ಭಾರತೀಯ ಔಷಧ ಅಂಗಡಿಗಳಲ್ಲಿ ಗರ್ಭಪಾತದ ಮಾತ್ರೆಗಳೇ ಸಿಗುವುದಿಲ್ಲ! 

ಭಾರತೀಯ ಔಷಧ ಅಂಗಡಿಗಳಲ್ಲಿ ಗರ್ಭಪಾತದ ಮಾತ್ರೆಗಳೇ ಸಿಗುವುದಿಲ್ಲ! 

ರಾಜಸ್ಥಾನದ ಔಷಧ ಅಂಗಡಿಗಳಲ್ಲಿ ವೈದ್ಯಕೀಯ ಗರ್ಭಪಾತದ ಔಷಧಗಳೇ ಸಿಗುವುದಿಲ್ಲ ಎಂದು ಕಳೆದ ಆಗಸ್ಟ್ ನಲ್ಲಿ ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ. ಮಹಾರಾಷ್ಟ್ರದಲ್ಲಿ ಈ ಮಾತ್ರೆಗಳು ಕೇವಲ ಶೇ.1.2 ರಷ್ಟು ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತವೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಾಸ್ಥಾನದಲ್ಲಿ ಈ ಅಧ್ಯಯನ ನಡೆಸಲಾಗಿದೆ. 

ಉತ್ತರ ಪ್ರದೇಶದಲ್ಲಿ ಈ ಪ್ರಮಾಣ ಉತ್ತಮವಾಗಿದೆ. ಸಂದರ್ಶನ ನಡೆಸಿದ ಔಷಧ ಅಂಗಡಿಗಳಲ್ಲಿ ಶೇ.66 ರಷ್ಟು ಅಂಗಡಿಗಳಲ್ಲಿ ಈ ಮಾತ್ರೆಗಳು ಲಭ್ಯ ಇವೆ. ಬಿಹಾರದ ಶೇ.37.8 ಔಷಧ ಮಳಿಗೆಗಳಲ್ಲಿ ಗರ್ಭಪಾತ ಮಾತ್ರೆಗಳು ದೊರೆಯುತ್ತವೆ. 

ಮೈಫ್ ಪ್ರಿಸ್ಟೋನ್ ಮತ್ತು ಮಿಸೋಪ್ರಾಸ್ಟಾಲ್ ಎಂಬ ಸಂಯೋಜನೆಯ ಮಾತ್ರೆಗಳನ್ನು ಸಾಮಾನ್ಯವಾಗಿ ವೈದ್ಯಕೀಯ ಗರ್ಭಪಾತ ಕ್ರಮಗಳಲ್ಲಿ ಬಳಸಲಾಗುತ್ತದೆ. 

ಕಾನೂನಿನ ನಿರ್ಬಂಧಗಳಿಂದಾಗಿ ಈ ಮಾತ್ರೆಗಳ ಸಂಗ್ರಹ ಇರಿಸಿಕೊಳ್ಳುವುದಿಲ್ಲ ಎಂದು ಶೇ.69.4 ಔಷಧ ಅಂಗಡಿಗಳ ಮಾಲೀಕರು ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷಿತ ಗರ್ಭಪಾತ ನಿರ್ವಹಣೆ ಸುಲಭಗೊಳಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಪ್ರತಿಗ್ಯಾ ಎಂಬ ಸಂಸ್ಥೆ ನಡೆಸಿದ ಅಧ್ಯಯನ ಸಂದರ್ಭದಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಶೇ.90.4 ಮತ್ತು ರಾಜಾಸ್ಥಾನದ ಶೇ.75.6 ಔಷಧ ಮಳಿಗೆಗಳು ಇದೇ ಉತ್ತರ ನೀಡಿವೆ. 

