ಸದ್ದಿಲ್ಲದೆ ಜಾರಿ ಹೋದ ಒಂದು ಚಾರಿತ್ರಿಕ ದಿನ

ಸದ್ದಿಲ್ಲದೆ ಜಾರಿ ಹೋದ ಒಂದು ಚಾರಿತ್ರಿಕ ದಿನ

1969ರ ಜುಲೈ 19 ರಂದು ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಖಾಸಗಿ ಬ್ಯಾಂಕುಗಳ ಯುಗಕ್ಕೆ ಅಂತ್ಯ ಹಾಡಿದಾಗ ಇದ್ದ ಕನಸುಗಳು ಸಾವಿರಾರು. ಹಳ್ಳಿ ಹಳ್ಳಿಗೆ ಬ್ಯಾಂಕಿಂಗ್ ಸೇವೆ, ಗ್ರಾಮೀಣ ಉದ್ಯೋಗಕ್ಕೆ ಪ್ರೋತ್ಸಾಹ, ನಗರೀಕರಣ ಪ್ರಕ್ರಿಯೆಗೆ ಹಣಕಾಸು ಪ್ರೋತ್ಸಾಹ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಅಭಿವೃದ್ಧಿ, ಬಡತನ ನಿವಾರಣೆ, ಸರ್ಕಾರದ ಜನಪರ ಯೋಜನೆಗಳ ಜಾರಿಗೆ ಸಹಕಾರ ಇತ್ಯಾದಿ. ಇದರೊಂದಿಗೆ ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಲುಪಿಸುವ ಮಹದಾಸೆ. ಬ್ಯಾಂಕುಗಳಲ್ಲಿ ಖಾತೆ ತೆರೆಯುವುದೇ ಒಂದು ನಿರ್ದಿಷ್ಟ ವರ್ಗದ ಹಕ್ಕು ಎನ್ನುವಂತಾಗಿದ್ದ ಸಂದರ್ಭದಲ್ಲಿ ಯಾರು ಬೇಕಾದರೂ ಬ್ಯಾಂಕ್ ಶಾಖೆಯೊಳಗೆ ಹೋಗಿ ತಮ್ಮ ಖಾತೆ ತೆರೆಯಲು ಒತ್ತಾಯಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು ರಾಷ್ಟ್ರೀಕರಣದ ಮಹತ್ತರವಾದ ಕೊಡುಗೆ ಎನ್ನುತ್ತಾರೆ ನಾ ದಿವಾಕರ.

ನಾಲ್ಕನೆಯ ಔದ್ಯಮಿಕ ಕ್ರಾಂತಿಯ ಡಿಜಿಟಲೀಕರಣ ಯುಗದ ಹೊಸ್ತಿಲಲ್ಲಿರುವ ಭಾರತ ಇನ್ನು ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಗಳ ಅರ್ಥವ್ಯವಸ್ಥೆಯಾಗಿ ವಿಶ್ವ ಭೂಪಟದಲ್ಲಿ ಕಂಗೊಳಿಸಲು ಸಜ್ಜಾಗುತ್ತಿದೆ. ಇದರ ರೂಪಾಯಿ ಮೌಲ್ಯ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕುತ್ತಾ ಕುಳಿತರೆ ನೆರೆತ ಕೂದಲು ಉದುರಿಹೋಗುವ ಸಾಧ್ಯತೆಗಳೇ ಹೆಚ್ಚು. ಇರಲಿ, ಇದೊಂದು ಭ್ರಮೆ. ಜಾಗತೀಕರಣದ ನಂತರ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮದಂತಾಗುತ್ತದೆ ಎನ್ನುವ ಭ್ರಮೆಯಂತೆಯೇ ಇದೂ ಸಹ. ಭಾರತ ಬಲಪಂಥೀಯ ಸಾಂಸ್ಕೃತಿಕ ರಾಜಕಾರಣವನ್ನು ಅನುಸರಿಸುತ್ತಿದೆ. ಈ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಧರ್ಮ ಕೇಂದ್ರಿತ ಆಡಳಿತ ಪರಿಕಲ್ಪನೆಗೆ ದೇಶದ ಮತದಾರರ ಒಲವೂ ವ್ಯಕ್ತವಾಗಿದೆ. ಹಾಗೆಯೇ ಭಾರತದ ಆಳುವ ವರ್ಗಗಳು ಬಲಪಂಥೀಯ ರಾಜಕಾರಣಕ್ಕೆ ಪೂರಕವಾದ ನವ ಉದಾರವಾದಿ ಆರ್ಥಿಕ ನೀತಿಯನ್ನೂ ಅನುಸರಿಸುತ್ತಿದ್ದು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ತಮ್ಮ ಆರ್ಥಿಕ ನೀತಿಗಳನ್ನು ರೂಪಿಸುತ್ತಿದ್ದಾರೆ. ಈ ಬಹು ಆಯಾಮದ ನೀತಿಗಳ ನಡುವೆಯೇ ಎಡಪಂಥೀಯ ಎನ್ನಬಹುದಾದ ಜನಪರ ನೀತಿಗಳನ್ನೂ, ಶೋಷಿತ ವರ್ಗಗಳ ಸಬಲೀಕರಣ ನೀತಿಗಳನ್ನೂ ಉಳಿಸಿಕೊಂಡು ಬರಲು ಭಾರತದ ಪ್ರಭುತ್ವ ಶ್ರಮಿಸುತ್ತಿದೆ. 

