ಕೆರೆ ಅಂಗಳದಲ್ಲಿ ಕಲಾಂ ಸಿಕ್ಕಿದ್ರು...!

ಕೆರೆ ಅಂಗಳದಲ್ಲಿ ಕಲಾಂ ಸಿಕ್ಕಿದ್ರು...!

“ಕಲಾಂ ಸಿಕ್ಕಿದ್ರು” ಅಂದೆ.

ಮಳೆ ಸುರೀತಿತ್ತು. ಇಡೀ ಮಳೆಗಾಲದಲ್ಲೇ ಇವತ್ತು ಸುರೀತಿರೋ ಮಳೆ ಹೆಚ್ಚಾಗೇಯಿತ್ತು. ಕೆರೆಯಂಗಳದ ಧೂಳಿಗೆ ಕೆಸರಿನ ಭಾಗ್ಯ. ಹತ್ತಿರದಲ್ಲೇ ಬಸ್‌ಡಿಪೋ ಇದ್ದಿದ್ದರಿಂದ ದಿನಕ್ಕೆ ಹತ್ತಾರು ಬಸ್‌ಗಳು ಈ ಕೆರೆಯಂಗಳದ ಮುಖ್ಯರಸ್ತೆಯನ್ನೇ ಅವಲಂಬಿಸಿ ದಾಟಿ ಹೋಗಬೇಕಿತ್ತು. ಅವರತ್ತು ಅಡಿ ರಸ್ತೆಯಲ್ಲಿ ಮೂವತ್ತು ಅಡಿ ಉದ್ದಕ್ಕೂ ಡಾಂಬರು ಆಗಿತ್ತು. ಅದೂ ಅಲ್ಲಲ್ಲಿ ಕಿತ್ತುಹೋಗಿ ಜನಪ್ರತಿನಿಧಿಯ ಕೆಲಸವೆಷ್ಟು ಸಾಚಾ ಎಂಬುದನ್ನು ತೋರಿಸುತ್ತಿತ್ತು. ಮಳೆಗಾಲವಾದರೂ ಮಳೆಯಿಲ್ಲ. ಮೊದಲೇ ಮಣ್ಣು ತುಂಬಿಕೊಂಡ ರಸ್ತೆ. ಬಸ್ ದಾಟಿದರೆ ಎದುರಾ ಬದುರಾ ಕಾಣದಷ್ಟು ಧೂಳೇಳುತ್ತಿತ್ತು. ಬಸ್ಸು, ಲಾರಿ, ಟ್ರ್ಯಾಕ್ಟರು, ಕಾರು, ವ್ಯಾನುಗಳ ಜೊತೆಜೊತೆಗೇ ಚಲಿಸುತ್ತಿದ್ದ ಟೂವ್ಹೀಲರ್‌ಗಳಿಗಂತೂ ಯಮಹಿಂಸೆ. ಸ್ವಲ್ಪ ನಿಂತು ಧೂಳು ಕ್ಲಿಯರ್ ಆದಮೇಲೆ ಹೊರಡೋಣ ಎಂದುಕೊಂಡರೆ ಆಗದ ಮಾತು. ಕೆರೆಯಂಗಳದ ಮುಖ್ಯರಸ್ತೆ ಸ್ಮಶಾನದಂತೆ, ಶಾಂತಸ್ಥಿತಿಯಿಂದ ಕಂಡಿದ್ದು ಇಲ್ಲೇಯಿಲ್ಲ.

