ಡಿಎಸ್ಎಸ್ ನ ಏಳುಬೀಳಿಗೆ ಸಾಕ್ಷಿಯಾದ ಪೂಜಾರಿ

ಡಿಎಸ್ಎಸ್ ನ ಏಳುಬೀಳಿಗೆ ಸಾಕ್ಷಿಯಾದ ಪೂಜಾರಿ

ಕೃಷ್ಣಾ ನದಿಯ ತಟಕ್ಕೆ ಹತ್ತಿರದ ಬೀರನೂರಿನಲ್ಲಿ ಅವತ್ತು ಎಂದಿನಂಥ ದಿನವಾಗಿರಲಿಲ್ಲ. ಇಡಿ ಊರಿಗೆ ಊರೆ ಜಾತಿ ವೈಷಮ್ಯದ ಜ್ವಾಲೆಯಲ್ಲಿ  ಸಿಕ್ಕಿ ಉಸಿರುಕಟ್ಟಿ ಬಿಕ್ಕುತ್ತಿದೆಯೇನೋ ಎನಿಸಿತ್ತು. ಅದಕ್ಕೆ ಕಾರಣ, ಒಂದು ಪ್ರೇಮ ಪ್ರಸಂಗ. ಕಾಲೇಜು ವ್ಯಾಸಂಗಕ್ಕೆಂದು ದಿನಂಪ್ರತಿ ಶಹಾಪುರಕ್ಕೆ ಹೋಗುತಿದ್ದ ದಲಿತರ ಹುಡುಗ ಕರಬಸ್ಯಾ ಮತ್ತು ಮೇಲ್ವರ್ಗದ ಹುಡುಗಿ ಮಾಲತಿ ಮಧ್ಯೆ ಪ್ರಕೃತಿ ಸಹಜ ಆಕರ್ಷಣೆಯೆ ಪರಿಚಯಕ್ಕೆ, ಸ್ನೇಹಕ್ಕೆ, ಸಲುಗೆಗೆ ತಿರುಗಿ ಪೇಮಾಂಕುರವಾಗುವಲ್ಲಿಗೆ ಬಂದು ನಿಂತಿತ್ತು. ನೋಟ್ಸು, ಪುಸ್ತಕ ಇತ್ಯಾದಿ ಏನೋ ಒಂದನ್ನು ಪಡೆಯಲು, ಇವನು ಅವಳ ಮನೆಗೆ ಹೋಗುವುದು, ಅವಳು ಇವನ ಮನೆಗೆ ಬರುವುದು ನಡೆದರೂ, ಸಮಾಜದ ಕಟ್ಟುಪಾಡು, ಸ್ಥಿತಿಗತಿ ಎಲ್ಲವೂ ಯಾರಿಗಾದರೂ ಸಹಜವಾಗಿಯೇ ಅರ್ಥವಾಗುವ ಕಾಲಮಾನವಾದ್ದರಿಂದ ಇದು ಅವರಿಬ್ಬರ ನಡುವಿನ ಒಳ್ಳೆಯ ಸ್ನೇಹ ಎಂಬ ನಂಬುಗೆ ಉಳಿದೆಲ್ಲ ಅನುಮಾನಗಳಿಂದ ಅವರನ್ನು ಬಚಾವು ಮಾಡಿತ್ತು.

ಆದರೆ, ಇದು ಒಬ್ಬರನ್ನೊಬ್ಬರು ಬಿಟ್ಟಿರಲಾರೆವೆಂಬ ಹಂತಕ್ಕೆ  ಯಾವಾಗ ತಲುಪಿತೋ, ಈ ಪ್ರೇಮಿಗಳ ನಡೆಯ ಮೇಲೆ ಅನುಮಾನದ ಹುತ್ತಗಳೆದ್ದವು. ಹದ್ದುಗಣ್ಣಿನ ಪಹರೆ ಸುರುವಾಯಿತು. ಈ ಮುಗ್ಧ ಹುಡುಗ ಹುಡುಗಿಯರ ಸ್ನೇಹ ಬರಿ ಸ್ನೇಹವಾಗಿ ಉಳಿದಿಲ್ಲ. ಅದೀಗ ಪ್ರೇಮವಾಗಿ ಮಾರ್ಪಟ್ಟಿದೆ ಎಂಬೀ ಅನುಮಾನ ದೃಢಪಡುತ್ತಲೇ ಮನುಷ್ಯರೆಂಬವರೆಲ್ಲ ನರಿನಾಯಿಗಳಂತೆ ಘೀಳಿಟ್ಟು ಊರೆಂಬ ಊರೇ ಜಾತಿ ಅಭಿಮಾನದ ಕಾಳ್ಗಿಚ್ಚಿಗೆ ಬಿದ್ದು ಉರಿಯತೊಡಗಿತು. ತಾವು ಮೇಲ್ಜಾತಿಯವರೆಂದು ಅಂದುಕೊಂಡಿದ್ದ ಮೂರ್ಖರು ದಲಿತಕೇರಿಗೆ ಬೆಂಕಿ ಇಟ್ಟರು. ಈ ಅವಘಡದಲ್ಲಿ ಕರಬಸ್ಯಾನ ಮನೆ ಸುಟ್ಟು ಹೋಯಿತು. ಆತ್ಮರಕ್ಷಣೆಗಾಗಿ ದಲಿತರೂ ಅವರೊಂದಿಗೆ ಕೈಕೈ ಮಿಲಾಯಿಸಿ ಬಡಿದಾಡಿದರು. ಜಾತಿಕಲಹ ಕೊನೆಗೆ ಶಹಪುರದ ಪೊಲೀಸ್ ಠಾಣೆಗೆ ಸ್ಥಳಾಂತರಗೊಂಡು ಕರಬಸ್ಯಾ ಸೇರಿದಂತೆ ಅನೇಕ ದಲಿತರನ್ನು ಬಂಧಿಸಲಾಯಿತು.

ಕಲ್ಬುರ್ಗಿಯಲ್ಲಿದ್ದು ಬಿಕಾಂ ಪದವಿ ಪಡೆದು ಅದೇ ಆಗ ಊರಿಗೆ ವಾಪಾಸಾಗಿದ್ದ ಮಲ್ಲಿಕಾರ್ಜುನ ಪೂಜಾರಿಗೆ ಈ ಸಮಸ್ಯೆ ಕಗ್ಗಂಟಾಗಿ ಕಾಡತೊಡಗಿತು. ತಾನು ತಕ್ಷಣಕ್ಕೆ ಏನಾದರೂ ಮಾಡಲೇಬೇಕೆಂಬ ಬೇಗುದಿಯಲ್ಲಿ ಬೇಯತೊಡಗಿದ್ದ ಅವನು, ಸೀದಾ ಶಹಾಪುರಕ್ಕೆ ಬಂದವನೇ ಪರಿಚಿತ ವಕೀಲರನ್ನು ಭೇಟಿಯಾಗಿ, ಬಂಧಿತರೆಲ್ಲರಿಗೂ ಜಾಮೀನು ಕೊಡಿಸಿ, ಅವರನ್ನು ಊರಿಗೆ ಕರೆದುಕೊಂಡು ಬಂದ.