ಈ ನಡುವೆಯೇ ನವ ಉದಾರವಾದದ ವಾರಸುದಾರರು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಡಿಜಿಟಲೀಕರಣ ವಿದ್ಯುನ್ಮಾನ ಮಾರ್ಗವಾದರೆ ಮಾರುಕಟ್ಟೆಯ ಮೇಲಿನ ನಿಯಂತ್ರಣ ಆಡಳಿತಾತ್ಮಕ ಮಾರ್ಗ. ತಮ್ಮ ಎರಡನೆಯ ಪಾಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಂಡವಾಳಿಗರಿಗೆ ಮುಕ್ತ ಅವಕಾಶ ನೀಡಲು ಬಹುತೇಕ ಎಲ್ಲ ಕ್ಷೇತ್ರಗಳನ್ನೂ ಮುಕ್ತಗೊಳಿಸುತ್ತಿದ್ದಾರೆ. ಚಿಲ್ಲರೆ ವ್ಯಾಪಾರ ಕ್ಷೇತ್ರ, ಕೃಷಿ ಉತ್ಪಾದನೆ, ಕೃಷಿ ಸಲಕರಣೆಗಳ ತಯಾರಿಕೆ, ಗಣಿಗಾರಿಕೆ, ರಕ್ಷಣಾ ಸಾಮಗ್ರಿಯ ಪೂರೈಕೆ, ರೈಲ್ವೆ ಇಲಾಖೆ, ಉನ್ನತ ಶಿಕ್ಷಣ, ವಿಶ್ವವಿದ್ಯಾಲಯ ಮತ್ತು ಕೊನೆಯದಾಗಿ ವಿಮಾ ಕ್ಷೇತ್ರ. ವಿಮೆ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳಕ್ಕೆ ಅವಕಾಶ ನೀಡುವ ಮೂಲಕ ಈ ದೇಶದ ಆರೋಗ್ಯ ಕ್ಷೇತ್ರವನ್ನೂ ಕ್ರಮೇಣ ಕಾರ್ಪೋರೇಟ್ ವಶಕ್ಕೊಪ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಎಲ್ಲ ಖಾಸಗೀಕರಣ ಪ್ರಕ್ರಿಯೆಗಳ ನಡುವೆ ಭಾರತದ ಬ್ಯಾಂಕಿಂಗ್ ಉದ್ಯಮ ಇನ್ನೂ ಕೊಂಚ ಕಾಲ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎನ್ನುವುದೇ ಸಮಾಧಾನಕರ ಅಂಶ. ಏಕೆಂದರೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸರ್ಕಾರದ ಹಲವಾರು ಅಗತ್ಯತೆಗಳನ್ನು ಪೂರೈಸುವ ವಾಹಿನಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದ ಅರ್ಥವ್ಯವಸ್ಥೆಯನ್ನು ಸದೃಢವಾಗಿರಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕೊಡುಗೆಯೂ ಮಹತ್ವ ಗಳಿಸುತ್ತದೆ. ಸರ್ಕಾರದ ಹಲವಾರು ಸಬಲೀಕರಣ ಯೋಜನೆಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಒತ್ತಾಸೆಯಾಗಿ ನಿಂತಿದೆ. ಹಾಗಾಗಿಯೇ ಖಾಸಗೀಕರಣದ ಭರಾಟೆಯ ನಡುವೆಯೂ ಮೋದಿ ಸರ್ಕಾರ ಬ್ಯಾಂಕಿಂಗ್ ವ್ಯವಸ್ಥೆಯ ರಕ್ಷಣೆಗೆ 78000 ಕೋಟಿ ರೂಗಳನ್ನು ಒದಗಿಸುತ್ತದೆ.