ಅಂತಹ ಕೆರೆಯಂಗಳದ ಮುಖ್ಯರಸ್ತೆಯಲ್ಲಿ ಬಂಗಾರಿಯ ಮೊಬೈಲ್ ಕ್ಯಾಂಟೀನಿತ್ತು. ಬಹಳ ಹಳೆಯ ಕ್ಯಾಂಟೀನು ಬಂಗಾರಿದು. ಬಂಗಾರಿಯ ಮೂಲಹೆಸರು ಬಂಗಾರಪ್ಪ. ಸೊರಬದಲ್ಲಿ ಅದ್ಯಾವುದೋ ಕಾಲದಲ್ಲಿ ಹೆಂಡತಿ-ಮಕ್ಕಳ ಜೊತೆ ಶಿವಮೊಗ್ಗಕ್ಕೆ ಬಂದಿದ್ದು. ಅಲ್ಲಿ ಇಲ್ಲಿ ಲೋಟ ತೊಳೆದುಕೊಂಡಿದ್ದ ಬಂಗಾರಿಗೆ ಒಮ್ಮೆ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪರ ಭೇಟಿಯಾಗಿದ್ದೇ ಅದೃಷ್ಟ ಬದಲಾಗೋಕೆ ಕಾರಣವಾಗೋಯ್ತು. ಒಳ್ಳೆ ಊಟ ಬಡಿಸಿದ ಬಂಗಾರಿಗೆ ಬಂಗಾರಪ್ಪ ಒಳ್ಳೆ ಬಕ್ಸೀಸು ಕೊಟ್ಟು, `ನೀನೂ ಒಂದ್ ಕ್ಯಾಂಟೀನ್ ತಕ್ಕೊಳಯ್ಯ’ ಎಂದರಂತೆ. ಬಕ್ಸೀಸು ಬರೋಬ್ಬರಿ ಹತ್ತುಸಾವಿರವಿತ್ತು. ಗಾಡಿ, ಪಾತ್ರೆಲೋಟ, ಗ್ಯಾಸು, ಒಲೆ ಅಂತೆಲ್ಲಾ ತಗೊಂಡ ಬಂಗಾರಿ ಕೆರೆ ಏರಿಮೇಲೆ ಕ್ಯಾಂಟೀನು ಆರಂಭಿಸಿಕೊಂಡ. ಆಗಿನ್ನೂ ಕೆರೆಯಿತ್ತು. ನೂರಾರು ಮನೆ ಕೆರೆಸುತ್ತ, ಕೆರೆ ಜಾಗ ಬಳಸಿಕೊಂಡೇ ಹುಟ್ಟಿಕೊಂಡಿದ್ದ ಝೋಪಡಿ, ಮನೆಗಳೂ. ಅಲ್ಲಿನವರಿಗೆ ಹರಟೆಗೆ, ತಿಂಡಿಗೆ, ಊಟಕ್ಕೆ, ಟೀಗೆ ಅಂತ ಇದ್ದಿದ್ದೇ ಬಂಗಾರಿ ಕ್ಯಾಂಟೀನ್. ಬರಬರುತ್ತಾ ಕೆರೆ ಮುಚ್ಚಿಹೋಯ್ತು. ಮುಚ್ಚಿಹೋದ ಕೆರೆ ಮೇಲೆ ಬಸ್‌ಡಿಪೋ ಬಂತು. ಬಸ್‌ಗಳು ಓಡಾಡೋಕೆ ಅಂತ ರಸ್ತೆ ಬಂತು. ಬಂಗಾರಿಯ ಕ್ಯಾಂಟೀನ್ ಇದ್ದ ಕೆರೆ ಏರಿಯೇ ಈಗ ಕೆರೆಯಂಗಳದ ಮುಖ್ಯರಸ್ತೆ. ಮುಖ್ಯರಸ್ತೆ ಅಂದ ಮೇಲೆ ಒಂದೇ ಕ್ಯಾಂಟೀನ್ ಇರೋದಿದೆಯಾ? ಕೂಗಳತೆ ದೂರಕ್ಕೆಲ್ಲ ಕ್ಯಾಂಟೀನು, ಹೋಟ್ಲು, ಅಂಗಡಿ, ಬೇಕರಿಗಳೆಲ್ಲ ಸೃಷ್ಟಿಯಾಗಿವೆ. ಜೊತೆಗೆ ಗ್ಯಾರೇಜು, ಪೆಟ್ರೋಲು-ಡೀಸೆಲು-ಗ್ಯಾಸ್‌ಬಂಕ್‌ಗಳೂ ಇವೆ. ಆದರೂ ಬಂಗಾರಿ ಕ್ಯಾಂಟೀನ್ ದುಡಿಮೆ ಕಡಿಮೆಯಾಗಿಲ್ಲ. ಬಂಗಾರಿಯ ಕೈ ರುಚೀನೋ, ತುಂಬಾ ಚೆನ್ನಾಗಿ ಮಾತಾಡಿ ಗ್ರಾಹಕರಿಗೆ ರಂಜಿಸ್ತಾನೋ... ಏನೋ ಒಂದು ಕಾರಣವಿರಬಹುದು.

ಮಳೆ ಸುರೀತಿತ್ತು ಅಂದೆನಲ್ಲ... ಮಳೆಯಲ್ಲೇ ಬಸ್ಸುಗಳೆಲ್ಲ ಓಡಾಡುತ್ತಿದ್ದವು. ಗುಂಡಿ ಗುಂಡಿಗಳಲ್ಲಿ ನಿಂತ ಕೆಸರು ನೀರನ್ನು ತನ್ನ ಟೈರುಗಳಿಂದ ಸಿಡ್ಸಿ ಸಿಡ್ಸಿ ಹೋಗುತ್ತಿದ್ದವು. ಬಂಗಾರಿಯ ಮೊಬೈಲ್ ಕ್ಯಾಂಟೀನಿನ ಮೇಲೆ ಟಾರ್ಪಲು ಹೊದಿಸಿದ್ದರಿಂದ ನಾಲ್ಕರಿಂದ ಆರು ಜನ ತಲೆ ನೆನೆಸದೇ ನಿಲ್ಲಬಹುದಿತ್ತು. ಸ್ವಲ್ಪ ನೆಂದುಕೊಂಡೇ ಬಂದ ನಾನು, ಸ್ಕೂಟರು ನಿಲ್ಲಿಸಿ ಬಂಗಾರಿಯ ಟಾರ್ಪಲ್ಲು ಹೊಕ್ಕಿಕೊಂಡಿದ್ದೆ. ಹಾಗೆ ಹೊಕ್ಕಿಕೊಂಡವನ ಬಾಯಿಂದ ಹೊರಬಿದ್ದಿದ್ದೇ- ``ಕಲಾಂ ಸಿಕ್ಕಿದ್ರು’’ ಅನ್ನೋ ಮಾತು.