ಗಂಡು ಮಕ್ಕಳನ್ನೇ ಬಯಸುವ ಭಾರತ ಮತ್ತು ಚೈನಾದಲ್ಲಿ ಲಿಂಗ ಆಯ್ಕೆ ಆಧಾರಿತ ಗರ್ಭಪಾತ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ನಿರ್ಬಂಧಗಳಿವೆ ಎಂದು ಔಷಧ ಅಂಗಡಿ ಮಾಲೀಕರು ಭಾವಿಸಿದ್ದಾರೆ. ಆದರೆ ಈ ಮಾತ್ರೆಗಳು ಭ್ರೂಣದ ಲಿಂಗ ಪತ್ತೆ ನಂತರ ಬಳಸಲಾಗುತ್ತಿಲ್ಲ. ಲಿಂಗ ಗುರುತಿಸುವ ಮುನ್ನವೇ ಗರ್ಭ ಧರಿಸಿದ ಆರಂಭದ ದಿನಗಳಲ್ಲಿ ಮಾತ್ರ ಬಳಸುವಂಥ ಮಾತ್ರೆಗಳಾಗಿವೆ. 

ಭಾರತದ ಮಹಿಳೆಯರಲ್ಲಿ ಗರ್ಭಪಾತದ ಬಗ್ಗೆ ಇರುವ ಕಾನೂನಾತ್ಮಕ ಅಂಶಗಳು, ಸುರಕ್ಷಿತ ಸೇವೆಗಳ ಅಲಭ್ಯತೆ ಮತ್ತು ಗರಿಷ್ಠ ವೆಚ್ಚ ಸೇರಿದಂತೆ ಜಾಗೃತಿಯ ಕೊರತೆ ಇರುವುದೂ ಹಲವು ಸಮಸ್ಯೆಗಳಿಗೆ ಕಾರಣವಾಗಿವೆ. ಗರ್ಭಪಾತ ಒಂದು ಕಳಂಕ ಎಂದು ಭಾವಿಸಿರುವುದೂ ಇದಕ್ಕೆ ಕಾರಣವಾಗಿದೆ. 

ಬಹುತೇಕ ಐವತ್ತು ವರ್ಷಗಳ ಹಿಂದೆಯೇ ಗರ್ಭಪಾತವನ್ನು ಭಾರತದಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಆದರೆ ಗರ್ಭಪಾತವನ್ನು ಅನೈರ್ಮಲ್ಯ ಪರಿಸರದಲ್ಲಿ ಅಸುರಕ್ಷಿತವಾಗಿ ತರಬೇತಿಯನ್ನೇ ಪಡೆಯದ ವ್ಯಕ್ತಿಗಳಿಂದ ಮಾಡಿಸುತ್ತಿರುವುದೇ ಗರ್ಭಿಣಿಯರ ಸಾವಿಗೆ ಅತಿ ಮುಖ್ಯ ಮೂರನೇ ಕಾರಣವಾಗಿದೆ. ಭಾರತದಲ್ಲಿ ಶೇ.56 ರಷ್ಟು ಗರ್ಭಪಾತಗಳು ಅಸುರಕ್ಷಿತವಾಗಿದೆ ಎಂದು ‘ಇಂಡಿಯಾ ಸ್ಪೆಂಡ್’ 2017 ರಲ್ಲಿ ವರದಿ ಮಾಡಿತ್ತು.    

ವೈದ್ಯಕೀಯ ಗರ್ಭಪಾತ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಿದರೆ ಶೇ.95 ರಿಂದ 98 ರಷ್ಟು ಯಶಸ್ಸು ಸಾಧ್ಯ ಎಂದು ವರದಿಗಳು ಹೇಳಿವೆ. ಆದರೆ ವೈದ್ಯಕೀಯ ನಿಗಾ ಇಲ್ಲದೇ ನಡೆಸುವ ಗರ್ಭಪಾತಗಳಿಂದ ವೈಫಲ್ಯ  ಉಂಟಾಗುತ್ತದೆ. 