ಇಷ್ಟರ ನಡುವೆ ಈ ದೇಶದ ನಾಗರಿಕ ಪ್ರಜ್ಞೆಗೆ, ಸಾರ್ವಜನಿಕ ಪ್ರಜ್ಞೆಗೆ ಒಂದು ಸುವರ್ಣ ಯುಗದ ಸುವರ್ಣ ಮಹೋತ್ಸವದ ಸುವರ್ಣ ಸಂಭ್ರಮ ಮರೆತುಹೋಗಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ದಿನಾಚರಣೆಗಳನ್ನು ಆಚರಿಸುವುದೇ ಮಾರುಕಟ್ಟೆ ಆರ್ಥಿಕತೆಯ ಒಂದು ಭಾಗವಾಗಿರುವ ಸಂದರ್ಭದಲ್ಲಿ, ದಿನಕ್ಕೊಂದು ಆಚರಣೆಗಳಲ್ಲಿ ತೊಡಗುವ ಭಾರತದಂತಹ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಐವತ್ತು ವರ್ಷಗಳನ್ನು ಪೂರೈಸಿದ ಸಂದರ್ಭ ಸದ್ದಿಲ್ಲದೇ ಕಳೆಯುವುದು ನಿಜಕ್ಕೂ ವಿಷಾದನೀಯ.

ಯಾರು ಸಂಭ್ರಮಿಸಬೇಕು ? ಈ ಪ್ರಶ್ನೆ ಮುಖ್ಯವಾದದ್ದು. ಏಕೆಂದರೆ ಬ್ಯಾಂಕ್ ರಾಷ್ಟ್ರೀಕರಣ ಒಂದು ಮಹಾ ಪ್ರಮಾದ ಎಂದು ಮಾನ್ಯ ಪ್ರಧಾನ ಮಂತ್ರಿಗಳು ಎರಡು ವರ್ಷಗಳ ಹಿಂದೆಯೇ ಘೋಷಿಸಿ ಬಿಟ್ಟಿದ್ದಾರೆ. ಈ ಮಹಾ ಪ್ರಮಾದವೇ ಈ ದೇಶದ ಅಸಂಖ್ಯಾತ ಜನತೆಗೆ ಮಹಾಪ್ರಸಾದವಾಗಿ ಪರಿಣಮಿಸಿದ್ದನ್ನು ನಾವಾದರೂ ನೆನೆಯಬೇಕಲ್ಲವೇ ? ನಾವು ಎಂದರೆ ? ಬ್ಯಾಂಕ್ ಉದ್ಯೋಗಿಗಳು ಮಾತ್ರವೇ ಅಲ್ಲ, ಬ್ಯಾಂಕ್ ಸೌಲಭ್ಯ ಪಡೆದು ವಿದೇಶಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಮೆರೆಯುತ್ತಿರುವ ಔದ್ಯಮಿಕ ದೊರೆಗಳು ಮಾತ್ರವೇ ಅಲ್ಲ. ಇಲ್ಲಿ ಸಂಭ್ರಮಿಸಬೇಕಾದ ನಾವು ಎಂದರೆ ಈ ದೇಶದ ರೈತ ಸಮುದಾಯ, ಕಿರಾಣಿ ವರ್ತಕರು, ಸಣ್ಣ ಪುಟ್ಟ ಅಂಗಡಿ ಮುಗ್ಗಟ್ಟುಗಳ ಮಾಲೀಕರು, ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಮಾಲೀಕರು, ಪಿಂಚಣಿದಾರರು, ಸಾರ್ವಜನಿಕ ಹಾಗೂ ಖಾಸಗಿ ಉದ್ದಿಮೆಯ ನೌಕರರು, ವಿದ್ಯಾರ್ಥಿಗಳು ಮತ್ತು ನಿತ್ಯ ಜೀವನಕ್ಕಾಗಿ ದಿನವಿಡೀ ಬೆವರು ಸುರಿಸುವ ದುಡಿಯುವ ವರ್ಗಗಳು.

