ಸುಳ್ಳುಗಳ ಸರಪಣಿಯಲ್ಲಿ ಅರಳುವ ಪ್ರೇಮ ಕತೆ : ಆದಿಲಕ್ಷ್ಮಿ ಪುರಾಣ

ಸುಳ್ಳುಗಳ ಸರಪಣಿಯಲ್ಲಿ ಅರಳುವ ಪ್ರೇಮ ಕತೆ : ಆದಿಲಕ್ಷ್ಮಿ ಪುರಾಣ

ಜೀವನದಲ್ಲಿ ನಾವೆಲ್ಲಾ ಸಾಕಷ್ಟು ಸುಳ್ಳು ಹೇಳಿರ್ತೀವಿ. ಸುಳ್ಳೇ ಹೇಳಿಲ್ಲ ಅನ್ನೋ ವ್ಯಕ್ತಿಗಳು ಸಿಗೋದು ತೀರಾ ವಿರಳ. ಆದ್ರೆ ನಾವ್ ಹೇಳೋ ಸುಳ್ಳು ಎಷ್ಟರಮಟ್ಟಿಗೆ ಇರತ್ತೆ ಅನ್ನೋದು ಮುಖ್ಯವಾಗತ್ತೆ. ಒಂದು ಸುಳ್ಳನ್ನು ಮುಚ್ಚಿ ಹಾಕೋಕೆ ಕೆಲವೊಮ್ಮೆ  ಸಾಕಷ್ಟು ಸುಳ್ಳನ್ನು ಹೇಳಬೇಕಾಗಬಹುದು. ಆದ್ರೆ ಸುಳ್ಳುಗಳು ನಮ್ಮನ್ನು ಫಜೀತಿಗೆ ಸಿಲುಕಿಸೋದಂತು ಸುಳ್ಳಲ್ಲ. ಇವತ್ತು ರಿಲೀಸ್ ಆದ ಆದಿಲಕ್ಷ್ಮಿ ಪುರಾಣ ಸಿನಿಮಾ ಕೂಡ ಸುಳ್ಳುಗಳ ನಡುವೆ ನಡೆಯೋ ಪ್ರೇಮ ಕಥೆಯನ್ನು ಹೊಂದಿದೆ.  

ಸಿನಿಮಾದ ನಾಯಕ, ಆದಿ ಅಂಡರ್ ಕಾಪ್ ಆಫೀಸರ್ ಆಗಿರ್ತಾನೆ.  ಸಿಟಿಯಲ್ಲಿ ನಡೆಯೋ ಡ್ರಗ್ಸ್ ಮಾಫಿಯಾ ಜಾಲವನ್ನು ಪತ್ತೆ ಹಚ್ಚೋದ್ರಲ್ಲಿ ತನ್ನ ಟೀಮ್ ಜತೆ ಕಾರ್ಯಪ್ರವೃತ್ತನಾಗಿರ್ತಾನೆ. ಅಂಡರ್ ಕಾಪ್ ಟೀಮ್ ಅಲ್ಲಿ ಆದಿಗೆ ಈಶ್ವರ್ ಬೆಸ್ಟ್ ಫ್ರೆಂಡ್ ಆಗಿರ್ತಾನೆ. ಆದಿ ಅಮ್ಮ-ಅಪ್ಪನಿಗೆ ಮಗನ ಮದುವೆಯದ್ದೇ ಚಿಂತೆಯಾಗಿರತ್ತೆ. ಏಳು ಜನ ಅತ್ತೆ ಮಕ್ಕಳಲ್ಲಿ ಒಬ್ಬಳನ್ನು ಮದುವೆಯಾಗಲೇ ಬೇಕು ಅಂತ ಇಡೀ ಕುಟುಂಬ ಬೆನ್ನು ಬಿದ್ದಿರತ್ತೆ. ಆದಿ ಸ್ನೇಹಿತ ಈಶ್ವರ್ ಗೆ ಆದಿ ಅಮ್ಮ ಒಂದು ಆಫರ್ ಕೂಡ ಕೊಟ್ಟಿರ್ತಾಳೆ. ಮಗ ಆರಿಸಿಬಿಟ್ಟ 7 ಜನ ಅತ್ತೆ ಮಕ್ಕಳಲ್ಲಿ ಒಬ್ಬಳನ್ನು ನಿನಗೆ ಕೊಟ್ಟು ಮದುವೆ ಮಾಡ್ತೀನಿ. ಆದ್ರೆ ಆದಿನಾ ಹೇಗಾದ್ರು ಮಾಡಿ ಮದುವೆಗೆ ಒಪ್ಪಿಸು ಅಂತ. ಪ್ರತಿ ಬಾರಿ ಆದಿ ಅಪ್ಪ-ಅಮ್ಮ ಯಾವ್ಯಾವುದೋ ಖಾಯಿಲೆ ನೆಪ ಹೇಳಿ ಮಗನನ್ನು ಮನೆಗೆ ಕರೆಸಿ ಮದುವೆ ಪ್ರಪೋಸಲ್ ಮುಂದೆ ಇಡ್ತಿರ್ತಾರೆ. ಇದಕ್ಕೆ ಈಶ್ವರ್ ಮೀಡಿಯೇಟರ್ ಆಗಿರ್ತಾನೆ. ಇತ್ತ ಕಥಾನಾಯಕಿ ಲಕ್ಷ್ಮಿ, ಟ್ರಾವೆಲ್ಸ್ ವೊಂದ್ರಲ್ಲಿ ಕೆಲಸ ಮಾಡ್ತಿರ್ತಾಳೆ. ತಾನು ಸುಂದರಿಯಲ್ಲ ತನ್ನಲ್ಲೇನೋ ಕೊರತೆಯಿದೆ ಅನ್ನೋ ಕೊರಗು ಆಕೆಗಿರತ್ತೆ. ಆದ್ರೆ ಟ್ರಾವೆಲ್ಸ್ ಗೆ ಬರೋ ಕ್ಲೈಂಟ್ಸ್ ಗೆಲ್ಲಾ ಸುಳ್ಳಿನ ಮೇಲೆ ಸುಳ್ಳು ಹೇಳಿ ಟ್ರಿಪ್ ಪ್ಲ್ಯಾನ್ ಮಾಡಿ ಕೊಡ್ತಿರ್ತಾಳೆ. ಎಲ್ ಎಸ್ ಡಿ ಡ್ರಗ್ ಸಪ್ಲೈ ಮಾಡಿ ಜನರನ್ನು ವಂಚಿಸಿ ದುಡ್ಡು ಕೀಳ್ತಿದ್ದ ಗುಂಪಿನ ಹಿಂದೆ ನಾಯಕ ಆದಿ ಬಿದ್ದಿರ್ತಾನೆ. ಒಂದು ದಿನ ಆದಿಯ ಅಂಡರ್ ಕಾಪ್ ಟೀಮ್ ದಂದೆಕೋರರನ್ನು ಬೆನ್ನಟ್ಟಿ ಹೊರಟಾಗ ಆಕಸ್ಮಿಕವಾಗಿ ಮಾರ್ಕೆಟ್ ನಲ್ಲಿ ಲಕ್ಷ್ಮಿ ಕಾಣಿಸ್ತಾಳೆ. ಆಗ ಕಥಾನಾಯಕನಿಗೆ ನಾಯಕಿ ಮೇಲೆ ಲವ್ ಅಟ್ ಫರ್ಸ್ಟ್ ಸೈಟ್ ಆಗತ್ತೆ. ಅಮ್ಮನಿಗೆ ತಾನು ಯಾವ ರೀತಿ ಹುಡುಗಿ ಬೇಕು ಅಂತ ಹೇಳಿಬಂದಿದ್ನೋ ಅದೇ ರೀತಿ ಹುಡುಗಿ ಇವನಿಗೆ ಕಾಣಿಸ್ತಾಳೆ. ಇತ್ತ ಡ್ರಗ್ ಮಾಫಿಯಾ ದಂದೆಕೋರನ್ನು ಹುಡುಕ್ತಾ, ಅತ್ತ ಲಕ್ಷ್ಮಿ ಯಾರು ಏನು ಅಂತ ಪೂರ್ವಾಪರ ತಿಳೀತಾ ನಾಯಕ ಪ್ರೀತಿಯಲ್ಲಿ ಬೀಳ್ತಾನೆ. ಹೇಳಿ ಕೇಳಿ ಕಥಾನಾಯಕಿ ಸುಳ್ಳಿ. ಒಂದು ದಿನ ಆದಿ ಹೋಗೋ ಟ್ರೈನ್ ಅಲ್ಲೇ ಮತ್ತೆ ಸಿಕ್ತಾಳೆ. ಅಲ್ಲಿ ಸಿಗೋ ದಂಪತಿ ಬಳಿ ತನಗೆ ಮದುವೆಯಾಗಿ ಮಗುವಿದೆ ಅನ್ನೋ ಕಥೆ ಕಟ್ತಾಳೆ. ಪ್ರೀತಿ ಕನಸುಕಂಡಿದ್ದ ನಾಯಕನಿಗೆ  ದೊಡ್ಡ ಆಘಾತ ಆಗತ್ತೆ. ನಾಯಕಿ ಹೇಳೊ ಒಂದೇ ಸುಳ್ಳು, ಹಲವಾರು ಮಿಸ್ ಅಂಡರ್ ಸ್ಟ್ಯಾಂಡಿಂಗ್ ತರತ್ತೆ. ಹಾಗಾದ್ರೆ ಆ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಏನು..? ಸುಳ್ಳು