ಫ್ರೀಯಾಗೇ ಇದ್ದ ಬಂಗಾರಿ ಕೇಳಿಸಿಕೊಂಡಿದ್ದ. ಮತ್ತೊಮ್ಮೆ ಹೇಳಿದೆ- ``ಕಲಾಂ ಸಿಕ್ಕಿದ್ರು ಕಣೋ’’. ಫ್ರೀಯಾಗೆ ಇದ್ರೂ ಚಾ ಕುದಿಸುತ್ತಿದ್ದ ಬಂಗಾರಿಗೆ ನನ್ನ ಮಾತಿಂದ ಕುತೂಹಲ ಹುಟ್ಟಬೇಕಿತ್ತು. ಆದರೆ ಹಾಗಾಗಲಿಲ್ಲ. ಇವನಿಗೆಲ್ಲೋ ಬೆಪ್ಪು ಅಂತ ನನ್ನ ಮುಖವನ್ನೂ ನೋಡದೇ ಚಾ ಕುದಿಸಿ, ನಂಗೊಂದು ಲೋಟದಲ್ಲಿ ಹಾಕಿಕೊಟ್ಟ. ಸುರಿಯುತ್ತಿದ್ದ ಮಳೆಗೂ ಬಂಗಾರಿ ಕೊಟ್ಟ ಚಾ ಗೂ ಅದೆಂತಹ ಸಂಬಂಧವಿತ್ತು ಅಂದ್ರೆ ವರ್ಣಿಸಲು ಸಾಧ್ಯವಿಲ್ಲ. ಕುದಿಯೋ ಎಣ್ಣೆಗೂ ಚಿಕನ್ ಪೀಸಿಗೂ ಇರುತ್ತಲ-ಅಂತಹ ವಿಚಿತ್ರ ಸಂಬಂಧ. ಒಟ್ಟಾರೆಯಾಗಿ ಮಳೆಯಿಂದ ಚಾ ರುಚಿ ಹೆಚ್ಚಿದಂತೆ ಕಂಡಿತು.

ಚಾ ಹೀರುತ್ತಲೇ ಮತ್ತೆ ಹೇಳಿದೆ- ``ಕಲಾಂ ಸಿಕ್ಕಿದ್ರು ಮಾರಾಯ’’.

ಈಗ ಬಂಗಾರಿ ಮುಖಮುಖ ನೋಡಿದ, ಯಾವುದೋ ನೋಡದ ಪ್ರಾಣಿಯನ್ನು ಮೊದಲ ಬಾರಿಗೆ ನೋಡುವಂತೆ. ಮೊದಮೊದಲು ನಿರ್ಭಾವುಕನಂತಿದ್ದವನ ಮುಖದಲ್ಲಿ ಭಾವಗಳು ಮೂಡತೊಡಗಿದ್ದವು. ಅವನ ಕಣ್ಣುಗಳಲ್ಲಿ ಅವನದೇ ಚಹರೆಯಲ್ಲಿ ಮೂಡುತ್ತಿದ್ದ ಪ್ರಶ್ನೆಗಳು ಹುಬ್ಬು ಗಂಟಿಕ್ಕಿಕೊಂಡು ಪ್ರತಿಬಿಂಬಿಸತೊಡಗಿದ್ದವು. ನಾನು ಎಷ್ಟೋ ವರ್ಷಗಳಿಂದ ಅವನ ಗಿರಾಕಿ. ಆದರೆ, ಇವತ್ಯಾಕೋ ನನ್ನನ್ನು ಮೊದಲಬಾರಿಗೆ ನೋಡುವವನಂತೆ ನೋಡುತ್ತಿದ್ದುದು ನನಗೂ ಅಷ್ಟೇ ವಿಚಿತ್ರವಾಗಿ ಕಾಣುವಂತಾಯಿತು. ಚಾ ಮುಗಿಸಿ ಲೋಟಯಿಟ್ಟೆ. ಬಂಗಾರಿ ಈಗಲಾದರೂ ಮಾತಾಡಬಹುದೆಂದು ಕಾದೆ. ಮಳೆ ಇನ್ನಷ್ಟು ಜೋರಾಗಿ ಸುರಿಯಲಾರಂಭಿಸಿತ್ತು. ಜೊತೆಗೆ ಗಾಳಿಯೂ ಬೀಸತೊಡಗಿತು. ಮಾತಾಡಿದರೆ ಕೇಳುವಂತಿದ್ದ ವಾತಾವರಣದಲ್ಲಿ ಬದಲಾವಣೆಯಾಗಿತ್ತು. ಈಗ ಸ್ವಲ್ಪ ಜೋರುಧ್ವನಿಯಲ್ಲೇ ಮಾತಾಡಬೇಕಿತ್ತು. ಹಾಗೆ ಮಾತಾಡದಿದ್ದರೆ ಕೇಳುವವರ ಕಿವಿಗೆ ಮಾತಿನ ಬದಲು ಬೀಸುತ್ತಿದ್ದ ಗಾಳಿ-ಮಳೆಯ ಸದ್ದಷ್ಟೇ.

ನಾನು ಜೋರಾಗಿ ಮಾತಾಡುವ ಬದಲು ಕೈಸನ್ನೆ ಮಾಡಿ ಮತ್ತೊಂದು ಬಿಸಿಬಿಸಿ ಚಾ ಕೊಡು ಎಂದೆ. ನನ್ನ ಹಾಗೆ ಟಾರ್ಪಲ್ಲಿನ ಕೆಳಗೆ ನಿಂತಿದ್ದವರಲ್ಲಿ ಒಂದಿಬ್ಬರು ಹಾಗೆಯೇ ಸಂಜ್ಞೆಮಾಡಿ ಚಾ ಕೊಡುವಂತೆ ಹೇಳಿದರು. ಬಂಗಾರಿ ಮತ್ತೆ ಚಾ ಮಾಡಲು ಇಟ್ಟ. ಚಾ ಘಮಬಿಡುತ್ತಲೇ ಕುದಿಯುವ ಸದ್ದು, ಮಳೆ ಗಾಳಿಯ ಸದ್ದು, ಬಸ್‌ಗಳ ಗುಂಡಿ ದಾಟುವ ಧಕ್ಕ... ಧಕ್ಕ... ಸದ್ದು ಬಂಗಾರಿಯ ಕ್ಯಾಂಟೀನಿನ ಸುತ್ತ ಬೇರೊಂದು ದೃಶ್ಯವನ್ನೇ ಸೃಷ್ಟಿಸಿದ್ದವು. ಆ ದೃಶ್ಯ ಅದೆಷ್ಟು ವಕ್ರ ವಕ್ರವಾಗಿದೆಯಲ್ಲ! ಎನಿಸಿತ್ತು. ನನಗೆ ಮಾತ್ರ ಹಾಗೆ ಕಾಣಿಸುತ್ತಿತ್ತೋ ಏನು ಕಥೆಯೋ? ಅಕ್ಕಪಕ್ಕ ನಿಂತವರಿಗೆ ಕೇಳೋಣವೆಂದುಕೊಂಡೆ. ಜೋರಾಗಿಯೇ ಧ್ವನಿ ಏರಿಸಿ ಕೇಳಬೇಕು. ಸುಮ್ಮನಾದೆ. ಕುದಿಯುತ್ತಿದ್ದ ಚಾ ಇದ್ದ ಪಾತ್ರೆಯನ್ನೇ ಕ್ಯಾಕರಿಸಿ ನೋಡತೊಡಗಿದೆ.

