ಗೆದ್ದಾಗ ದೇಶ, ಸೋತಾಗ ಪರದೇಶ

ಗೆದ್ದಾಗ ದೇಶ, ಸೋತಾಗ ಪರದೇಶ

ಒಂದರ ಹಿಂದೊಂದರಂತೆ ಪ್ಲಾಪ್ ಆದಾಗ ಅನ್ಯ ದೇಶದ ನಾಗರಿಕತ್ವ ಪಡೆದು, ಒಂದಾದ ಮೇಲೊಂದು ಸಕ್ಸಸ್ ಆಗುತ್ತಿದ್ದಾಗ ಮರಳಿ ಭಾರತದ ಪೌರತ್ವ ಪಡೆಯುವುದಕ್ಕೆ ಹೊರಟಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಎದುರಾಗಿವೆ.

ಚುನಾವಣಾ ಸಂದರ್ಭದಲ್ಲಿ ಯಾರಿಗೂ ಸಿಗದ ಪ್ರಧಾನಿ ನರೇಂದ್ರ ಮೋದಿಯವರನ್ನ ಸಂದರ್ಶನ ಮಾಡಿದ್ದಾಗಲೇ ಅಕ್ಷಯ್ ಕುಮಾರ್ ಬಗ್ಗೆ ವ್ಯಂಗ್ಯದ ಮಾತುಗಳು ಉದುರಿದ್ದವು. ಸತತವಾಗಿ ಇವರ 14 ಸಿನಿಮಾಗಳು ನೆಲಕಚ್ಚಿದ್ದರಿಂದಾಗಿ ಬಾಲಿವುಡ್ ನಲ್ಲಿ ಇನ್ನು ಕೆಲಸವಿರಲ್ಲ ಎಂದುಕೊಂಡಿದ್ದಾಗ, ಗೆಳೆಯರ ಒತ್ತಾಸೆ ಮೇರೆಗೆ ಕೆನಡಾದ ಪೌರತ್ವ ಪಡೆದಿದ್ದರು. ಆನಂತರ ಇವರ ಸಿನಿಮಾಗಳು ಯಶಸ್ವಿಯಾಗಿದ್ದು, ಈಗಂತೂ  ಹೌಸ್‍ಫುಲ್4 ಮತ್ತು ಮಿಷನ್ ಮಂಗಲ್‍ಪಾಂಡೆ ಸಿನಿಮಾಗಳು 200 ಕೋಟಿ ರೂ.ಗಳ ಕ್ಲಬ್ ಸೇರಿವೆ.

ನಿರ್ದೇಶಕರ್ಯಾರೂ ನನಗೆ ಕೆಲಸ ಕೊಡಲ್ಲ ಎಂದು ಕಳೆದವಾರವಷ್ಟೇ ಹೇಳಿಕೊಂಡಿದ್ದ ಅಕ್ಕಿ, ಈಗ ಭಾರತದ ಪಾಸ್‍ಪೋರ್ಟ್ ಪಡೆಯಲು ಅರ್ಜಿ ಗುಜರಾಯಿಸಿದ್ದಾರೆ. ನಾನು ನನ್ನ ಹೆಂಡತಿ ಮಕ್ಕಳೆಲ್ಲ ಭಾರತೀಯರು. ನನ್ನ ಜೀವವೇ ಭಾರತ, ಆದರೆ ನನ್ನ ದೇಶಪ್ರೇಮ ತೋರಿಸಲು ದಾಖಲೆಗಳನ್ನ ತೋರಿಸಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ ಎಂದು ಹೇಳಿಕೊಂಡಿರುವ ಇವರೀಗ ಇಲ್ಲಿನ ಪಾಸ್‍ಪೋರ್ಟ್ ಪಡೆಯುತ್ತಿದ್ದಾರೆ. ಸಿನಿಮಾಗಳ ಸೋತಾಗ ದೇಶ ಬೇಡ, ಗೆದ್ದಾಗ ಮಾತ್ರ ಬೇಕಾ ಎಂಬ ಟೀಕೆಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.