ಈ ಘಟನೆ ಬೀರನೂರಿನಲ್ಲಿ ಹೊಸ ಸಂಚಲನೆಯನ್ನೆ ಮೂಡಿಸಿತು. ತನ್ನ ಗೆಳೆಯರಾದ ಬಾಬುರಾವ್ ಭೂತಾಳೆ, ಶ್ರೀಶೈಲ ಹೊಸ್ಮನಿ ಅವರೊಂದಿಗೆ ಊರಿನಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಆರಂಭಿಸಿದ ಮಲ್ಲಿಕಾರ್ಜುನ , `ಬದಲಾದ ಕಾಲಘಟ್ಟದಲ್ಲಿ ನಾವು ಎಲ್ಲರೂ ಸರಿಸಮಾನ, ಇಲ್ಲಿ ಯಾರೂ ಯಾರಿಗೋ ಗುಲಾಮರಲ್ಲ. ನಾವೂ ಮನುಷ್ಯರೆ, ಪ್ರಾಣಿಗಳಲ್ಲ. ನಮಗೂ ಒಂದು ಮನಸಿದೆ, ವಿವೇಕವಿದೆ, ವ್ಯಕ್ತಿತ್ವ ಇದೆ. ಹಾಗೇ ಬದುಕೂ ಇದೆ' ಎಂದೆಲ್ಲ ಹೇಳುತ್ತ ದಲಿತರನ್ನು ಸಂಘಟಿಸಿದ.  ಸಿದ್ದಲಿಂಗಯ್ಯನವರ `ಇಕ್ರಲಾ ವದೀರ್ಲಾ ಈ ಮಕ್ಕಳ್ ಚರ್ಮ ಎಬ್ರಲಾ' ಎಂದು ಹಾಡಿ, ಅವರಲ್ಲೂ ಶೋಷಣೆಯ ವಿರುದ್ಧದ ಕಹಳೆಯೂದಿಸಿದ. ಎಲ್ಲರನ್ನೂ ಒಟ್ಟುಗೂಡಿಸಿ ಹನ್ನೆರಡನೇ ಶತಮಾನದ ಶರಣ ಚಳುವಳಿ, ಸ್ವಾತಂತ್ರ್ಯ ಚಳುವಳಿ, ಗಾಂಧೀಜಿಯ ಸತ್ಯಾಗ್ರಹ ಮಾರ್ಗಗಳು, ಸಂವಿಧಾನ, ಅಂಬೇಡ್ಕರ್, ಲೋಹಿಯಾರವರ ಜಾತಿವಿನಾಶ ಚಳುವಳಿ ಮೊದಲಾಗಿ ಎಲ್ಲವನ್ನೂ ಅವರಿಗೆ ವಿವರಿಸುತ್ತ ದಲಿತ ಸಮುದಾಯದಲ್ಲಿ ವಿದ್ಯುತ್‌ಸಂಚಲನವನ್ನೇ ಉಂಟುಮಾಡಿದ. ಅಲ್ಲಿವರೆಗೂ ಮೇಲ್ವರ್ಗದವರೆನ್ನಿಸಿಕೊಳ್ಳುತಿದ್ದವರ ಎದುರು ತಲೆತಗ್ಗಿಸಿ ನಡೆಯುತಿದ್ದ ಜನ ಈಗ ಅವರೆದುರು ತಲೆಯೆತ್ತಿ, ಎದೆಯುಬ್ಬಿಸಿ ನಡೆಯತೊಡಗಿದರು.

ಈ ಎಲ್ಲ ಘಟನಾವಳಿಗಳಿಂದ ದಿಗ್ಭ್ರಾಂತರಾದ ಊರಿನ ಮೇಲ್ಜಾತಿಯ ಜನ ಪ್ರೇಮ ಪ್ರಕರಣದಲ್ಲಿ ರಾಜಿಯಾಗಿ ಮತ್ತೆ ಊರಲ್ಲಿ ಶಾಂತಿ ನೆಲೆಸುವಂತಾಗಿತ್ತು.

ಮೇಲ್ನೋಟಕ್ಕೆ ಊರಲ್ಲಿ ಶಾಂತಿಯೇನೋ ನೆಲೆಸಿದಂತಿತ್ತು. ಆದರೆ, ದಲಿತ ಸಂಘರ್ಷ ಸಮಿತಿಯ ದೆಸೆಯಿಂದ ಊರಿನ ದಲಿತರೆಲ್ಲರ ಎದೆಯಲ್ಲೂ ಸ್ವಾಭಿಮಾನದ ಕಿಚ್ಚೊಂದು ತಿದಿ ಊಬಿದಂತೆ ಮಿರುಗತೊಡಗಿತ್ತು.