ಮತ್ತೆ ಧಕ್ಕ... ಧಕ್ಕ... ಧಕ್ಕ ಅಂತ ಬಸ್ಸಿನ ಸದ್ದು. ಛೊಳ್ ಎಂದು ಹಾರುತ್ತಿದ್ದ ಗುಂಡಿ ನೀರು. ಇದ್ದಕ್ಕಿದ್ದ ಹಾಗೆ ಆ ಬಸ್ಸು ಪೊಂ... ಪೊಂ... ಪೋಂ... ಹಾರನ್ನು ಬಾರಿಸತೊಡಗಿತು. ತಿರುಗಿ ಅದೇನಾಯ್ತೆಂದು ನೋಡುವಷ್ಟರಲ್ಲೇ ಆಟೋರಿಕ್ಷಾ ಬಸ್ಸಿಗೆ ಗುದ್ದಿ, ಕುಂಡೆ ಮೇಲೆ ಮಾಡಿ ಚಕ್ರ ತಿರುಗಿಸುತ್ತಿತ್ತು. ಗುಂಡಿಯೊಂದನ್ನು ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಇಳಿದ ಆಟೋರಿಕ್ಷಾ, ಎದುರಿಗೇ ಬರುತ್ತಿದ್ದ ಬಸ್ಸಿಗೆ ಗುದ್ದಿ ಉಲ್ಟಾ ಆಗಿತ್ತು. ಮಳೆ ಗಾಳಿ ಲೆಕ್ಕಿಸದೇ ನಿಂತೋರೆಲ್ಲ ಓಡಿಹೋಗಿ ಆಟೋರಿಕ್ಷಾದಲ್ಲಿದ್ದ ಡ್ರೈವರನ್ನು ಹೊರಕ್ಕೆಳೆದವು. ಕೆಸರು ಕೆಸರಾಗಿ ಹೋಗಿದ್ದ. ಅಲ್ಲಲ್ಲಿ ತರಚಿರಬಹುದು. ಮೂಳೆಮಾಂಸಕ್ಕೆ ಏಟು ಬಿದ್ದಿರಬಹುದು. ರಕ್ತಕಾಣಲಿಲ್ಲ. ಬಚಾವಾಗಿದ್ದ. ಗುಂಡಿಗಳ ಕಾರಣದಿಂದ ಬಸ್ಸು ಕೂಡ ವೇಗವೇ ಇಲ್ಲದೆ ಚಲಿಸುತ್ತಿತ್ತಷ್ಟೇ. ಆಟೋರಿಕ್ಷಾ ಎತ್ತಿ ಪಕ್ಕಕ್ಕಿಟ್ಟು, ಬಸ್ಸಿನವನಿಗೆ ಹೋಗಲು ಹೇಳಿದೆವು. ಆಟೋರಿಕ್ಷಾ ಅಲ್ಲಲ್ಲಿ ಜಜ್ಜಿತ್ತು ಸಣ್ಣದಾಗಿ. ಡ್ರೈವರನ್ನು ನಮ್ಮ ಜೊತೆಗೇ ಬಂಗಾರಿ ಕ್ಯಾಂಟೀನ್‌ಗೆ ಕರೆತಂದೆವು. ನಮ್ಮ ಜೊತೆಗೇ ಬಂದು ಸಹಾಯಮಾಡಿದ್ದ ಬಂಗಾರಿ ಈಗ ಮತ್ತೆ ಚಾ ಮಾಡೋದರಲ್ಲಿ ತಲ್ಲೀನನಾದ.

ನಾನು ಹಿಂದೆಮುಂದೆ  ನೋಡದೇ ಡ್ರೈವರ್‌ಗೆ ಕೇಳಿದೆ-ಹೇಳಿದೆ;

``ಕಲಾಂ ಗೊತ್ತಲ್ವಾ ನಿಂಗೆ... ನಂಗೆ ಆ ಕಲಾಂ ಸಿಕ್ಕಿದ್ರು’’

ಡ್ರೈವರ್ ಮುಖ ದಿಟ್ಟಿಸಿ ನೋಡಿದ. ನನ್ನನ್ನೊಮ್ಮೆ, ನಿಂತವರನ್ನೊಮ್ಮೆ, ಬಂಗಾರಿಯನ್ನೊಮ್ಮೆ, `ಏನು ಮಾತಾಡ್ತಿದಾನೆ ಇವ್ನು?’ ಎಂಬಂತೆ ಕಣ್ಣು ಗುಡ್ಡೆಮಾಡಿಕೊಂಡು ಗುರಾಯಿಸಿದ. ಬಂಗಾರಿ ಕಣ್ಣಲ್ಲಿ ಮತ್ತದೇ ಪ್ರಶ್ನಾರ್ಥಕ ಭಾವ. ನಾಲ್ಕಾರು ಲೋಟಗಳಿಗೆ ಚಾ ಸುರಿದು ಒಂದು ಲೋಟ ನನಗೆ, ಇನ್ನೊಂದು ಲೋಟ ಡ್ರೈವರ್‌ಗೆ ಕೊಟ್ಟ. ಉಳಿದಿದ್ದನ್ನು ನಿಂತವರಿಗೆ ಹಂಚಿದ.

``ನೀ ಮಾಡೋ ಚಾ ದಾಗೆ ಜಾದೂ ಇರುತ್ತೆ ಮಾರಾಯ... ದೂಸ್ರಾ ಮಾತಾಡಂಗಿಲ್ಲ... ಅಷ್ಟು ರುಚಿಯಾಗೈತೆ ನೋಡು... ನಿನ್ ಚಾ ಕಲಾಂ ಸಾಹೇಬ್ರಿಗೂ ಕುಡುಸ್ಬೇಕು ಒಮ್ಮೆ... ಹೈರಾಣ್ ಆಗ್ಬಿಡ್ತಾರೆ ಅವ್ರು...’’- ನಾ ಮಾತಾಡಿದೆ, ಬಂಗಾರಿಯನ್ನೊಮ್ಮೆ ನೋಡಿದೆ. ಗಂಟು ಹಾಕಿಕೊಂಡ ಹುಬ್ಬು ತೆರೆದುಕೊಂಡಿರಲಿಲ್ಲ. ಅವನು ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂಬಂತಹ ಭಾವ ಸೂಕ್ಷ್ಮವಾಗಿ ಗಮನಿಸಿದೆ.

ಬಂಗಾರಿ ನನ್ನ ಜೊತೆ ಮಾತಾಡಲು ಹೆದರಬೇಕಿರಲಿಲ್ಲ. ಮುಕ್ತವಾಗಿ ಯಾವತ್ತಿಗೂ ಮಾತಾಡುವವನಾಗಿದ್ದ. ಈಗ ವರ್ತಿಸುತ್ತಿರುವ ರೀತಿ ಯಲ್ಲಿ ಯಾವತ್ತಿಗೂ ವರ್ತಿಸಿರಲಿಲ್ಲ. ಕೆಲವೊಮ್ಮೆ ನನಗೇ ತಲೆಚಿಟ್ಟು ಹಿಡಿಯುವಷ್ಟು ಮಾತಾಡಿದ್ದೂ ಇದೆ. ಇವತ್ಯಾಕೋ ಹೀಗೆ? ಆ ಬಂಗಾರಿ ಇವನೇನಾ? ಅಥವಾ ಬಂಗಾರಿ ಬದಲಾಗಿ ಹೋದನಾ? ಮೌನಿಯಂತೆ ನಟಿಸುತ್ತಿದ್ದಾನಾ?- ಅನುಮಾನಗಳು, ಆಶ್ಚರ್ಯಗಳು, ಪ್ರಶ್ನೆಗಳು ಒಟ್ಟೋಟ್ಟಿಗೇ ನನ್ನ ಮೆದುಳಿನಲ್ಲಿ ಹುಳುಗಳಾಗಿ ಕೊರೆಯತೊಡಗಿದ್ದವು. ಚಾ ಹೀರುತ್ತಲೇ ಮತ್ತೆ ಬಂಗಾರಿಯ ಮುಖ ಸೂಕ್ಷ್ಮಮತಿಸೂಕ್ಷ್ಮಮಯವಾಗಿ ಗಮನಿಸಿದೆ. ಈಗ ಮಾತಾಡುತ್ತಾನೇನೋ! ಎಂಬಂತೆ ಮುಖದ ಮೇಲೆ ಭವಿಷ್ಯ ಕಂಡಿತು. ಮಳೆ ಮತ್ತೆ ಮತ್ತೆ ಜೋರು ಜೋರಾಗಿ... ಧೋ... ಧೋ... ಮಟ್ಟಕ್ಕೇರುತ್ತಲೇಯಿತ್ತು. ಗಾಳಿಗೂ ಮಳೆಗೂ ಯುದ್ಧ ಬಿದ್ದಿದೆಯೇನೋ ಎಂಬಂತೆ ಭೀತಿಯುತ ವಾತಾವರಣ, ಯುದ್ಧ ನಡೆದರೆ ನಡೆಯಲಿ... ನಮಗೇನು? ಎಂಬಂತೆ ಬಸ್ಸು, ಲಾರಿಗಳು ಧಕ್ಕ... ಧಕ್ಕ... ಚಲಿಸುತ್ತಲೇಯಿದ್ದವು. ಟಾರ್ಪಲ್ಲಿನ ಕೆಳಗೆ ನಿಂತಿದ್ದ ಒಬ್ಬ ಜೋರು ಸದ್ದಿಗೆ ಪ್ರತಿಸ್ಪರ್ಧಿ ಎಂಬಂತೆ ``ಇವ್ರವ್ವನ್... ಏನ್ ಮಳೆಯೋ... ಉಚ್ಚೆ ಹೊಯ್ಯಕ್ಕೂ ಬಿಡ್ತಿಲ್ರ‍್ರೋ’’ ಎಂದು ಜೋರಾಗಿಯೇ ಬೈದ.