ಇತ್ತೀಚೆಗೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನವಾಗಿರುವುದು ಅಪೇಕ್ಷಣೀಯ ಅಲ್ಲದಿದ್ದರೂ ಇನ್ನೂ ರಾಷ್ಟ್ರೀಕೃತ ಸ್ವರೂಪ ಉಳಿಸಿಕೊಂಡಿವೆಯಲ್ಲಾ ಎಂಬ ಸಮಾಧಾನದೊಂದಿಗೇ ನಾವು 1969ರ ಸಂದರ್ಭವನ್ನು ನೆನೆಯಬೇಕಾಗುತ್ತದೆ. 1961ರ ಚೀನಾ ಯುದ್ಧ,  1965ರ ಪಾಕಿಸ್ತಾನ ಯುದ್ಧದ ನಂತರ ದೇಶದಲ್ಲಿ ತಲೆದೋರಿದ್ದ ಆಹಾರದ ಕೊರತೆ, ನಿರುದ್ಯೋಗದ ಸಮಸ್ಯೆ, ಬಂಡವಾಳದ ಕೊರತೆ ಮತ್ತು ಅರ್ಥವ್ಯವಸ್ಥೆಗೆ ಮಾರಕವಾಗಿದ್ದ ಔದ್ಯಮಿಕ ಬಿಕ್ಕಟ್ಟು ಅಂದಿನ ಪ್ರಭುತ್ವಕ್ಕೆ ಬಿಡಿಸಲಾರದ ಕಗ್ಗಂಟಾಗಿತ್ತು. ಎರಡು ಯುದ್ಧಗಳು ಸೃಷ್ಟಿಸಿದ ಆಹಾರದ ಕೊರತೆ ಮತ್ತು ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಕಠಿಣ ನಿರ್ಧಾರಗಳು ಅನಿವಾರ್ಯವಾಗಿದ್ದವು. ಹಾಗೆಯೇ ಕೆಲವು ದಿಟ್ಟ ನಿರ್ಧಾರಗಳೂ ಅಗತ್ಯವಾಗಿದ್ದವು. ಆಹಾರ ಪದಾರ್ಥಗಳ ಉತ್ಪಾದನೆಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳು, ಹಸಿರುಕ್ರಾಂತಿಯ ಪರಿಕಲ್ಪನೆ ಮತ್ತು ಔದ್ಯಮಿಕ ಪ್ರಗತಿಯ ನೀತಿಗಳಿಗೆ ಬಂಡವಾಳವನ್ನು ಪೂರೈಸಲು ಸಾಂಸ್ಥಿಕ ನೆರವು ಅತ್ಯಗತ್ಯವಾಗಿತ್ತು. ಈ ಸಂದರ್ಭದಲ್ಲಿ ಸಂಪೂರ್ಣ ಖಾಸಗಿ ಒಡೆತನದಲ್ಲಿದ್ದ ಬ್ಯಾಂಕುಗಳು ಒಂದೆಡೆ ಪ್ರಾದೇಶಿಕತೆ ಮತ್ತೊಂದೆಡೆ ಸಾಮುದಾಯಿಕ ಹಿತಾಸಕ್ತಿಗಳಿಗೆ ಹೆಚ್ಚು ಬದ್ಧವಾಗಿದ್ದವೇ ಹೊರತು, ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಲಿಲ್ಲ.