ಮಲ್ಲಿಕಾರ್ಜುನ ಪೂಜಾರಿ ಇದೇ ಕಿಚ್ಚನ್ನು ಕಲ್ಬುರ್ಗಿಯಲ್ಲಿ ಹೊತ್ತಿಸಿಕೊಂಡಿದ್ದ. ತನ್ನೂರಿನ ಜನರನ್ನೆಲ್ಲರನ್ನೂ ಎದುರು ಹಾಕಿಕೊಂಡು ಈ ಪ್ರೇಮ ಪ್ರಕರಣವನ್ನು ಭೇದೀಸಿದ್ದ ಈ ಕಿಚ್ಚು ಎಂದೋ ಒಂದು ದಿನ ದಮನಿತರ ಪಾಲಿಗೆ ಬೆಳಕಾಗಿಯೆ ತೀರುತ್ತದೆ ಎಂಬ ಅದಮ್ಯ ಆತ್ಮವಿಶ್ವಾಸ ಅವನೆದೆಯಲ್ಲಿ ತುಂಬಿಕೊಂಡಿತ್ತು.

ಬಿಕಾಂ ವ್ಯಾಸಂಗಕ್ಕಾಗಿ ಬೀರನೂರಿನಿಂದ ಕಲ್ಬುರ್ಗಿ ಸೇರಿದ್ದ ಚಿಗುರು ಮೀಸೆಯ, ಕನಸುಕಂಗಳ ಯುವಕ ಮಲ್ಲಿಕಾರ್ಜುನ, 1980ರ ದಶಕದ ಆರಂಭದಲ್ಲಿ ಅದೇ ಆಗ ಅಲ್ಲಲ್ಲಿ ಸುಳಿಗಾಳಿಯಾಗಿ ಆರ್ಭಟಿಸುತ್ತ ಬಿರುಗಾಳಿಯಾಗುವ ಸಾಧ್ಯತೆಯನ್ನು ತನ್ನೊಡಲಲ್ಲೆ ಕಾಪಿಟ್ಟುಕೊಂಡು ಬೆಳೆಯುತಿದ್ದ ದಲಿತ ಚಳುವಳಿಯ ಸುಳಿಗೆ ಸಿಕ್ಕಿಬಿದ್ದಿದ್ದ.

ಆಗ ಕಲ್ಬುರ್ಗಿ‌ಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದ ಅರ್ಜುನ್ ಭದ್ರೆ, ಬಸಣ್ಣ ಸಿಂಗೆ, ಬಸವರಾಜ ಚಕ್ರವರ್ತಿ, ವಿಠ್ಠಲ ದೊಡ್ಮನಿ ಮತ್ತು ಡಿಜಿ ಸಾಗರ ಅವರ ಸಂಪರ್ಕದಲ್ಲಿ ತನ್ನೆದುರು ಹೊಸ ಮನ್ವಂತರವೆ ತೆರೆಯಿತೇನೋ ಎಂಬಂತೆ ದಲಿತ ಸಂಘರ್ಷ ಸಮಿತಿಯ ತತ್ವಾದರ್ಶಗಳಿಗೆ ತನ್ನನ್ನೇ ಸಮರ್ಪಿಸಿಕೊಂಡ. ಡಿಎಸ್ಸೆಸ್ ಎಂದರೆ ಅದು ದಲಿತರ ಶತಶತಮಾನದ ಅಜ್ಞಾನ, ಮೌಡ್ಯದ ಅಂಧಕಾರಗಳನ್ನು ಕಳೆಯಲು ಬಂದ ಮಹಾಬೆಳಗು. ಶೋಷಣೆಯ ಪರಂಪರೆಯನ್ನು ಸುಟ್ಟು ಹಾಕಲಿರುವ ಕಾಳ್ಗಿಚ್ಚು, ಸ್ವಾಭಿಮಾನದ, ಸಮಸಮಾಜವನ್ನು ಕಟ್ಟಲಿರುವ ಹುಮ್ಮಸ್ಸು ಎಂದೇ ನಂಬಿದ.