ಹೇಳೋರಂದ್ರೆ ಆಗದ ನಾಯಕನಿಗೆ ಲಕ್ಷ್ಮಿ ಹೇಳಿರೋ ಸುಳ್ಳಿಂದ ಎಷ್ಟು ಆಘಾತವಾಗತ್ತೆ..? ಆದಿ ಲಕ್ಷ್ಮಿ ಒಂದಾಗ್ತಾರಾ..? ಡ್ರಗ್ಸ್ ಮಾಫಿಯಾ ಜಾಲವನ್ನು ತಡೆದು ಹಾಕೋಕೆ ನಾಯಕ ಹಾಗೂ ಆತನ ಟೀಮ್ ಗೆ ಆಗತ್ತಾ..? ಸ್ನೇಹಿತ ಈಶ್ವರ್ ಗೆ ಅತ್ತೆ ಮಕ್ಕಳಲ್ಲಿ ಒಬ್ಳನ್ನು ಮದುವೆಯಾಗೋ ಭಾಗ್ಯ ಸಿಗತ್ತಾ..? ಮಗನ ಮದುವೆ ಮಾಡಿಸೋ ಸಲುವಾಗಿ ಆದಿ ಅಪ್ಪ-ಅಮ್ಮ ಮಾಡೋ ಡ್ರಾಮಾ ಫಲಿಸತ್ತಾ..? ಇದೆಲ್ಲಾ ತಿಳ್ಕೋಬೇಕು ಅಂದ್ರೆ ನೀವು ಆದಿಲಕ್ಷ್ಮಿ ಪುರಾಣ ಸಿನಿಮಾ ನೋಡಬೇಕು. 

ಇದೊಂದು ಹಾಸ್ಯ ಮಿಶ್ರಿತ ಲವ್ ಸ್ಟೋರಿ ಸಿನಿಮಾ ಅನ್ನಬಹುದು. ಯಾಕಂದ್ರೆ ಡ್ರಗ್ ಮಾಫಿಯಾ ಅನ್ನೋ ಕಥಾ ಎಳೆ ಸಿನಿಮಾದಲ್ಲಿದ್ರು, ಅದು ಅಷ್ಟೇನು ಮುಖ್ಯವಾಗಿ ಕಾಣಿಸೋದಿಲ್ಲ. ತಾನು ದಪ್ಪ ಇರೋ ಹುಡುಗಿ, ಅಂತ ಸುಂದರಿಯೇನೂ ಅಲ್ಲ ಅನ್ನೋ ನಾಯಕಿ ಭಾವನೆ ಕೂಡ ಕಥೆಯ ಒಂದು ಅಂಶವಾಗಿಯೇ ಕಾಣಿಸತ್ತೆ. ಸಿನಿಮಾದಲ್ಲಿ ಆದಿಯಾಗಿ ನಿರೂಪ್ ಭಂಡಾರಿ, ಲಕ್ಷ್ಮಿಯಾಗಿ ರಾಧಿಕಾ ಪಂಡಿತ್, ಸ್ನೇಹಿತನಾಗಿ ಈಶ್ವರ್ ಪಾತ್ರದಲ್ಲಿ ಯಶ್ ಶೆಟ್ಟಿ, ಆದಿ ಅಪ್ಪ-ಅಮ್ಮನಾಗಿ ಸುಚೇಂದ್ರ ಪ್ರಸಾದ್, ತಾರಾ, ಡ್ರಗ್ಸ್ ಮಾಫಿಯಾ ಜಾಲದಲ್ಲಿ ದೀಪಕ್ ಶೆಟ್ಟಿ, ಮಧು ಹೆಗಡೆ, ಲಕ್ಷ್ಮಿಯ ಅಣ್ಣನಾಗಿ ಭರತ್ ಕಲ್ಯಾಣ್ , ಕೃಷ್ಣ ನಾಡಿಗ್ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ. ತಾರಾ ಅವರು ತೆರೆ ಮೇಲೆ ಬಂದಾಗ ಮುಖದಲ್ಲಿ ನಗು ಮೂಡತ್ತೆ. ಲವರ್ ಬಾಯ್ ಆಗಿ ನಿರೂಪ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅಭಿನಯ ಎಂದಿನಂತೆ ಈ ಸಿನಿಮಾದಲ್ಲೂ ಚೆನ್ನಾಗಿದೆ. ಮನಸ್ಸಿಗೆ ಹತ್ತಿರವಾಗೋ ಪಾತ್ರಗಳಲ್ಲಿ ತಾರಾ ಕಾಣಸಿಗ್ತಾರೆ. ಮಗನ ಮದುವೆ ಮಾಡಿಸೋ ಜವಾಬ್ದಾರಿಯುತ ತಾಯಿಯಾಗಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮನರಂಜಿಸ್ತಾರೆ. ತಾರಾ ಅವರಿಗೆ ತೆರೆಮೇಲೆ ಸುಚೇಂದ್ರ ಪ್ರಸಾದ್ ಸಾಥ್ ನೀಡಿದ್ದಾರೆ. ಇನ್ನೊಂದು ವಿಶೇಷತೆ ಏನಂದ್ರೆ ವಿಲನ್ ಆಗಿ, ಹೀರೋ ಆಗಿ ರಂಜಿಸಿದ್ದ ಯಶ್ ಶೆಟ್ಟಿ ಈ ಸಿನಿಮಾ ಮೂಲಕ ಕಾಮಿಡಿ ಪಾತ್ರಕ್ಕೂ ಸೈ ಅಂತ ತೋರಿಸಿಕೊಟ್ಟಿದ್ದಾರೆ. ಯಾವುದೇ ಪಾತ್ರ ಕೊಟ್ರು ಜೈ ಅನ್ನೋ ಹಾಗೆ ಅಭಿನಯಿಸಿದ್ದಾರೆ. ಕೆಲವೇ ಫ್ರೇಮ್ ಗಳಲ್ಲೂ ಕಂಡರು, ಅಣ್ಣನಾಗಿ ಅಭಿನಯಿಸಿರೋ ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಕಲ್ಯಾಣ್ ಅವರ ಪಾತ್ರ ಚೆನ್ನಾಗಿದೆ.

ಸಿನಿಮಾದ ಹಾಡುಗಳು ಚೆನ್ನಾಗಿವೆ. ಅನೂಪ್ ಭಂಡಾರಿಯವ್ರ ಮ್ಯೂಸಿಕ್ ಇಷ್ಟವಾಗತ್ತೆ. ಎಲ್ಲೋ ಕೇಳಿದ ರೀತಿಯೂ ಅನಿಸಿತ್ತೆ ಜತೆಗೆ ಮನಸಿಗೂ ಹತ್ತಿರವಾಗತ್ತೆ. ಕುಂತಲ್ಲು ನೀನೆ, ನೀಂತಲ್ಲೂ ನೀನೆ ಸಾಂಗ್ ಮನಸ್ಸಿನಲ್ಲಿ ಉಳಿಯತ್ತೆ. ಜತೆಗೆ ಬೇರೆ ಹಾಡುಗಳು ಕೂಡ ಇಷ್ಟವಾಗತ್ತೆ. ಒಂದೊಳ್ಳೆ ಕೌಟುಂಬಿಕ ಸಿನಿಮಾ ನೀಡೋ ಪ್ರಯತ್ನವನ್ನು ತಮಿಳು ನಿರ್ದೇಶಕಿ ಪ್ರಿಯಾ.ವಿ ಮಾಡಿದ್ದಾರೆ. ಪ್ರೀತಾ ಅವರ ಕ್ಯಾಮೆರಾ ಕೈಚಳಕ ಚೆನ್ನಾಗಿ ಕೆಲಸ ಮಾಡಿದೆ. ಕೆಲ ಸೀರಿಯಸ್ ಸಂದರ್ಭ ಉದಾಹರಣೆಗೆ ಕ್ಲೈಮ್ಯಾಕ್ಸ್ ದೃಶ್ಯ ತೆಗೆದುಕೊಂಡ್ರೆ, ಸೀರಿಯಸ್ ಕಾಮಿಡಿ ಎಲ್ಲವನ್ನು ಮಿಕ್ಸ್ ಮಾಡಿರೋ ಹಾಗಿದೆ. ಒಂದು ಸರಿ ನೋಡೋಕೆ ಸಿನಿಮಾ ಬೋರ್ ಅನಿಸಲ್ಲ. ಸುಳ್ಳು ಕೂಡ ಒಂದಷ್ಟು ಖುಷಿ ನೀಡತ್ತೆ, ಸುಂದರ ಸಂಬಂಧಗಳನ್ನು ಕಲ್ಪಿಸಿಕೊಡತ್ತೆ ಅನ್ನೋದು ಸಿನಿಮಾ ನೀಡೋ ಮೆಸೇಜ್ ಗಳಲ್ಲಿ ಒಂದು.