ಹಸಿರು ಕ್ರಾಂತಿಯ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಬಂಡವಾಳ ಹೂಡುವುದರೊಂದಿಗೇ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿಕರಿಗೆ ಹಣಕಾಸು ನೆರವು ನೀಡುವ ಸಾಂಸ್ಥಿಕ ವ್ಯವಸ್ಥೆ ಅತ್ಯಗತ್ಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಉಂಟಾದ ಬಿಕ್ಕಟ್ಟು ವಲಸಿಗರ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳು ನಿಚ್ಚಳವಾಗಿತ್ತು. ನಗರೀಕರಣ ಪ್ರಕ್ರಿಯೆಯೇ ಬಾಲ್ಯಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ವಲಸಿಗರ ಸಮಸ್ಯೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಬಹುದಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಕೈಗಾರಿಕೆಗಳಿಗೆ ಕಾಯಕಲ್ಪ ಒದಗಿಸುವುದು, ಸಣ್ಣ ಪಟ್ಟಣಗಳಲ್ಲಿನ ಸಣ್ಣ ಪ್ರಮಾಣದ ಕೈಗಾರಿಕೆಗಳು, ಗುಡಿ ಕೈಗಾರಿಕೆ, ಕೈಮಗ್ಗ ಮತ್ತು ಕರಕುಶಲ ಉದ್ಯಮ, ಸಣ್ಣ ವ್ಯಾಪಾರ ಇಂತಹ ಕ್ಷೇತ್ರದಲ್ಲಿ ಬಂಡವಾಳದ ಪೂರೈಕೆ ಅತ್ಯವಶ್ಯವಾಗಿತ್ತು. ಮತ್ತೊಂದೆಡೆ ಪ್ರಭುತ್ವ ಅನುಸರಿಸುತ್ತಿದ್ದ ಅರೆ ಸಮಾಜವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲು, ಯುದ್ಧಪರಂಪರೆಯಿಂದ ಜನಸಾಮಾನ್ಯರನ್ನು ರಕ್ಷಿಸಿ ಒಂದು ಹೊಸ ಜಗತ್ತನ್ನು ಸೃಷ್ಟಿಸಲು ಜನಪರ ಎನ್ನಬಹುದಾದ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಅಧಿಕಾರಶಾಹಿಯಿಂದ ಮುಕ್ತವಾದ ಒಂದು ಸಾಂಸ್ಥಿಕ ನೆಲೆ ಸರ್ಕಾರಕ್ಕೆ ಅತ್ಯಗತ್ಯವಾಗಿತ್ತು. ದುರ್ಬಲರ ಸಬಲೀಕರಣ, ಸಬಲರ ಮರುಸಬಲೀಕರಣ, ಶೋಷಿತರ ವಿಮೋಚನೆ ಮತ್ತು ಶೋಷಕರ ಪೋಷಣೆ ಈ ನಾಲ್ಕೂ ಉದ್ದೇಶಗಳಿಂದ ಭಾರತೀಯ ಪ್ರಭುತ್ವಕ್ಕೆ ಒಂದು ಸಾಂಸ್ಥಿಕ ನೆಲೆ ಅತ್ಯವಶ್ಯವಾಗಿತ್ತು. ಇದರ ಪರಿಣಾಮವೇ ಬ್ಯಾಂಕುಗಳ ರಾಷ್ಟ್ರೀಕರಣ. 

19-7-1969ರಂದು ಕೇಂದ್ರ ಸರ್ಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಖಾಸಗಿ ಬ್ಯಾಂಕುಗಳ ಯುಗಕ್ಕೆ ಅಂತ್ಯ ಹಾಡಿದಾಗ ಇದ್ದ ಕನಸುಗಳು ಸಾವಿರಾರು. ಹಳ್ಳಿ ಹಳ್ಳಿಗೆ ಬ್ಯಾಂಕಿಂಗ್ ಸೇವೆ, ಗ್ರಾಮೀಣ ಉದ್ಯೋಗಕ್ಕೆ ಪ್ರೋತ್ಸಾಹ, ನಗರೀಕರಣ ಪ್ರಕ್ರಿಯೆಗೆ ಹಣಕಾಸು ಪ್ರೋತ್ಸಾಹ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಅಭಿವೃದ್ಧಿ, ಬಡತನ ನಿವಾರಣೆ, ಸರ್ಕಾರದ ಜನಪರ ಯೋಜನೆಗಳ ಜಾರಿಗೆ ಸಹಕಾರ ಇತ್ಯಾದಿ. ಇದರೊಂದಿಗೆ ಜನಸಾಮಾನ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಲುಪಿಸುವ ಮಹದಾಸೆ. ಬ್ಯಾಂಕುಗಳಲ್ಲಿ ಖಾತೆ ತೆರೆಯುವುದೇ ಒಂದು ನಿರ್ದಿಷ್ಟ ವರ್ಗದ ಹಕ್ಕು ಎನ್ನುವಂತಾಗಿದ್ದ ಸಂದರ್ಭದಲ್ಲಿ ಯಾರು ಬೇಕಾದರೂ ಬ್ಯಾಂಕ್ ಶಾಖೆಯೊಳಗೆ ಹೋಗಿ ತಮ್ಮ ಖಾತೆ ತೆರೆಯಲು ಒತ್ತಾಯಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು ರಾಷ್ಟ್ರೀಕರಣದ ಮಹತ್ತರವಾದ ಕೊಡುಗೆ ಎನ್ನಬಹುದು. ಬ್ಯಾಂಕ್ ಉದ್ಯೋಗಿಗಳೂ ಸಹ ಇಂತಹ ಸಂದರ್ಭಕ್ಕಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಲೇಬೇಕು. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಎಐಬಿಇಎ) ನಡೆಸಿದ ಅವಿರತ ಹೋರಾಟದ ಫಲ ರಾಷ್ಟ್ರೀಕರಣ ಎನ್ನುವುದು ಅತಿಶಯೋಕ್ತಿಯಾಗಲಾರದು.