``ಏ... ನಟೇಶ... ಅತ್ಲಾಗ್ ತರ‍್ಗಿ ಉದ್ದಕ್ ಹುಯ್ಯೋ... ನಿಂದ್ಯಾರ್ ಹಿಡ್ಕೊಂಡ್ಯಾರೆ...’’ ಎಂದು ಮತ್ತೊಬ್ಬ ಕಿಚಾಯಿಸಿದ. ಮೊದಲು ಮಾತಾಡಿದವನ ಹೆಸರು ನಟೇಶ ಅಂತ ಗೊತ್ತಾಯಿತು. ಈಗ ಮಾತಾಡಿದ್ದು...? ಅಂತ ಪ್ರಶ್ನಿಸಿಕೊಳ್ಳುವಷ್ಟರಲ್ಲೇ ಮೊದಲನೆಯವನು, ಅಂದರೆ ನಟೇಶ ಮತ್ತೆ ಜೋರಾಗಿ ಕೂಗಿಕೊಂಡೇ ಮಾತಾಡಿದ- ``ನಂಗೆ ಉಚ್ಚೇಗ್ ಅವಸ್ರ ಆಗೈತೆ ಅಂತಲ್ಲೋ ಹುಚ್‌ಮಂಜ... ಮಳೇ ಹಂಗ್ ಹೊಡೀತೈತೆ ಅಂತ...’’ ಸಮಜಾಯಿಷಿ ನೀಡಿದಾಗ ಎರಡನೇಯವನ ಹೆಸರು ಮಂಜುನಾಥನೋ, ಮಂಜಣ್ಣನೋ, ಮಂಜಪ್ಪನೋ ಇರಬೇಕೆಂಬುದು ದಿಟವಾಯ್ತು. ನಟೇಶನ ಮಾತು ಪೂರ್ತಿ ಮುಗಿಯುವ ಮೊದಲೇ ಮಂಜ ಅತ್ಲಾಗೆ ತಿರುಗಿ ಉದ್ದಕ್ಕೆ ಉಚ್ಚೆಗೆ ನಿಂತಿದ್ದ.

ಅದನ್ನು ನೋಡಿದ ಬಂಗಾರಿಗೆ ವಿಪರೀತ ಸಿಟ್ಟು ಬಂದುಹೋಯ್ತು-

``ಥೂ... ಹಡ್ಸೀನನ್ ಮಕ್ಳಾ... ಇಲ್ಲೇ ನಿಂತು ಹೊಯ್ತೀರಲ್ಲೋ... ಅತ್ಲಾಗ್ ಹೋಗಿ ಹೊಯ್ಕೊಂಡ್ ಸಾಯ್ರೋ...’’ ಕೂಗಿಬಿಟ್ಟ. ಬಂಗಾರಿಯ ಕೂಗಾಟಕ್ಕೆ ಬೆಚ್ಚಿದ ಮಂಜ, ಹೊಯ್ಯೋದನ್ನು ಅರ್ಧಕ್ಕೆ ನಿಲ್ಲಿಸಿ, ಪ್ಯಾಂಟಿನ ಜಿಪ್ಪು ಏರಿಸಿಕೊಂಡು, ಸುರೀತಿದ್ದ ಮಳೆಯಲ್ಲೇ ಕೈತೊಳೆದುಕೊಂಡು ಮೌನವಹಿಸಿದ.

ಎಲ್ಲದನ್ನೂ ಗಮನಿಸುತ್ತಿದ್ದ ನಾನು ಕೂಡ ಕೂಗಿಬಿಟ್ಟೆ -

``ಏನ್ರೀ ಇದೆಲ್ಲಾ?... ಗೊತ್ತಿದ್ದೂ ಗೊತ್ತಿದ್ದೂ ಹೀಗೆಲ್ಲಾ ಕಂಡ್‌ಕಂಡ್ ಜಾಗ್ದಲ್ಲಿ ಉಚ್ಚೇ ಹೊಯ್ತೀರಲ್ರಿ... ಥೂ... ನಾಚ್ಕೆ ಆಗ್ಬೇಕು ನಿಮ್ಗೆಲ್ಲಾ... ನಿಮ್ಗೆ ಗೊತ್ತಾ?... ನಂಗೆ ಕಲಾಂ ಸಿಕ್ಕಿದ್ರು...’’- ನನ್ನ ಮಾತನ್ನು ಅರ್ಧಕ್ಕೆ ತುಂಡರಿಸಿದ ಮಂಜ, ``ಅಯ್ಯೋ ಬಿಡ್ರೀ ಕಂಡೀವ್ನಿ... ಇದೇ ಮೊದ್ಲಲ್ಲ ಮಾಡ್ತಿರೋದು... ನಾನೂ ಮೊದಲ್ನೇವ್‌ನಲ್ಲ ಹೊಯ್ತಿರೋದು...’’ ಅಂದುಬಿಟ್ಟ. ಮಂಜ ಮಾತಾಡಿದ್ದರಲ್ಲಿ ಅಂತಹ ಕುತೂಹಲದ ಮಾತುಗಳೇನೂ ಇರಲಿಲ್ಲ. ಅಥವಾ ಹಾಗೆ ಕುತೂಹಲದ್ದು ಏನೂ ನನ್ನ ಕಿವಿಗೆ ಬೀಳಲಿಲ್ಲ. ಮಳೆ ಇಲ್ಲದಿದ್ರೆ ಅಲ್ಲೆಲ್ಲೋ ದೂರ ಹೋಗಿ ಹೊಯ್ದು ಬರುತ್ತಿದ್ದನೇನೋ?  ಬರುತ್ತಿರೋ ಮಳೆ ಒಂದು ಹೆಜ್ಜೇನೂ ಅತ್ಲಾಗ್-ಇತ್ಲಾಗ್ ಅಡ್ಡಾಡೋಕೆ ಬಿಡುತ್ತಿಲ್ಲ. ಇನ್ನೇನು ಮಾಡಿಯಾನು ಅವಸರಕ್ಕೆ ಬಿದ್ದೋನು?- ನಾನು ಹಾಗೆ ಯೋಚಿಸಿದೆ. ಆದರೆ ತನ್ನದೇ ಕ್ಯಾಂಟೀನಿನಲ್ಲಿ ನಿಂತು ಉದ್ದಕ್ಕೆ ಉಚ್ಚೆ ಹೊಯ್ಯೋದನ್ನು ಬಂಗಾರಿ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವನು ಸಹಿಸಿಕೊಳ್ಳಲು ಹೋಗದೇ, ಮತ್ತೆ ಮತ್ತೆ ಕೆಟ್ಟ ಕೆಟ್ಟ ಭಾಷೆಯಲ್ಲೇ ಬೈದುಹಾಕಿದ. ಮಳೆಯ ಕಾರಣದಿಂದ ಮಂಜ ಆರೋಪಿಸ್ಥಾನದಲ್ಲಿ ನಿಂತು ಎಲ್ಲದನ್ನೂ ತುಟಿಪಿಟಿಕ್ ಎನ್ನದೇ ಕೇಳಿಸಿಕೊಳ್ಳಬೇಕಾಯ್ತು.

