60 ವರ್ಷಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ನರೇಂದ್ರ ಮೋದಿ ಹೇಳಿಕೆ ಕುರಿತು ಒಂದು ವಾಸ್ತವದ ಲೆಕ್ಕಾಚಾರ

60 ವರ್ಷಗಳಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ನರೇಂದ್ರ ಮೋದಿ ಹೇಳಿಕೆ ಕುರಿತು ಒಂದು ವಾಸ್ತವದ ಲೆಕ್ಕಾಚಾರ

ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ದೇಶದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂಬಾಲಕರು ಹೇಳುತ್ತಿದ್ದಾರೆ. ಹಾಗಿದ್ದರೆ ಈವರೆಗೆ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ಎಂ. ಚಂದ್ರಶೇಖರ್, ವಿಶ್ವನಾಥ ಪ್ರತಾಪ್ ಸಿಂಗ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ ದೇವೇಗೌಡ, .ಕೆ ಗುಜ್ರಾಲ್ ಮತ್ತು ಡಾ. ಮನಮೋಹನ ಸಿಂಗ್ ಇವರೆಲ್ಲ ತಮ್ಮ ಅಧಿಕಾರಾವಧಿಯಲ್ಲಿ ಏನೂ ಮಾಡಲಿಲ್ಲವೇ? ವಾಸ್ತವಾಂಶಗಳನ್ನು ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್  ಓದುಗರ ಮುಂದಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತಿನ ಮೋಡಿಯಿಂದ ಜನರನ್ನು ಮರಳು ಮಾಡುವ, ತಮ್ಮತ್ತ ಆಕರ್ಷಿಸುವ ಮೋಡಿಗಾರ. ಅವರ ಈ ಮಾತಿನ ಮೋಡಿಗೆ ಹೆಚ್ಚಾಗಿ ಮರುಳಾಗಿರುವವರು ಯುವ ಜನತೆ ಮತ್ತು ಹಿಂದುತ್ವದ ವಿಚಾರಗಳಲ್ಲಿ ಗಾಢವಾದ ನಂಬಿಕೆ ಇಟ್ಟಿರುವ ಮಂದಿ. ಮೋದಿಯವರು ತಮ್ಮ ಈ ಒಂದು ಅವಧಿಯ ಐದು ವರ್ಷಗಳ ಆಡಳಿತದಲ್ಲಿ ಏನು ಮಾಡಿದ್ದಾರೆ, ಅವರ ಆಡಳಿತ ವೈಖರಿ ಹೇಗಿದೆ ಎನ್ನುವುದರ ಪರಾಮರ್ಶೆಗಿಂತ ಅವರು ಹೇಳಿದ್ದನ್ನೇ ನಂಬುವ ಜನರೇ ಹೆಚ್ಚು. ಇದರರ್ಥ ಅವರು ಹೇಳಿದ್ದನ್ನು ಯಾರೂ ನಂಬಬಾರದೆನ್ನುವುದಲ್ಲ. ಅವರು ತಮ್ಮ ಭಾಷಣಗಳಲ್ಲಿ ಹೇಳುವ ಕೆಲವು ಸಂಗತಿಗಳ ಸತ್ಯಾ ಸತ್ಯತೆಯನ್ನು ಪರಾಮರ್ಶಿಸುವುದು ಇತಿಹಾಸದ ಸತ್ಯ ಸಂಗತಿಯನ್ನು ರಕ್ಷಿಸುವ ದೃಷ್ಟಿಯಿಂದ ಅವಶ್ಯ ಎನಿಸುತ್ತದೆ.

ಸ್ವಾತಂತ್ರ್ಯ ಬಂದ ಈ ಎಪ್ಪತ್ತು ವರ್ಷಗಳಲ್ಲಿ ಸುಮಾರು ಅರುವತ್ತು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ದೇಶದ ಅಭಿವೃದ್ಧಿಗಾಗಿ ಏನು ಮಾಡಿದೆ? ಆ ಪಕ್ಷವು ತನ್ನ ಆಡಳಿತದಲ್ಲಿ ಒಂದೇ ಕುಟುಂಬದ ಆಳ್ವಿಕೆ ಮತ್ತು ದೇಶಕ್ಕೆ ಏನನ್ನೂ ಮಾಡಿಲ್ಲ ಎನ್ನುವುದು ಅವರು ನಿರಂತರವಾಗಿ ಮಾಡಿಕೊಂಡು ಬಂದ  ಆರೋಪ. ಕಾಂಗ್ರೆಸ್ ಏನು ಮಾಡಿದೆ ಎನ್ನುವುದನ್ನು ಅಥವಾ ಆ ಪಕ್ಷದ ನಾಯಕತ್ವನ್ನು ಹಿಡಿದಿಟ್ಟುಕೊಂಡಿರುವ ನೆಹರೂ ಕುಟುಂಬದ ಬಗೆಗೆ ನಾನಿಲ್ಲಿ ವಕಾಲತ್ತು ವಹಿಸಲು ಹೋಗುವುದಿಲ್ಲ. ಅದು ನನಗೆ ಸಂಬಂಧವೂ ಇಲ್ಲ.