ರಾಷ್ಟ್ರೀಕರಣದ ನಂತರ ಬ್ಯಾಂಕುಗಳು ಹೆಚ್ಚು ಜನಸ್ನೇಹಿಯಾದವು. ಜನಸಾಮಾನ್ಯರಿಗೆ ಹತ್ತಿರವಾದವು. ತಮ್ಮ ಸಮಸ್ಯೆಗಳನ್ನು ಆಲಿಸಲು, ತಮ್ಮ ಆರ್ಥಿಕ ಅವಶ್ಯಕತೆಗಳಿಗೆ ಸ್ಪಂದಿಸಲು, ತಮ್ಮ ವ್ಯಾಪಾರಕ್ಕೆ, ವ್ಯವಸಾಯಕ್ಕೆ, ಬದುಕು ಕಟ್ಟಿಕೊಳ್ಳುವ ಕಾಯಕಗಳಿಗೆ ಹಣಕಾಸು ನೆರವು ನೀಡಲು ಒಂದು ಸಾಂಸ್ಥಿಕ ನೆಲೆ ಇದೆ ಎನ್ನುವ ಭರವಸೆಯೇ ಗ್ರಾಮೀಣ ಭಾರತದ ಜನತೆಯ ಬದುಕನ್ನು ಬದಲಾಯಿಸಿತ್ತು. ಖಾಸಗಿ ಲೇವಾದೇವಿಗಾರರು ಮತ್ತು ಖಾಸಗಿ ಬ್ಯಾಂಕುಗಳ ಶೋಷಣೆಯಿಂದ ತತ್ತರಿಸಿ ಹೋಗಿದ್ದ ಗ್ರಾಮೀಣ ಬಡ ಜನತೆ ಮತ್ತು ಮಧ್ಯಮ ವರ್ಗಗಳಿಗೆ ನೂತನ ಬ್ಯಾಂಕಿಂಗ್ ವ್ಯವಸ್ಥೆ  ಒಂದು ಆಶಾದಾಯಕ ಭವಿಷ್ಯದತ್ತ ನೋಡಲು ನೆರವಾಗಿದ್ದು ಸತ್ಯ. ಅಷ್ಟೇ ಅಲ್ಲ ಉದ್ಯೋಗ ಸೃಷ್ಟಿಗೆ ಯಾವುದೇ ರೀತಿಯಲ್ಲೂ ಸಹಾಯಕವಲ್ಲದ ಖಾಸಗಿ ಬ್ಯಾಂಕಿಂಗ್ ವ್ಯವಸ್ಥೆ ಸಾಮುದಾಯಿಕ, ಪ್ರಾದೇಶಿಕ ಅಸ್ಮಿತೆಗಳನ್ನು ಆಧರಿಸಿಯೇ ಉದ್ಯೋಗ ನೀಡುತ್ತಿದ್ದುದರಿಂದ ದೇಶದ ಸುಶಿಕ್ಷಿತ ಸಮುದಾಯ ಎದುರಿಸುತ್ತಿದ್ದ ನಿರುದ್ಯೋಗ ಸಮಸ್ಯೆ ಉಲ್ಬಣಿಸುತ್ತಿತ್ತು. ಬ್ಯಾಂಕ್ ರಾಷ್ಟ್ರೀಕರಣ ಮತ್ತು ನಂತರದ ಶಾಖೆಗಳ ವಿಸ್ತರಣೆಯ ಪರಿಣಾಮ ದೇಶಾದ್ಯಂತ ಲಕ್ಷಾಂತರ ವಿದ್ಯಾವಂತರಿಗೆ ಉದ್ಯೋಗಾವಕಾಶಗಳು ಲಭಿಸಿದವು. ಹೆಚ್ಚಿನ ವಿದ್ಯಾಭ್ಯಾಸ ಇಲ್ಲದವರಿಗೂ ಸಹ ಬ್ಯಾಂಕುಗಳಲ್ಲಿ ನೌಕರಿಯ ಅವಕಾಶ ಕಲ್ಪಿಸಲಾಯಿತು. ಹೀಗೆ ಉದ್ಯೋಗ ಗಳಿಸಿದವರ ಎರಡನೆ ಪೀಳಿಗೆ ಇಂದು ದೇಶದ ಸುಭದ್ರ ಮಧ್ಯಮ ವರ್ಗಗಳಲ್ಲಿ ಒಂದಾಗಿದೆ ಎನ್ನುವುದು ಚಾರಿತ್ರಿಕ ಸತ್ಯ, ಸಮಕಾಲೀನ ವಾಸ್ತವ.