ಬಂಗಾರಿ ಸಿಟ್ಟಲ್ಲಿದಾನೆ... ಬಂಗಾರಿ ಮಾತಾಡೋ ಮೂಡಿಗೆ ಬಂದಿದಾನೆ ಎಂಬುದೇ ನನಗೆ ಸಾಕಿತ್ತು. ನಾನು ಮಾತಾಡಿಸಿದಾಗಲೆಲ್ಲ ತುಟಿಯನ್ನೇ ಬಿಚ್ಚದೇ ಮುಖಗಂಟಿಕ್ಕಿಕೊಂಡಿದ್ದ ಬಂಗಾರಿಯ ಮುಖದಲ್ಲಿ ಭಾವನೆಗಳೆಲ್ಲ ಬಿಳಿಯ ಮೋಡಗಳಾಗಿ ತಂಗಾಳಿಯ ಜೊತೆ ಆಟವಾಡುತ್ತಿರುವಂತೆ ಕಾಣಿಸಿದವು. ಸ್ವಲ್ಪ ಕೆಂಪೇರಿದ್ದ ಮುಖ ಈಗ ಸಹಜ ಬಣ್ಣಕ್ಕೆ ತಿರುಗುತ್ತಿತ್ತು. ಒಂದೆರಡು ನಿಮಿಷ ಸುಮ್ಮನಿದ್ದು ಬಂಗಾರಿಯನ್ನು ಬಿಟ್ಟೂಬಿಡದಂತೆ ನೋಡಿದೆ. ಮಳೆ ತನ್ನ ಪ್ರತಾಪ ತೋರಿಸುತ್ತಲೇಯಿತ್ತು. ನಾನು ನನ್ನ ಮಾತನ್ನು ಅವನ ಕಿವಿಗೆ ಹಾಕಲೇಬೇಕೆಂದು ರಹದಾರಿ ಹುಡುಕತೊಡಗಿದೆ. ಟಾರ್ಪಲ್ಲಿನ ಕೆಳಗಿಂದ ಖಾಲಿ ಆಕಾಶದ ಕಡೆ ಸರಿದು, ಮಳೆಯಲ್ಲೇ ಬೀಸುವ ಗಾಳಿಯಲ್ಲೇ ಈಗ ಎಲ್ಲರಿಗೂ ಕೇಳಿಸುವಂತೆ ಕೂಗ ಕೂಗತೊಡಗಿದೆ. ಮಳೆಗೆ, ಗಾಳೀಗೆ, ಬಸ್ಸಿಗೆ, ಲಾರಿಗೆ... ಕೊನೆಗೆ ಬಂಗಾರಿಗೂ ಕೇಳುವಂತೆ ಕೂ... ಗಿದೆ-

``ನಂಗೆ ಕಲಾಂ ಸಿಕ್ಕಿದ್ರು... ನಂಗೆ... ಕಲಾಂ ಸಿಕ್ಕಿದ್ರು...’’

ಅದೆಷ್ಟು ಹೊತ್ತು, ಅದೆಷ್ಟು ಸಾರಿ, ಅದು ಹೇಗ್ಹೇಗೆ... ಕೂಗಿದೆನೋ?! ಯಾರೂ ನಾ ಕೂಗಿದ್ದನ್ನು ಕೇಳಿಸಿಕೊಳ್ಳಲಿಲ್ಲವೋ? ಕೇಳಿಸಿಕೊಂಡರೂ ಕೇಳಿಸಿಕೊಳ್ಳದಂತೆ ನಟಿಸುತ್ತಿದ್ದಾರೋ?- ಅರ್ಥವಾಗದೇ ಗೊಂದಲದಲ್ಲಿ ಬಿದ್ದೆ. ನನ್ನೊಳಗಿನ ಗೊಂದಲಗಳೆಲ್ಲ ಈಟಿ, ಕತ್ತಿ ಹಿಡಿದ ಸೈನಿಕರಂತೆ ನನ್ನ ಮೆದುಳು, ಹೃದಯ, ಮನಸ್ಸನ್ನು ಚುಚ್ಚಿ, ಕತ್ತರಿಸಿ, ಛಿದ್ರ ಛಿದ್ರ ಮಾಡಿಹಾಕಲು ತಯಾರಿ ನಡೆಸುತ್ತಿದ್ದವು. ನಾನು ಸೋಲಲು ಸಾಧ್ಯವೇ ಇರಲಿಲ್ಲ; ಅದೂ ಈಟಿ, ಕತ್ತಿ ಹಿಡಿದ ಸೈನಿಕರಂಥ ಗೊಂದಲಗಳಿಂದ!