ಪೂಜಾರಿ ಸ್ಥಿತಿವಂತ ಮನೆತನಕ್ಕೆ ಸೇರಿದವನಾಗಿದ್ದರೂ ಅವನದು ಇಲ್ಲದವರಿಗಾಗಿ ಮರುಗುವ ಹೂಮನ. ವಿದ್ಯಾಭ್ಯಾಸ ಪೂರೈಸಿ ಊರಿಗೆ ಮರಳುತ್ತಲೇ, ಜರುಗಿದ ಪ್ರೇಮಪ್ರಕರಣ ಅವನ ಮುಂದಿನ ದಾರಿಯನ್ನೂ ಸ್ಪಷ್ಟಗೊಳಿಸಿತ್ತು. ನಿರ್ಗತಿಕರು, ದುರ್ಬಲರಿಗಾಗಿನ ಹೋರಾಟದ ಹಾದಿ ನಿಚ್ಛಳವಾಗಿತ್ತು. ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಬದುಕನ್ನೆ ಮುಡಿಪಾಗಿಡಲು ಜೀವ ತಲ್ಲಣಿಸುತಿತ್ತು.

ಈಗ ಯಾದಗಿರಿ ಜಿಲ್ಲೆಗೆ ಸೇರಿರುವ ಸಗರನಾಡು ಎಂದೇ ಕರೆಸಿಕೊಳ್ಳುವ ಶಹಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗ  ಅಮಾನವೀಯ ದೇವದಾಸಿ ಪದ್ಧತಿ ಹಾಗೇ ಮುಂದುವರೆದಿತ್ತು. ಈ ಬಗ್ಗೆ  ಜನಜಾಗ್ರತಿ ಮಾಡಬೇಕಾದ ಅವಶ್ಯಕತೆಯನ್ನು ಕಂಡುಕೊಂಡ ಮಲ್ಲಿಕಾರ್ಜುನ ಪೂಜಾರಿ, ದಲಿತ ಸಂಘರ್ಷ ಸಮಿತಿ ಹುಡುಗರ ತಂಡವನ್ನು ಕಟ್ಟಿದರು. ದೇವದಾಸಿ ಪದ್ಧತಿ ಯ ಹಿನ್ನೆಲೆ, ವಂಚನೆ ಹಾಗೂ ಶೋಷಣೆಗಳನ್ನು ಸಾದರಪಡಿಸುವ ಬೀದಿನಾಟಕ ಪ್ರದರ್ಶನ ಲಾವಣಿಪದಗಳನ್ನು ಹಾಡುತ್ತ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿದರು.

ಬಿ. ಕೃಷ್ಣಪ್ಪ ಅವರ ತಾತ್ವಿಕ ಚಿಂತನೆಗೆ ಮಾರು ಹೋಗಿದ್ದ ಮಲ್ಲಿಕಾರ್ಜುನ, ದಲಿತ ಸಾಹಿತ್ಯದ ಮಹಾನ್ ಓದುಗನೂ ಆಗಿದ್ದ. ಮನೆ ಹೊಕ್ಕರೆ, ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಕೆ.ಬಿ ಸಿದ್ದಯ್ಯರ ಕೃತಿಗಳೇ ಕಣ್ಣಿಗೆ ಬೀಳುತ್ತಿದ್ದವು.