ಆದರೆ ನನಗೆ ಮುಖ್ಯವಾಗಿ ಕಾಡುವುದು ಈ ಅರವತ್ತು ವರ್ಷಗಳಲ್ಲಿ ದೇಶದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲವೇ ಎನ್ನುವುದನ್ನು ಮೆಲಕು ಹಾಕುವುದಷ್ಟೆ ಈ ಬರವಣಿಗೆಯ ಉದ್ದೇಶ. ಸತ್ಯವನ್ನು ಮರೆಮಾಚುವ ಕಹಿಗುಳಿಗೆಗಳನ್ನು ಎಷ್ಟು ನುಂಗಲು ಸಾಧ್ಯ? ಸತ್ಯ ಸಂಗತಿ ಮತ್ತು ವಾಸ್ತವವನ್ನು ಸರಿಯಾಗಿ ತಿಳಿಯದಿದ್ದರೆ ಇತಿಹಾಸದ ಪಾಠದಲ್ಲಿ ತಪ್ಪುಗಳೇ ಸತ್ಯವಾಗಿ ವಿಜೃಂಬಿಸಲಿವೆ. ಬಹುಶಃ ನಮ್ಮ ದೇಶದಲ್ಲಿ ಇಂತಹ ತಪ್ಪು ಇತಿಹಾಸಕ್ಕೆ ಅಡೆತಡೆ ಇಲ್ಲದೆ ಮುಂದುವರಿದಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಎಲ್ಲ ಕ್ಷೇತ್ರಗಳಲ್ಲಿಯೂ ಆಗಿರುವ ಪ್ರಗತಿಯನ್ನು ಲೆಕ್ಕ ಹಾಕುವುದು ಸಮುದ್ರದ ಅಲೆಗಳನ್ನು ಎಣಿಸಲು ಕುಳಿತಷ್ಟೇ ಸಮನಾದ ಕೆಲಸ ಎಂದುಕೊಂಡಿರುವೆ. ಅಂದ ಮಾತ್ರಕ್ಕೆ ಎಲ್ಲವೂ ಆಗಿದೆ. ದೇಶದ ಎಲ್ಲ ಭಾಗವೂ ಪ್ರಗತಿ ಕಂಡಿದೆ ಮತ್ತು ದೇಶದ ಉದ್ದಗಲ್ಲಕ್ಕೂ ಜನರೆಲ್ಲ ಎಲ್ಲ ಸವಲತ್ತು ಸೌಲಭ್ಯಗಳನ್ನು ಪಡೆದು ಸುಖವಾಗಿದ್ದಾರೆ ಮತ್ತು ಈಗ ಮಾಡುವುದೇನೂ ಉಳಿದಿಲ್ಲ ಎಂದು ಹೇಳುವ ಮೂರ್ಖತನವೂ ನನ್ನದಲ್ಲ. ದೇಶದಲ್ಲಿ ಈ ಎಪ್ಪತ್ತು ವರ್ಷ ಯಾರೇ ಅಥವಾ ಯಾವುದೇ ಪಕ್ಷ ಕೇಂದ್ರದಲ್ಲಾಗಲಿ, ರಾಜ್ಯಗಳಲ್ಲಾಗಲಿ ಸರ್ವತೋಮುಖ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಬೆಳಕಿನಷ್ಟು ನಿಚ್ಚಳ.

