮಾನತೆಯ  ಈ ಸಮಾಜದಲ್ಲಿರುವ ಈ ತಾರತಮ್ಯವನ್ನು ಹೋಗಲಾಡಿಸಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಬರಬೇಕಾಯಿತು. ಸಂವಿಧಾನವನ್ನು ಸಿದ್ಧಪಡಿಸುವ ಮುಖ್ಯ ಹೊಣೆಗಾರಿಕೆ ಅವರಿಗೆ ಸಿಕ್ಕಿದ್ದರಿಂದ ತಳಸಮುದಾಯವನ್ನು ಮೇಲೆತ್ತುವ ಸಮಾಜದಲ್ಲಿ ಸಮಾನತೆ ತರುವ ದಿಟ್ಟ ಮತ್ತು ಪ್ರಾಮಾಣಿಕ ಹೋರಾಟದಿಂದ ಪರಿಶಿಷ್ಟ ಜನರ ವಿಮೋಚನೆಯ ಹೊಸ ಹಾದಿ ತೆರೆದುಕೊಂಡಿತು.

ಈಗಿರುವ ಸಂವಿಧಾನಬದ್ಧ ಮೀಸಲಾತಿ ಕೊನೆಯಾಗಬೇಕು ಎಂದು ಯಾರಾದರೂ ಹೇಳಿದರೆ ತಕ್ಷಣವೇ ಪರಿಶಿಷ್ಟ ಜಾತಿಯ ಯುವಕರು ಅಧೀರರಾಗುತ್ತಾರೆ. ಆತಂಕ ಅವರನ್ನು ಕಾಡುತ್ತದೆ. ಮೀಸಲಾತಿ ವ್ಯವಸ್ಥೆ ಹೋದರೆ ನಮ್ಮ ಸ್ಥಿತಿಗತಿ ಮುಂದೇನಾಗುವುದೋ ಎನ್ನುವ ಕಳವಳ ಅವರನ್ನು ಕಾಡುತ್ತದೆ. ಇದು ಒಂದು ರೀತಿಯಲ್ಲಿ ಅವರನ್ನು ಬೆಚ್ಚಿಬೀಳಿಸುತ್ತದೆ. ಹಾಗೆಯೇ ಮೀಸಲಾತಿ ಯಾಕೆ ರದ್ದು ಮಾಡಬೇಕು ಎಂದು ಮೀಸಲಾತಿ ಹೋಗಬೇಕೆನ್ನುವವರನ್ನು ಕೇಳಿದರೆ ನೇರವಾಗಿ ಎದೆಗೆ ತಟ್ಟುವ ಪ್ರಶ್ನೆ “ಬೇರೆ ಜಾತಿಗಳಲ್ಲಿ ಬಡವರಿಲ್ಲವೇ? ಎಷ್ಟು ವರ್ಷ ಈ ಮೀಸಲಾತಿ ಇರಬೇಕು? ಮೀಸಲಾತಿಯಿಂದ ಪ್ರತಿಭೆ ಮತ್ತು ಅರ್ಹತೆಗೆ ಅನ್ಯಾಯವಾಗುತ್ತಿದೆ” ಎನ್ನುವ ಪ್ರಶ್ನೆ ಎದುರಾಗುತ್ತದೆ.

ಈ ಪ್ರಶ್ನೆಗಳನ್ನು ಎದುರಿಸಲು ಬಹುತೇಕ ಪರಿಶಿಷ್ಟ ಜಾತಿಯ ಬಹುತೇಕ ಯುವಕರು ತಡವರಿಸುತ್ತಾರೆ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಯಿಂದಾಗಿರುವ ಅನ್ಯಾಯವನ್ನು ಸರಿಪಡಿಸಲು ಇಂತಹದೊಂದು ಸಂವಿಧಾನ ಬದ್ಧ ಕ್ರಮ ಅವಶ್ಯ ಎನ್ನುವ ಅರಿವು ಈ ತಳಸಮುದಾಯದ ಯುವಕರಲ್ಲಿ ಬರಬೇಕಿದೆ.

ಸಂವಿಧಾನದ ಕರ್ತೃ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ ಮೀಸಲಾತಿ ಎನ್ನುವುದು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ನೀಡುವ ಪ್ರಾತಿನಿಧ್ಯ. ಈ ಪ್ರಾತಿನಿಧ್ಯ ಎನ್ನುವುದು ಯಾವುದೇ ಒಂದು ವ್ಯಕ್ತಿಗೆ ನೀಡಿದ ಸ್ಥಾನಮಾನವಲ್ಲ. ಸಮಾಜದಲ್ಲಿ ಸಮಾನತೆಯ ಅವಕಾಶದಿಂದ ವಂಚಿತರಾದ ಜಾತಿಯ ಜನರ ಅಭಿವೃದ್ಧಿಯಾಗಲಿ ಎಂದು ಸಂವಿಧಾನ ಬದ್ಧವಾಗಿ ನೀಡಿರುವ ವಿಶೇಷ ಅವಕಾಶ. ಒಂದು ನಾಗರಿಕ ಸಮಾಜದ ಸರ್ಕಾರ ಮಾಡುವ ಕೆಲಸ ಇದು. ಒಬ್ಬ ವ್ಯಕ್ತಿಯ ದೇಹದ ಒಂದು ಭಾಗ ಊನವಾಗಿದ್ದರೆ ಆತ ಅಂಗವಿಕಲ. ಅಸಮಾನತೆಯಿಂದ ಭಾರತ ಕೂಡ ಸಾವಿರಾರು ವರ್ಷಗಳಿಂದ ಊನವಾಗಿದೆ. ಹೀಗಾಗಿ ದೇಶ ಆರೋಗ್ಯ ಪೂರ್ಣವಾಗಿದೆ ಎಂದು ಹೇಳಲಾಗದು. ತನ್ನ ದೇಹದಲ್ಲಾಗಿರುವ ಗಾಯವನ್ನು ವಾಸಿಮಾಡಿಕೊಂಡು ಸದೃಢ ಮತ್ತು ಆರೋಗ್ಯವಾಗಿರಬೇಕಾಗಿರುವುದು ಆ ಸಮಾಜದ ಕರ್ತವ್ಯ. ಹೀಗಿದ್ದರೂ ಮೀಸಲಾತಿಯ ಬಗೆಗೆ ಚರ್ಚೆ ನಡೆಯಬೇಕೆನ್ನುವ ಮನಸ್ಥಿತಿಯವರು ದೇಶದಲ್ಲಿ ನಡೆದು ಬಂದ ಸಾಮಾಜಿಕ ಸ್ಥಿತಿಗತಿಯನ್ನೂ ಅವಲೋಕನ ಮಾಡಬೇಕಿದೆ.

ಬಿಜೆಪಿ ಮತ್ತು ಸಂಘ ಪರಿವಾರದಿಂದ ಪದೇ ಪದೇ ಸಂವಿಧಾನ ಮತ್ತು ಮೀಸಲಾತಿ ವಿರುದ್ಧದ ಈ ಅಸಹನೆಗೆ ಕೊನೆ ಎಂದು ???