1972ರಲ್ಲಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದ ದಲಿತ ಕ್ರಿಯಾ ಸಮಿತಿ, ಮುಂದೆ ಬಿ. ಕೃಷ್ಣಪ್ಪರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯಾಯಿತು. ಹೆಗಡೆ ಸರ್ಕಾರದ ಸಂದರ್ಭದಲ್ಲಿ ಸಮಿತಿಯ ನಾಯಕರನ್ನು ಅಧಿಕಾರದ ವರ್ತುಳದೊಳಗೆ ಸೆಳೆಯಲಾಯಿತು.  ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ, ದಲಿತ ಸಂಘರ್ಷ ಸಮಿತಿ ಯಾವುದೆ ರಾಜಕೀಯ ಪಕ್ಷದ ಬಾಲಂಗೋಚಿಯಾಗುವುದರ ವಿರುದ್ಧ ದನಿ ಎತ್ತಿದರೂ ಪ್ರಯೋಜನವಾಗಲಿಲ್ಲ. ಮೀಸಲಾತಿ ಬೇಡಿಕೆಯೊಂದನ್ನೆ ಆದರಿಸಿದ ಹೋರಾಟಗಳು ಸಮಿತಿಯನ್ನೇ ಛಿದ್ರಗೊಳಿಸಿದವು. ಜಗಜೀವನರಾಮರನ್ನೆ ಆದರ್ಶವಾಗಿಸಿಕೊಂಡ ದಂಡೋರ, ಪ್ಯಾಂಥರ್ಸ್, ಮೊದಲಾಗಿ ತುಂಡಾದ ಸಮಿತಿಗಳು ಈಗ ಒಂದೆ ಎರಡೇ? ಇಂಥ ಸಮಿತಿಗಳಿಗೆ ಜಿಲ್ಲೆಗೊಬ್ಬ, ತಾಲೂಕಿಗೊಬ್ಬ ಸ್ವಯಂಘೋಷಿತ ನಾಯಕರು ಹುಟ್ಟಿದರು. ಎಡ, ಬಲ ಜಗಳಗಳ ಮಧ್ಯೆ , ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಏಳು ಮೀಸಲು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳೆ ಆಯ್ಕೆಯಾಗಿದ್ದು ಸಮಿತಿಯ ಶವಪೆಟ್ಟಿಗೆಯ ಮೇಲೆ ಹೊಡೆದ ಕೊನೆಯ ಮೊಳೆ ಇರಬಹುದೇ?

ಇಂಥದೊಂದು ಪ್ರಶ್ನೆಯೊಂದಿಗೆ ಇನ್ನೊಂದು ವೈರುಧ್ಯವೆಂದರೆ ಅಂದು ದಲಿತ ಶಕ್ತಿಯ ರಾಜಕೀಕರಣವನ್ನು ವಿರೋಧಿಸಿದ್ದ ಮಲ್ಲಿಕಾರ್ಜುನ ಪೂಜಾರಿ ಅವರು ಸಹ ಈಗ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ. ಆಗ ದಲಿತ ಸಂಘರ್ಷ ಸಮಿತಿ ಈಗ ಕಾಂಗ್ರೆಸ್ ‌‌ನೊಂದಿಗೆ  ಸಾಮಾಜಿಕ ಕಳಕಳಿಯ ತಮ್ಮ ಹಾದಿಯಲ್ಲಿ ಮುನ್ನಡೆದಿರುವ ಪೂಜಾರಿ, ಪ್ರಾಮಾಣಿಕತೆ, ಬದ್ಧತೆಗಳಂಥ ಅಪರೂಪದ ಗುಣಗಳನ್ನು ಮೈಗೂಡಿಸಿಕೊಂಡು ಮಾಗುತ್ತಲೇ ಬಹುದೂರ ಸಾಗಿ ಬಂದಿದ್ದಾರೆ. ಇದು ಡಿಎಸ್ ಎಸ್ ಪಡೆದಿರುವ ಮತ್ತೊಂದು ಮಜಲು ಇರಬಹುದೆ? ಅಥವಾ ಈ ಪ್ರಶ್ನೆಗಳಿಗೆಲ್ಲ ಉತ್ತರ ಸಮೀಪದಲ್ಲೆ ಗುಡ್ಡವಾಗಿ ಮಲಗಿರುವ ಬುದ್ಧನ ಕಿರುನಗೆಯಲ್ಲಿರಬಹುದೇ?