ದೇಶದ ಉದ್ದಗಲಕ್ಕೂ ಇನ್ನೂ ಬಡತನ, ಹಸಿವು, ನಿರುದ್ಯೋಗ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಕಾಡುತ್ತಿರುವುದು ಕಣ್ಣಿಗೆ ರಾಚುವಂತಹ ಪರಿಸ್ಥಿತಿ ಇದೆ. ಹಳ್ಳಿಗಳಾಗಲಿ, ಪಟ್ಟಣ ಮತ್ತು ನಗರ ಪ್ರದೇಶಗಳಾಗಲಿ ದಿನೇ ದಿನೇ ವಸತಿ, ಕುಡಿಯುವ ನೀರು ಮತ್ತು ಮನುಷ್ಯ ಗೌರವದಿಂದ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುವ ಉತ್ತಮ ಪರಿಸ್ಥಿತಿ ಇನ್ನೂ ಬಿಸಿಲ್ಗುದರೆಯಾಗಿಯೇ ಉಳಿದಿದೆ. ಇದೇನೇ ಇದ್ದರೂ ದೇಶದಲ್ಲಿ ಆಗಿರುವ ಅಭಿವೃದ್ಧಿಯ ವಸ್ತುಸ್ಥಿತಿಯನ್ನಾದರೂ ಸ್ವಲ್ಪ ಮಟ್ಟಿಗೆ ಗಮನಿಸುವುದು ಅನಿವಾರ್ಯ. ಇಲ್ಲವಾದರೆ ಪ್ರಧಾನಿ ಮೋದಿ ಅವರನ್ನು ಆರಾಧಿಸುವ ಮಂದಿ ವಿಶೇಷವಾಗಿ ಹೊಸಪೀಳಿಗೆಯ ಯುವ ಮನಸ್ಸುಗಳಿಗೆ ತಿಳಿ ಹೇಳುವುದು ಕಷ್ಟ. ಇದರಿಂದ ಭವಿಷ್ಯದ ದಿನಗಳಲ್ಲಿ ಇತಿಹಾಸಕ್ಕೆ ಅಪಚಾರ ಎಸಗಿದಂತೆ.

ನಾವು ತಿರುಗಾಡುವ ರಸ್ತೆ, ಬಸ್ಸು, ರೈಲು ಮತ್ತು ವಿಮಾನ ಸೌಲಭ್ಯ. ಕಲಿತ ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಕುಡಿಯುವ ನೀರು, ಕೃಷಿ, ಕೈಗಾರಿಕೆ, ವಿದ್ಯುತ್, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಾಗಿರುವ ಬದಲಾವಣೆ. ಹೀಗೆ ಹೇಳುತ್ತಾ ಹೋದರೆ ಉದ್ದನೆಯ ಪಟ್ಟಿ ಬೆಳೆಯುತ್ತದೆ. ಇವುಗಳನ್ನೆಲ್ಲ ನಿರ್ವಹಿಸುವ ಸರ್ಕಾರಿ ಕಚೇರಿಗಳು, ಬೃಹತ್ ಕಟ್ಟಡಗಳು ಇವೆಲ್ಲ ಹೇಗೆ ಬಂದವು? ಈ ಐದು ವರ್ಷಗಳಲ್ಲಿ ಮಕ್ಕಳಿಗೆ ತೋರಿಸುವ ಕಾರ್ಟೂನ್ ಚಿತ್ರದಂತೆ ಉದ್ಭವವಾದವೇ ಎನ್ನುವ ಪ್ರಶ್ನೆ ಸಹಜವಾಗಿ ನಮ್ಮ ಮನಸ್ಸಾಕ್ಷಿಯನ್ನು ಕಲಕುತ್ತದೆ. ಯಾರೇ ಆಗಲಿ ತಾವು ಹೇಳುವ ಮಾತು ವಾಸ್ತವತೆಗೆ ಹತ್ತಿರವಿರಬೇಕು ಎನ್ನುವುದು ನನ್ನ ಆಶಯ.

ಪ್ರಧಾನಿ ಮೋದಿ ಅವರು ಈ ಐದು ವರ್ಷಗಳಲ್ಲಿ ತಮಗೆ ದೊರೆತ ಜನಬೆಂಬಲದಿಂದ ಉತ್ತೇಜಿತರಾಗಿ ದೇಶವನ್ನು “ಕಾಂಗ್ರೆಸ್ ಮುಕ್ತ ಭಾರತ”ವನ್ನಾಗಿ ಮಾಡುವುದಾಗಿ ಹೇಳುತ್ತಿದ್ದರು. ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಡ ಸೇರಿದಂತೆ ಐದು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಧಿಕಾರದಲ್ಲಿದ್ದ ಬಿಜೆಪಿ ನೆಲಕಚ್ಚಿತು. ಅಲ್ಲೀಂದೀಚೆಗೆ ಪ್ರಧಾನಿ ಮೋದಿ “ ಕಾಂಗ್ರೆಸ್ ಮುಕ್ತ ಭಾರತ” ಮಾಡುವ ಮಾತುಗಳನ್ನಾಡುತ್ತಿಲ್ಲ. ಕೆಲವರು “ಕಾಂಗ್ರೆಸ್ ಮುಕ್ತ ಭಾರತ” ಎಂದರೆ “ಕಾಂಗ್ರೆಸ್ ಸಂಸ್ಕøತಿಯನ್ನು ಕೊನೆಗೊಳಿಸುವುದು” ಎಂದು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು.