ಮಾರನೇ ದಿನ. ಮಳೆ ನಿಂತು ಎಷ್ಟೋ ಹೊತ್ತಾಗಿದೆ. ಚುಮುಚುಮು ಬೆಳಕು. ತಂಗಾಳಿ ಹಿತವಾಗಿ ಬೀಸುತ್ತಿದೆ. ಮೈಮೇಲೆ ಚಳಿಗುಳ್ಳೆಗಳ ರೋಮಾಂಚನ. ಟ್ರಿಣ್... ಟ್ರಿಣ್... ಸದ್ದು ಮಾಡಿಕೊಂಡು ಸೈಕಲ್ಲು ಏರಿ ಹುಡುಗನೊಬ್ಬ ಬರುತ್ತಿದ್ದಾನೆ... ಪೇಪರ್ ಹಾಕೋ ಹುಡುಗ...

``ನಮಸ್ಕಾರ ಸಾರ್... ಒಂದ್ವಿಚಾರ ಗೊತ್ತಾ? ... ನಂಗೆ ಕಲಾಂ... ಸಿಕ್ಕಿದ್ರು...’’

- ಅವನ ಮಾತುಗಳಲ್ಲಿ ಗೊಂದಲವಿರಲಿಲ್ಲ. ಎಷ್ಟು ಸ್ವಚ್ಛವಾಗಿ, ಮುಗ್ಧವಾಗಿ ಮಾತಾಡಿದ. ಪೇಪರ್ ಓದಿ ಮುಗಿಸಿ, ಹಾಲು ತರಲು ಹೋದೆ. ಹಾಲಿನ ಪ್ಯಾಕೇಟು ಕೈಗೆ ಕೊಟ್ಟ ಸತೀಶ, ``ನಂಗೆ ಕಲಾಂ ಸಿಕ್ಕಿದ್ರಣ್ಣಾ...’’ ಎಂದವನೇ ಮತ್ಯಾರಿಗೋ ಹಾಲಿನ ಪ್ಯಾಕೇಟು ಕೊಟ್ಟು ನನಗೆ ಹೇಳಿದ್ದನ್ನೇ ಹೇಳತೊಡಗಿದ. ಹಾಲಿನ ಪ್ಯಾಕೇಟು ಮನೆಯೊಳಗಿಟ್ಟು ಚಾ ಹೀರಿ ಬರೋಣವೆಂದು ಕ್ಯಾಂಟೀನಿನ ಕಡೆ ಹೊರಟೆ. ದಾರಿಯಲ್ಲಿ ಸಿಕ್ಕ ಆಟೋರಿಕ್ಷಾದ ಡ್ರೈವರ್ (ಅದೇ ಅಪಘಾತವಾಗಿತ್ತಲ್ಲ) ``ಓಹ್... ಬನ್ನಿ ಸಾರ್... ಜೊತೇಗ್ ಚಾ ಕುಡಿಯೋಣ’’ ಎಂದು ಬಲವಂತವಾಗಿ ಆಟೋರಿಕ್ಷಾದಲ್ಲಿ ಹತ್ತಿಸಿಕೊಂಡು, ``ಸಾರ್, ನಂಗೂ ಕಲಾಂ ಸಿಕ್ಕಿದ್ರು... ಎಂಥಾ ದೊಡ್ ಮನ್ಷಾಸಾರ್... ನನ್ನಂಥ ಆಟೋ ಓಡ್ಸೋನಿಗೂ ಸಿಕ್ಕು ಮಾತಾಡ್ತಾರೆ ಅಂದ್ರೆ...’’ ಅಂದು ಭಾವಪರವಶನಾಗಿ ಹೋದ.

ಬಂಗಾರಿ ಅದೇ ತಾನೇ ಕ್ಯಾಂಟೀನ್ ಚೊಕ್ಕಗೊಳಿಸಿ, ಸ್ಟೌ ಹಚ್ಚಲು ಮುಂದಾಗಿದ್ದ. ನನ್ನನ್ನು ಕಂಡೊಡನೆ ಬಂದು ಜೋರಾಗಿ ತಬ್ಬಿಕೊಂಡು, ``ಕಲಾಮಜ್ಜ ನಂಗೂನು ಸಿಕ್ಕಿದ್ರು ಕಣೋ...’’ ಎಂದು ಜೋರಾಗಿ ಅತ್ತುಬಿಟ್ಟ.

ನನಗೆ ಎಲ್ಲದೂ ಅಯೋಮಯ. ಕನಸು ಕಾಣುತ್ತಿದ್ದೇನಾ? ಅದೂ ನಡೆದಾಡಿಕೊಂಡೇ! ಎಂದು ಭಯ ನುಸುಳಿಹೋಯ್ತು. ಆ ಭಯ ಹೆಚ್ಚು ಹೊತ್ತು ಇರಲಿಲ್ಲ.

ಮಣ್ಣಲ್ಲಿ ಮಣ್ಣಾದ ನಕ್ಷತ್ರ ಎಲ್ಲರೊಳಗೂ ಫಳಫಳಿಸುತ್ತಿತ್ತು! ಕಲಾಂ ಆಗಿ ಬಂದು ಸಿಗುತ್ತಿತ್ತು!!

ಬಂಗಾರಿ ಕ್ಯಾಂಟೀನಿನ ಬೋರ್ಡು ಬದಲಾಗಿತ್ತು- `ಕಲಾಂ ಕ್ಯಾಂಟೀನ್’.

ಬಂಗಾರಿಗೆ ಸಲಾಂ ಹೇಳಿ ಚಾ ಹೀರುತ್ತಾ ನಿಂತೆ.