ರಾಷ್ಟ್ರೀಕೃತ ಬ್ಯಾಂಕುಗಳು ಎಷ್ಟು ಜನರಿಗೆ ಉದ್ಯೋಗ ನೀಡಿವೆ ಎಂಬ ಪ್ರಶ್ನೆ ಎದುರಾದಾಗ ಕೈಗಾರಿಕೀಕರಣ, ಕೃಷಿ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನಗರೀಕರಣ ಮತ್ತು ಮೂಲಭೂತ ಸೌಕರ್ಯಗಳು ಇವೆಲ್ಲವೂ ಮುನ್ನೆಲೆಗೆ ಬರುತ್ತವೆ. ಬ್ಯಾಂಕುಗಳಲ್ಲಿ ನೌಕರಿ ಪಡೆದವರು ವೇತನ ಮತ್ತು ಭತ್ಯೆಗಳ ಫಲಾನುಭವಿಗಳಾದರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಹಣಕಾಸು ನೆರವು ಪಡೆದು ಬದುಕು ಕಟ್ಟಿಕೊಂಡವರು ಮತ್ತೊಂದು ರೀತಿಯ ಫಲಾನುಭವಿಗಳಾಗುತ್ತಾರೆ. ಈ ಎರಡೂ ಫಲಾನುಭವಿಗಳ ಗುಂಪುಗಳ ಬದುಕಿನ ಹೆಜ್ಜೆ ಗುರುತುಗಳನ್ನು ಒಮ್ಮೆ ಗಮನಿಸಿದರೆ ರಾಷ್ಟ್ರೀಕೃತ ಬ್ಯಾಂಕುಗಳ ಮಹತ್ವದ ಕೊಡುಗೆ ಅರಿವಾಗುತ್ತದೆ. ಎಷ್ಟು ಶಾಖೆಗಳಾಗಿವೆ, ಎಷ್ಟು ಗ್ರಾಹಕರಿದ್ದಾರೆ, ಎಷ್ಟು ಪ್ರಮಾಣದ ಸಾಲ ನೀಡಲಾಗಿದೆ, ಎಷ್ಟರ ಮಟ್ಟಿಗೆ ಸಬಲೀಕರಣವಾಗಿದೆ ಈ ಎಲ್ಲ ಅಂಕಿ ಅಂಶಗಳನ್ನು ಬದಿಗಿಟ್ಟು ನೋಡಿದರೂ ಸಹ ಬ್ಯಾಂಕ್ ರಾಷ್ಟ್ರೀಕರಣ ಸ್ವತಂತ್ರ ಭಾರತದ ಪರಿಕಲ್ಪನೆಯಾಗಿದ್ದ ಸ್ವಾವಲಂಬಿ ಭಾರತವನ್ನು ಕಟ್ಟುವುದರಲ್ಲಿ ಮುಂಚೂಣಿ ಪಾತ್ರ ವಹಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹೆಜ್ಜೆ ಗುರುತುಗಳ ನಡುವೆ ನೀರು ನೆರಳಿಲ್ಲದ ಗ್ರಾಮಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಾ ತಮ್ಮ ಸೇವಾವಧಿಯನ್ನು ಪೂರೈಸಿದ ಬ್ಯಾಂಕ್ ನೌಕರರ ಒಂದು ಬೃಹತ್ ಸೈನ್ಯವೇ ನಮ್ಮೆದುರಿನಲ್ಲಿದೆ (ನನ್ನನ್ನೂ ಸೇರಿದಂತೆ). ಬ್ಯಾಂಕ್ ನೌಕರರು ಜೀವನ ನಿರ್ವಹಣೆಗಾಗಿ, ವೇತನಕ್ಕಾಗಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಾರೆ ಎಂದು ಹೇಳಬಹುದಾದರೂ ಸಾವಿರಾರು ನೌಕರರು, ವರ್ಷಗಳ ಕಾಲ ಸಲ್ಲಿಸಿದ ನಿಸ್ಪಂಹ, ನಿಸ್ವಾರ್ಥ ಸೇವೆಯಿಂದಲೇ ಬ್ಯಾಂಕಿಂಗ್ ಉದ್ಯಮ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಸ್ಥಾನ ಪಡೆದಿದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. 