 ಕಾಂಗ್ರೆಸ್ ತನ್ನ ಅರುವತ್ತು ವರ್ಷಗಳ ಅಧಿಕಾರಾವಧಿಯಲ್ಲಿ ದೇಶಕ್ಕೆ ಏನನ್ನೂ ಮಾಡಿಲ್ಲ ಎನ್ನುವ ಮಾತುಗಳ ಜೊತೆಗೆ ನನ್ನ ಆಡಳಿತ “ನವ ಭಾರತ”ದ ಕಲ್ಪನೆ (ನ್ಯೂ ಇಂಡಿಯಾ) ಎಂದು ಹೇಳುತ್ತಿದ್ದಾರೆ. ನವ ಭಾರತ ನಮ್ಮ ಗುರಿ. ಆ ದಿಕ್ಕಿನಲ್ಲಿ ನಾವೀಗ ಮುನ್ನಡೆದಿದ್ದೇವೆ ಎನ್ನುತ್ತಿದ್ದಾರೆ. ಈ ಎಪ್ಪತ್ತು ವರ್ಷಗಳ ಆಡಳಿತದಲ್ಲಿ ಯಾವುದು ನವ ಭಾರತ, ಆ ಕಲ್ಪನೆ ಏನು ಎನ್ನುವ ಬಗೆಗೆ ಮುಕ್ತಮನಸ್ಸಿನಿಂದ ಚರ್ಚಿಸೋಣ.

1947ರಲ್ಲಿ ದೇಶವು ಬ್ರಿಟಿಷರಿಂದ ವಿಮೋಚನೆಗೊಂಡು ಸ್ವತಂತ್ರ ರಾಷ್ಟವಾಯಿತು. ಸ್ವಾತಂತ್ರ್ಯ ಬರುವ ಮುನ್ನ ದೇಶದಲ್ಲಿ 500ಕ್ಕೂ ಹೆಚ್ಚು ಮಂದಿ ರಾಜ ಮಹಾರಾಜರು ಮತ್ತು ಪ್ರಾದೇಶಿಕ ಪಾಳೇಗಾರರು ಆಳುತ್ತಿದ್ದರು. ಅವರನ್ನೆಲ್ಲ ಒಂದುಗೂಡಿಸಿ ಒಂದು ರಾಷ್ಟ್ರವನ್ನಾಗಿ ಮಾಡಲಾಯಿತು. ಆಗ ಕಾಂಗ್ರೆಸ್ ನೇತೃತ್ವದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರನ್ನು ಪ್ರಧಾನಿಯನ್ನಾಗಿ ಮಾಡಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಯಿತು.

ಪ್ರಧಾನಿ ನೆಹರೂ ಅವರು ದೇಶದ ಆಡಳಿತ ವ್ಯವಸ್ಥೆಗೆ ಒಂದು ಸಂವಿಧಾನ ಬೇಕಾದುದರಿಂದ ದೇಶದಲ್ಲಿನ ಜಾತಿ, ಅಸ್ಪøಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಮತ್ತು ಹತ್ತಾರು ವಿಷಯಗಳಲ್ಲಿ ದೇಶ ವಿದೇಶಗಳಲ್ಲಿ ಆಳವಾಗಿ ಅಧ್ಯಯನ ನಡೆಸಿದ ತಜ್ಞರಾದ ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿ ಸಭೆ ರಚಿಸಲಾಯಿತು. ನೂರಾರು ಭಾಷೆ, ಹತ್ತಾರು ಧರ್ಮ ಮತ್ತು ಸಾವಿರಾರು ಜಾತಿಗಳಿರುವ ಬಹುತ್ವ ಭಾರತಕ್ಕೆ ಸೂಕ್ತವಾದ ಸಂವಿಧಾನವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟರು. ಇಡೀ ಬಹುತ್ವ ಭಾರತವನ್ನು ಎಲ್ಲ ವರ್ಗ, ಜಾತಿ, ಧರ್ಮ ಮತ್ತು ಸಾವಿರಾರು ಭಾಷೆಯ ಜನರನ್ನೆಲ್ಲ ಸಮನಾಗಿ ನೋಡುವ ಸಂವಿಧಾನದ ದೇಶವನ್ನು ಮುನ್ನಡೆಸಿಕೊಂಡು ಬರಲು ಮಾರ್ಗದರ್ಶನವಾಯಿತು.

