ಭರತನಾಟ್ಯ ಪ್ರವೀಣೆ ಶ್ರೀಲೀಲಾರ ಮೊದಲ ಕಿಸ್!

ಭರತನಾಟ್ಯ ಪ್ರವೀಣೆ ಶ್ರೀಲೀಲಾರ ಮೊದಲ ಕಿಸ್!

ಕೆಲವರಿಗೆ ಅಂದುಕೊಂಡ ಗುರಿ ತಲುಪೋದಕ್ಕೆ ಅದೆಷ್ಟೋ ವರ್ಷಗಳ ತಪಸ್ಸನ್ನೇ ಮಾಡಬೇಕಾಗುತ್ತದೆ. ಮತ್ತೆ ಕೆಲವರು ಬಯಸದೆಯೇ ಅವಕಾಶವೆಂಬುದು ಕದ ಬಡಿದು ತೆಕ್ಕೆಗೆ ತೆಗೆದುಕೊಲ್ಳುತ್ತದೆ. ಕಿಸ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಶ್ರೀಲೀಲಾ ಅವರು ಎರಡನೇ ಸಾಲಿಗೆ ಸೇರೋ ಅದೃಷ್ಟವಂತೆ. ಭರತನಾಟ್ಯ ಪಾರಂಗತೆಯಾದ ಶ್ರೀಲೀಲಾ ಪಾಲಿಗಿದು ನಿಜಕ್ಕೂ ಬಯಸದೇ ಬಂದ ಭಾಗ್ಯ. ಮಡಿವಂತಿಕೆಯ ಮನೆ ವಾತಾವರಣದಲ್ಲಿ ನಟಿಯಾಗುವಂಥಾ ಕನಸನ್ನೂ ಕಾಣದ ಶ್ರೀಲೀಲಾಗೆ ಕಿಸ್ ಮೂಲಕ ಭರ್ಜರಿ ಎಂಟ್ರಿಯೇ ಸಿಕ್ಕಿದೆ. ಅದುವೇ ಭರಾಟೆಯ ಅವಕಾಶವನ್ನೂ ಕೊಡಿಸಿದೆ!

ಸಿನಿಮಾ ಬಗ್ಗೆ ಹೇಳಿಕೊಳ್ಳುವಂಥಾ ಕನಸಿಟ್ಟುಕೊಳ್ಳದಿದ್ದ ಶ್ರೀಲೀಲಾ ಕಿಸ್ ಕಥೆಯ ಬಗ್ಗೆ ಭಾರೀ ಭರವಸೆ ಹೊಂದಿದ್ದಾರೆ. ಇಡೀ ಸಿನಿಮಾ ಹೊಸಾ ಥರದಲ್ಲಿ, ಹೊಸಾ ಆವೇಗದಲ್ಲಿ ಮೂಡಿ ಬಂದಿದೆ ಎಂಬ ನಂಬಿಕೆಯೂ ಅವರಲ್ಲಿದೆ. ಇದು ಬಯಸದೇ ಬಂದ ಭಾಗ್ಯವಾದರೂ ಚಿತ್ರೀಕರಣದ ಹಂತದಲ್ಲಿ ಸಿಕ್ಕ ಅನುಭವಗಳ ಮೂಲಕವೇ ಶ್ರೀಲೀಲಾ ಈಗ ಪರಿಪೂರ್ಣ ನಟಿಯಾಗಿ ರೂಪುಗೊಂಡಿದ್ದಾರೆ. ನಿರ್ದೇಶಕ ಎ ಪಿ ಅರ್ಜುನ್ ಪ್ರತೀ ಹಂತದಲ್ಲಿಯೂ ಸಣ್ಣ ಸಣ್ಣ ವಿಚಾರಗಳನ್ನೂ ಗಂಭೀರವಾಗಿ ಪರಿಗಣಿಸಿ ಮುಂದುವರೆಯೋದನ್ನು ಕಲಿಸಿಕೊಟ್ಟಿದ್ದಾರೆ. ಅದೆಲ್ಲವನ್ನು ಮನನ ಮಾಡಿಕೊಂಡಿರೋ ಶ್ರೀಲೀಲಾಗೆ ಕಿಸ್ ನಿರ್ಣಾಯಕ ಬ್ರೇಕ್ ನೀಡೋ ಭರವಸೆಯಿದೆ.

ಮಜವಾದ ಸಂಗತಿಯೆಂದರೆ, ಕಿಸ್ ಎಂಬ ಟೈಟಲ್ ಕೇಳಿ ಶ್ರೀಲೀಲಾ ಕೂಡಾ ಕಥೆಯೇನಿರುತ್ತದೋ ಅಂತ ಧಾವಂತಕ್ಕೀಡಾಗಿದ್ದರಂತೆ. ಆದರೆ ಕಥೆ ಕೇಳಿದ ನಂತರದಲ್ಲಿ ತಾವೇ ನಾಯಕಿ ಪಾತ್ರಕ್ಕೆ ಜೀವ ತುಂಬಿದ ಬಳಿಕ ಪರಿಶುದ್ಧವಾದ ಪ್ರೇಮ ಕಥಾನಕ ಅವರ ಮನಸನ್ನೂ ಆವರಿಸಿಕೊಂಡಿದೆ. ಕಿಸ್ ಚಿತ್ರ ಪ್ರೇಕ್ಷಕರನ್ನು ಯಾವ ಹಂತದಲ್ಲಿಯೂ ಮುಜುಗರಕ್ಕೀಡು ಮಾಡದ ಪರಿಶುದ್ಧ ಪ್ರೇಮ್ ಕಹಾನಿ. ಕೇವಲ ಯುವ ಸಮುದಾಯಕ್ಕೆ ಮಾತ್ರವೇ ಈ ಸಿನಿಮಾ ಇಷ್ಟವಾಗುತ್ತೆ ಅಂದುಕೊಳ್ಳಬೇಕಿಲ್ಲ. ಅದ್ಯಾವ ವಯೋಮಾನದವರೇ ಆದರ್ರೂ ಕಿಸ್ ಮನಸಿಗೆ ತಾಕುವಂತೆ ಮೂಡಿ ಬಂದಿದೆ. ಇದರ ನಿಜವಾದ ಕಮಾಲ್ ಏನನ್ನೋದು ಇದೇ ತಿಂಗಳ 27ರಂದು ಜಾಹೀರಾಗಲಿದೆ.