ವೈದ್ಯಕೀಯ ಗರ್ಭಪಾತದ ಮಾತ್ರೆಗಳನ್ನು ‘ಷೆಡ್ಯೂಲ್ ಎಚ್’ ಗೆ ಸೇರಿಸಿರುವುದರಿಂದ ವೈದ್ಯರ ಸಲಹೆ ಇರುವ ಚೀಟಿ ತೋರಿಸಿ ಔಷಧ ಅಂಗಡಿಗಳಲ್ಲಿ ಪಡೆಯಬಹುದಾಗಿದೆ. ಆದರೆ ಬಹುತೇಕರು ವೈದ್ಯರ ಸಲಹೆ ಚೀಟಿ ಇಲ್ಲದೇ ಗರ್ಭಪಾತದ ಮಾತ್ರೆಗಳ ಬಗ್ಗೆ ಮಾಹಿತಿಯೂ ಇಲ್ಲದೇ ಬರುತ್ತಾರೆ ಎಂಬ ಅಂಶ ಅಧ್ಯಯನದಿಂದ ಗೊತ್ತಾಗಿದೆ. ಇಂಥ ಪ್ರಕರಣಗಳಲ್ಲಿ ಸೇವಿಸಬೇಕಾದ ಔಷಧದ ಪ್ರಮಾಣ ಮತ್ತು ಅಡ್ಡಪರಿಣಾಮಗಳ ಬಗ್ಗೆ ವಿವರಿಸುವ ಜವಾಬ್ದಾರಿ ವೈದ್ಯರು ಮತ್ತು ಔಷಧ ಮಳಿಗೆಗಳದ್ದಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಇಂಥ ಮಾತ್ರೆಗಳನ್ನು ಪ್ಯಾಕ್ಗಳಿಂದ ಹೊರ ತೆಗೆದು ಮಾರಾಟ ಮಾಡುವುದರಿಂದ ಅದರ ಸಂಪೂರ್ಣ ಮಾಹಿತಿ ಮಹಿಳೆಯರಿಗೆ ದೊರೆಯುವುದು ಸಾಧ್ಯವಿಲ್ಲ. ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ‘ಕಡಿಮೆ ಸುರಕ್ಷಿತ’ ಗರ್ಭಪಾತ ಎಂಬ ವರ್ಗೀಕರಣವನ್ನೂ ಮಾಡಿದೆ. 

ಅತಿಯಾದ ನಿಯಂತ್ರಣಗಳಿಂದಲೂ ಗರ್ಭಪಾತ ಮಾತ್ರೆಗಳ ಗುಪ್ತ ಮಾರಾಟ ನಡೆಯುತ್ತಿದೆ. ಅದಕ್ಕೆ ಕಾರಣವೂ ಇದೆ. 2001 ರಿಂದ 2011ರ ವರೆಗೆ ಶಿಶು ಲಿಂಗ ಅನುಪಾತ ಸಾವಿರ ಗಂಡು ಮಕ್ಕಳಿಗೆ 927 ಹೆಣ್ಣು ಮಕ್ಕಳಿಗೆ ಇಳಿದಿದೆ. ರಾಜಾಸ್ಥಾನದಲ್ಲಿ ಇದು ಸಾವಿರಕ್ಕೆ 888. ಇದರಿಂದಾಗಿ 2021 ರ ಹೊತ್ತಿಗೆ ಸಾವಿರಕ್ಕೆ 940 ರ ಗುರಿ ಇರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ 2018 ರಲ್ಲಿ ವರದಿ ಮಾಡಿತ್ತು.ಹೆಣ್ಣು ಭ್ರೂಣ ಪತ್ತೆ ನಂತರ ಈ ಮಾತ್ರೆಗಳನ್ನು ಬಳಸಲಾಗುವುದು ಎಂಬ ಮೂಢ ನಂಬಿಕೆ ಗರ್ಭಪಾತ ಮಾತ್ರೆಗಳ ಗುಪ್ತ ಮಾರಾಟಕ್ಕೇ ಕಾರಣವೂ ಆಗಿದೆ.   ಜತೆಗೆ ಈ ಮಾತ್ರೆಗಳ ಬೆಲೆಯೂ ಐದಾರು ಪಟ್ಟು ಹೆಚ್ಚಾಗಿರುತ್ತದೆ. ವಾಸ್ತವದಲ್ಲಿ ಗರ್ಭ ಧರಿಸಿದ 13 ರಿಂದ 14 ನೇ ವಾರದಲ್ಲಷ್ಟೇ ಲಿಂಗಪತ್ತೆ ಸಾಧ್ಯವಾಗುತ್ತದೆ. ಆದರೆ ವೈದ್ಯಕೀಯ ಗರ್ಭಪಾತದ ಕ್ರಮಗಳನ್ನು ಗರ್ಭ ಧರಿಸಿದ ಒಂಬತ್ತು ವಾರಗಳ ಒಳಗೇ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಭ್ರೂಣ ಲಿಂಗ ಪತ್ತೆಗೂ ಗರ್ಭಪಾತದ ಮಾತ್ರೆಗಳಿಗೂ ಯಾವುದೇ ಸಂಬಂಧ ಇಲ್ಲ. 