ಇಂತಹ ಒಂದು ಸಾಂಸ್ಥಿಕ ಇತಿಹಾಸವನ್ನು ಐವತ್ತನೆಯ ವರ್ಷದ ಸಂದರ್ಭದಲ್ಲಿ ಹೆಮ್ಮೆಯಿಂದ ನೆನೆಯುವುದಕ್ಕೂ ನಮ್ಮಿಂದ ಸಾಧ್ಯವಾಗಿಲ್ಲ ಎನ್ನುವ ವಿಷಾದ ಕಾಡುತ್ತದೆ. 35 ವರ್ಷಗಳ ಸೇವೆ, ಅದರಲ್ಲಿ 19 ವರ್ಷ ಗ್ರಾಮೀಣ ಸೇವೆ, ಸಲ್ಲಿಸಿದ ನನ್ನನ್ನು ವಿಶೇಷವಾಗಿ ಕಾಡುತ್ತದೆ. ದುರಂತ ಎಂದರೆ ಬ್ಯಾಂಕ್ ನೌಕರ ಸಂಘಟನೆಗಳೂ ಸಹ ರಾಷ್ಟ್ರೀಕೃತ ಬ್ಯಾಂಕುಗಳ ಐವತ್ತು ವರ್ಷಗಳ ಇತಿಹಾಸವನ್ನು ಜನಸಾಮಾನ್ಯರ ಮುಂದೆ ಬಿಚ್ಚಿಡುವ ಪ್ರಯತ್ನಗಳನ್ನು ಮಾಡದಿರುವುದು. ಬ್ಯಾಂಕ್ ರಾಷ್ಟ್ರೀಕರಣವೇ ಒಂದು ಮಹಾ ಪ್ರಮಾದ ಎಂದು ಹೇಳುವ ಆಳುವವರ್ಗಗಳ ನಡುವೆ ನಮ್ಮ ಹೆಮ್ಮೆಯ ಹೆಜ್ಜೆ ಗುರುತುಗಳನ್ನು ನಾವೇ ಗುರುತಿಸದೆ ಹೋಗುವುದು ಇನ್ನೂ ಹೆಚ್ಚಿನ ಪ್ರಮಾದ ಆಗುತ್ತದೆ ಎಂದು ಬ್ಯಾಂಕ್ ನೌಕರ ಸಂಘಟನೆಗಳಿಗೆ ಅರಿವಾಗಬೇಕಿದೆ. ಬ್ಯಾಂಕ್ ರಾಷ್ಟ್ರೀಕರಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಂಭ್ರಮದಷ್ಟೇ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಾದ್ದು ಆರಂಭಿಕ ವರ್ಷಗಳಲ್ಲಿ ತಮ್ಮ ತನುಮನ ಅರ್ಪಿಸಿ ಅಹರ್ನಿಶಿ ದುಡಿದ ಮಹನೀಯರ ಸೇವೆ ಅಲ್ಲವೇ.ಅವರನ್ನು ನೆನೆಯಲಾದರೂ ನಾವು ಸಂಭ್ರಮಿಸಬೇಕು. ಮುಂದಿನ ಪೀಳಿಗೆಗೆ ಸ್ವತಂತ್ರ ಭಾರತದ ಈ ಐವತ್ತು ವರ್ಷಗಳ ಸುವರ್ಣಯುಗದ ಪರಿಚಯವನ್ನು ನಾವು ಮಾಡಬೇಕು. ನವ ಉದಾರವಾದದ ಪ್ರಹಾರಕ್ಕೆ ಸಿಲುಕಿ ಇತಿಹಾಸದ ಪುಟಗಳಿಂದ ಮರೆಯಾಗುವ ಮುನ್ನ ರಾಷ್ಟ್ರೀಕೃತ ಬ್ಯಾಂಕುಗಳ ಈ ಹೆಜ್ಜೆ ಗುರುತುಗಳನ್ನು ದಾಖಲಿಸಲು ಯತ್ನಿಸೋಣ.