ಭಾರತ ಗಳಿಸಿದ ಸ್ವಾತಂತ್ರ್ಯದೊಂದಿಗೇ ಧರ್ಮದ ಹೆಸರಿನಲ್ಲಿ ದೇಶ ಇಬ್ಭಾಗವಾಯಿತು. ಮುಸ್ಲಿಮರ ನಾಯಕರಾಗಿದ್ದ ಮಹಮದ್ ಅಲಿ ಜಿನ್ನಾ ಅವರ ಹಠಮಾರಿತನದಿಂದ ಮುಸ್ಲಿಮರ ರಾಷ್ಟ್ರವಾಗಿ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನವಾಗಿ ಭಾರತದಿಂದ ಪ್ರತ್ಯೇಕಗೊಂಡಿತು. ಪಾಕಿಸ್ತಾನದಿಂದ ಸಾವಿರಾರು ಹಿಂದುಗಳು ಭಾರತಕ್ಕೆ ಬಂದರೆ, ಭಾರತದಿಂದ ಲಕ್ಷಾಂತರ ಮಂದಿ ಮುಸ್ಲಿಮರು ಪಾಕಿಸ್ತಾನವನು ಆಯ್ಕೆ ಮಾಡಿಕೊಂಡು ಹೋದರು. ಹಾಗೆ ಹೋಗುವಾಗ ಅಲ್ಲಲ್ಲಿ ಕದನವೂ ನಡೆಯಿತು. ಸಾವು-ನೋವುಗಳಾದವು. ಕರುಳು ಸಂಬಂಧಿಕರು ಬೇರ್ಪಟ್ಟರು.

ಈ ಬೇರ್ಪಡುವ ಪ್ರಕ್ರಿಯೆಯಿಂದ ವಲಸಿಗರು ಮತ್ತು ಸಂತ್ರಸ್ತರು ಎನ್ನುವ ವರ್ಗವು ಸೃಷ್ಟಿಯಾಯಿತು. ಒಡೆದು ಹೋದ ಜೀವಗಳ ಬಾಂಧವ್ಯ ಬೆಸೆಯಲು ಹಲವು ವರ್ಷಗಳೇ ಬೇಕಾದವು. ಇದರ ಜೊತೆಗೆ ಕಾಶ್ಮೀರ ಭಾರತದ ಜೊತೆ ವಿಲೀನಗೊಳ್ಳಲು ಅಲ್ಲಿನ ರಾಜರಾಗಿದ್ದ ಹರಿಸಿಂಗ್ ಕೆಲವು ಷರತ್ತುಗಳನ್ನು ವಿಧಿಸಿದರು. ಪಾಕಿಸ್ತಾನವು ಕಾಶ್ಮೀರ ತನಗೆ ಬೇಕೆಂದು ತಗಾದೆ ತೆಗೆಯಿತು. ಕೊನೆಗೆ ಬಗೆಹರಿಯಲಾರದ ಈ ವಿವಾದವನ್ನು ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ವಿಶ್ವಸಂಸ್ಥೆಗೆ ಹೊಯ್ದರು. ಈ ತಪ್ಪಿನಿಂದಾಗಿ ಕಾಶ್ಮೀರದ ವಿವಾದವನ್ನು ಬಗೆಹರಿಸಲು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅನಿವಾರ್ಯವಾಯಿತು. ಆದರೂ ಈ ಸಮಸ್ಯೆ ಭಾರತವನ್ನು ಇಂದು ಕಾಡುತ್ತಲೇ ಇರುವುದು ದುರದೃಷ್ಟಕರ.