ವೈದ್ಯಕೀಯ ಗರ್ಭಪಾತ ಕ್ರಮಗಳ ಬಗ್ಗೆ ತರಬೇತಿ ಪಡೆದಿರುವ ಔಷಧ ಅಂಗಡಿಗಳವರ ಪ್ರಮಾಣ ಬಿಹಾರದಲ್ಲಿ ಶೇ.15 ರಷ್ಟಿದ್ದರೆ ಉತ್ತರಪ್ರದೇಶದಲ್ಲಿ ಶೇ.9 ರಷ್ಟಿದೆ. ಶೇ.64.5 ರಷ್ಟು ಔಷಧ ಅಂಗಡಿಗಳವರು ಗರ್ಭಪಾತ ಮಾತ್ರೆಗಳ ಬಗ್ಗೆ ಅವರಿಗೆ ದೊರೆಯುವ ಕಿರುಹೊತ್ತಿಗೆಗಳಿಂದಷ್ಟೇ ಪಡೆದಿರುತ್ತಾರೆ. ಈ ಬಗ್ಗೆ ಕೇಳಿದಾಗ ಶೇ.35 ರಷ್ಟು ಔಷಧ ಅಂಗಡಿಗಳವರಿಗೆ ಗರ್ಭಪಾತಕ್ಕೆ ಬಳಸುವ ಮಾತ್ರೆಗಳ ಹೆಸರುಗಳನ್ನು ನೆನಪು ಮಾಡಿಕೊಂಡು ಹೇಳುವುದೂ ಕಷ್ಟವಾಗಿತ್ತು. ಅರ್ಧಕ್ಕಿಂತ ಹೆಚ್ಚು ಚಿಲ್ಲರೆ ಔಷಧ ಅಂಗಡಿಗಳವರು ಗರ್ಭಪಾತ ಔಷಧ ಮಹಿಳೆಯರಿಗೆ ಉಪಯುಕ್ತವಲ್ಲವೆಂದೇ ಭಾವಿಸಿದ್ದಾರೆ.1971 ರ ವೈದ್ಯಕೀಯ ಗರ್ಭಪಾತ ಕಾಯ್ದೆ ಇದ್ದಾಗಿಯೂ ಶೇ.43 ರಷ್ಟು ಫಾರ್ಮಸಿಸ್ಟ್ಗಳು ಭಾರತದಲ್ಲಿ ಗರ್ಭಪಾತ ಕಾನೂನುಬಾಹಿರ ಎಂದೇ ನಂಬಿಕೊಂಡಿದ್ದಾರೆ. ರಾಜಾಸ್ಥಾನದ ಶೇ. 60.7 ರಷ್ಟು ಫಾರ್ಮಸಿಸ್ಟ್ ಗಳು ಗರ್ಭಪಾತ ಕಾನೂನು ಬಾಹಿರ ಎಂದೇ ಭಾವಿಸಿದ್ದಾರೆ.     
                                                                                         (ಸೌಜನ್ಯ : ಇಂಡಿಯಾ ಸ್ಪೆಂಡ್)