ಹಾಗಾಗಿ ಪಾಕಿಸ್ತಾನದ ಜೊತೆಗಿನ ಕಾಶ್ಮೀರ ಸಮಸ್ಯೆ ಹಿಂದಿನಿಂದಲೂ ಇಂದಿನವರೆಗೂ ಇದೆ. ಇದು ಮುಂದೆಯೂ ಇರಬಹುದು. ಸದ್ಯಕ್ಕೆ ಬಗೆಹರಿಯಲಾರದ ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಜೊತೆ ಸೇನಾ ಹೋರಾಟ ಅಥವಾ ಯುದ್ಧೋನ್ಮಾದದಿಂದ ಇರುವುದೇ ರಾಷ್ಟ್ರಪ್ರೇಮ, ದೇಶಭಕ್ತಿ, ರಾಷ್ಟ್ರೀಯತೆ ಅಥವಾ ಇದೇ ದೇಶದ ಶಕ್ತಿ ಎಂದು ಅಳೆಯಲಾಗದು.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇಡೀ ದೇಶವನ್ನು ಒಂದು ಸುಸ್ಥಿರ ಆಡಳಿತ ವ್ಯವಸ್ಥೆಗೆ ತರಬೇಕಾದರೆ ಅದು ಸುಲಭದ ಕೆಲಸವಾಗಿರಲಿಲ್ಲ. ಕಾಶ್ಮೀರ ತನಗೆ ಸೇರಬೇಕೆಂದು ಪಾಕಿಸ್ತಾನದ ಸೇನೆಯು ಅಲ್ಲಿಯ ಬುಡಕಟ್ಟು ಜನರನ್ನು ಎತ್ತಿಕಟ್ಟಿ ಹೋರಾಟಕ್ಕಿಳಿಯಿತು. ಆ ಯುದ್ಧದಲ್ಲಿ ಭಾರತ ಮೇಲುಗೈ ಸಾಧಿಸಿತು. ಮತ್ತೆ ಎರಡೂ ದೇಶಗಳ ನಡುವೆ 1965ರಲ್ಲಿ ಯುದ್ಧ ನಡೆಯಿತು. ಆಗ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೇತೃತ್ವದಲ್ಲಿ ತಾಷ್ಕೆಂಟ್ ಒಪ್ಪಂದದಿಂದ ಯುದ್ಧವಿರಾಮ ಏರ್ಪಟ್ಟಿತು.

ಈ ಮುನ್ನ 1962ರಲ್ಲಿ ಚೀನಾ ದೇಶದ ಜೊತೆ ಯುದ್ಧಕ್ಕಿಳಿಯಬೇಕಾಯಿತು. 1959ರಲ್ಲಿ ಟಿಬೆಟ್ ವಿಷಯದಲ್ಲಿ ಚೀನಾ ಆಂತರಿಕ ಹೋರಾಟದಲ್ಲಿ ನಿರತವಾಗಿತ್ತು. ಆಗ ಟಿಬೆಟ್‍ನ ನಾಯಕ ದಲೈಲಾಮ ಮತ್ತು ಭಾರತದ ಆಶ್ರಯ ಕೋರಿ ಬಂದ ಸಾವಿರಾರು ಮಂದಿ ಬೌದ್ಧರಿಗೆ ಆಶ್ರಯ ನೀಡಲಾಯಿತು. ಇದರಿಂದ ಹಿಮಾಲಯದ ಗಡಿ ಭಾಗದಲ್ಲಿ ಪ್ರಕ್ಷುಬ್ಧತೆ ಹೆಚ್ಚಿತು. ಗಡಿ ರೇಖೆ ಉಲ್ಲಂಘನೆ ನಿರಂತರವಾಗಿ ನಡೆಯಲು ಆರಂಭವಾಯಿತು. ಹೀಗಾಗಿ 1962ರಲ್ಲಿ ಚೀನಾದ ಜೊತೆ ಯುದ್ಧ ಅನಿವಾರ್ಯವಾಯಿತು.

ಈ ಅವಧಿಯಲ್ಲಿ ನೆಹರೂ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಿಧನರಾದರು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದರು 1971ರಲ್ಲಿ ಪಾಕಿಸ್ತಾನ ಯುದ್ಧಕೆ ಬಂದಿತು. ಇಂದಿರಾ ಗಾಂಧಿ ಅವರು ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನದ ಜೊತೆ ಯುದ್ಧ ನಡೆಸುತ್ತಲೇ ಬಂಗಾಳಿ ಮಾತನಾಡುವ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸಿದರು. ಬಂಗಾಳಿ ಮಾತನಾಡುವ ಮುಸ್ಲಿಮರು ಪಶ್ಚಿಮ ಪಾಕಿಸ್ತಾನದಿಂದ ವಿಮೋಚನೆ ಬಯಸಿದರು. ಆಗ ಭಾರತ ಪೂರ್ವ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ತಂದುಕೊಡುವ ಮೂಲಕ ಪ್ರಧಾನಿ ಇಂದಿರಾ ಗಾಂಧಿ ಅವರು ಬಾಂಗ್ಲಾ ರಾಷ್ಟ್ರವನ್ನಾಗಿ ಮಾಡಿದರು.

ಇದು ಎರಡು ನೆರೆಹೊರೆಯ ರಾಷ್ಟ್ರಗಳ ಜೊತೆಗಿನ ಯುದ್ಧದ ವಿಷಯವಾಯಿತು. ಯುದ್ಧ ಎಂದರೆ ರಕ್ತಪಾತ. ಸಾವಿರಾರು ಮಂದಿಯ ಸಾವು ನೋವು. ಗಾಯಾಳುಗಳಾದ ಮತ್ತಷ್ಟು ಸಾವಿರಾರು ಮಂದಿಯ ನರಳಿP.É ಅವರಿಗೆ ಪುನರ್ ವಸತಿ ಕಲ್ಪಿಸುವುದು ಮತ್ತು ಅರಾಜಕತೆಯಿಂದ ಮತ್ತೆ ಪರಿಸ್ಥಿತಿಯನ್ನು ತಹಬದಿಗೆ ತರುವುದು ಸುಲಭದ ಕೆಲಸವಲ್ಲ.

ಬ್ರಿಟಿಷ್ ಭಾರತದಿಂದ ಸ್ವತಂತ್ರ ಭಾರತ ಆದ ಮೇಲೆ ಹಲವು ಭಾಷೆ ಮತ್ತು ಧರ್ಮದಿಂದ ಕೂಡಿದ ಜನರಲ್ಲಿ ಏಕತೆ ಸಾಧಿಸುವುದು ಹಾಗು ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯುವುದು ಆಡಳಿತದ ಆದ್ಯತೆ ಯಾಯಿತು. ನಿಜ ಒಂದು ದೇಶದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಅಲ್ಲಿನ ಮಾನವ ಅಭಿವೃದ್ಧಿಯನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ.

ಆರ್ಥಿಕ ತಜ್ಞರ ಪ್ರಕಾರ ಮಾನವ ಅಭಿವೃದ್ಧಿಯ ಅಳತೆಗೋಲು ಮುಖ್ಯವಾಗಿ ಆ ದೇಶದ ಮನುಷ್ಯರ ಜೀವಿತಾವಧಿ, ಶಿಕ್ಷಣ ಮತ್ತು ತಲಾ ಆದಾಯ. ಪ್ರತಿಯೊಬ್ಬ ವ್ಯಕ್ತಿ ಮತ್ತು ಆಯಾ ಜಾತಿ ಮತ್ತು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಯ ಪ್ರಗತಿಗೆ ಅನುಕೂಲವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಇದಕ್ಕಾಗಿ ಆರಂಭದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಎಪ್ಪತ್ತರ ದಶಕದವರೆಗೆ ಹಳ್ಳಿಗಳ ಅಭಿವೃದ್ಧಿ, ರೈತರು ಮತ್ತು ಸಮಾಜದ ಕೆಳಸ್ತರದ ಜನರ  ಬಗೆಗಿನ ಕಾಳಜಿ ಆಡಳಿತ ವ್ಯವಸ್ಥೆಯಲ್ಲಿ ಕಂಡು ಬರಲಿಲ್ಲ. ಹಾಗಾಗಿಯೇ ಇಂದು ಕೂಡ ಅಂದರೆ 2017ನೇ ಸಾಲಿನ ವಿಶ್ವದ ಎಲ್ಲ ರಾಷ್ಟ್ರಗಳ ಮಾನವ ಅಭಿವೃದ್ಧಿ ಶ್ರೇಣಿಯಲ್ಲಿ ಭಾರತದ ಸ್ಥಾನ 130 ಇದೆ. ಭಾರತಕ್ಕಿಂತ ಸಣ್ಣಪುಟ್ಟ ಬಹುತೇಕ ರಾಷ್ಟ್ರಗಳು ಈ ದಿಸೆಯಲ್ಲಿ ಹೆಚ್ಚಿನ ಸಾಧನೆ ಮಾಡಿರುವುದು ಗೊತ್ತಾಗುತ್ತದೆ.

ಇರಲಿ, ಒಂದು ದೇಶ ತನ್ನ ಅಭಿವೃದ್ಧಿ ಕಾಣಲು ಮುಖ್ಯವಾಗಿ ಕೃಷಿ, ನೀರಾವರಿ, ವಿದ್ಯುತ್, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಸೇವಾ ಕ್ಷೇತ್ರಗಳ ಸಾಧನೆ ಮಾನದಂಡವಾಗುತ್ತದೆ. ದೇಶದ ಜನತೆ ಈ ಎಪ್ಪತ್ತು ವರ್ಷಗಳಿಂದ ಅಭಿವೃದ್ಧಿ ಕಾಣದೇ ಇನ್ನೂ ಅನಾಗರಿಕ ವ್ಯವಸ್ಥೆಯಲ್ಲಿಯೇ ಬದುಕಿದ್ದಾರೆಯೇ? ಕೃಷಿ, ನೀರಾವರಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಸಮಾಜ ಕಲ್ಯಾಣ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಏನೂ ಆಗಿಲ್ಲವೇ? ನೀರಾವರಿ ಯೋಜನೆಗಳು, ಭಾರೀ ಅಣೆಕಟ್ಟುಗಳು, ರಸ್ತೆ, ರೈಲು ಮಾರ್ಗ, ರೈಲು ಸೇವೆ, ವಿಮಾನ ಸೇವೆ, ದೊಡ್ಡ ವಿಶ್ವ ವಿದ್ಯಾನಿಲಯಗಳು, ನಗರಗಳಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು, ನಗರಗಳಲ್ಲಿ ಬೃಹತ್ ಉದ್ಯಮಗಳು ಹೀಗೆ ಇವುಗಳೆಲ್ಲ ಮಕ್ಕಳಿಗೆ ತೋರಿಸುವ ಚಲನಚಿತ್ರದ ದೃಶ್ಯಗಳಲ್ಲಿ ಬರುವಂತೆ ಈಗ ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ಧುತ್ತನೆ ಬೆಳೆದು ನಮ್ಮ ಕಣ್ಣ ಮುಂದೆ ನಿಂತಿವೆಯೇ? ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಏನೂ ಆಗಿಲ್ಲವೇ ಎನ್ನುವ ಪ್ರಶ್ನೆಗಳು ಸಹಜವಾಗಿಯೇ ನಮ್ಮ ಮುಂದೆ ಬಂದು ನಿಲ್ಲುತ್ತವೆ.

ಹಾಗಿದ್ದರೆ ದೇಶದ ಮೊದಲ ಪ್ರಧಾನಿ ಆಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ, ನಂತರ ಅಲ್ಪಾವಧಿ ಅಧಿಕಾರದಲ್ಲಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ಹದಿನೇಳು ವರ್ಷ ಕಾಲ ಆಡಳಿತ ನಡೆಸಿದ್ದ ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ಎಂ. ಚಂದ್ರಶೇಖರ್, ವಿಶ್ವನಾಥ ಪ್ರತಾಪ್ ಸಿಂಗ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ ದೇವೇಗೌಡ, ಐ.ಕೆ ಗುಜ್ರಾಲ್ ಮತ್ತು ಡಾ. ಮನಮೋಹನ ಸಿಂಗ್ ಇವರೆಲ್ಲ ತಮ್ಮ ಅಧಿಕಾರಾವಧಿಯಲ್ಲಿ ಏನೂ ಮಾಡಲಿಲ್ಲವೇ? ಇವರದೆಲ್ಲ ಶೂನ್ಯ ಸಾಧನೆಯೇ? ಪ್ರಧಾನಿ ಮೋದಿ ಅವರ ಈ ಹೇಳಿಕೆಯಿಂದಾಗಿ ಈ ಎಪ್ಪತ್ತು ವರ್ಷಗಳ ಆಡಳಿತದ ಇತಿಹಾಸದತ್ತ ಈಗ ಕಣ್ಣಾಡಿಸಬೇಕಿದೆ.

ಆಯಾ ಕಾಲಮಾನದಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳು, ದೇಶ ಹೇಗೆ ಮುನ್ನಡೆದಿದೆ ಎನ್ನುವ ವಾಸ್ತವಾಂಶದತ್ತ ನಾವು ನೋಡಬೇಕಿದೆ. ಇಲ್ಲವಾದರೆ ಇತಿಹಾಸವನ್ನು ತಿಳಿಯಲು ಆಸಕ್ತಿ ಇಲ್ಲದ ಇಂದಿನ ಬಹುತೇಕ ಯುವ ಪೀಳಿಗೆಗೆ ತಪ್ಪು ಸಂದೇಶ ಹೋದಂತಾಗಲಿದೆ. ಪ್ರಧಾನಿ ಮೋದಿ ಅವರು ಹೇಳುತ್ತಿರುವುದೇ ಸತ್ಯ. ಉಳಿದೆಲ್ಲವೂ ಮಿಥ್ಯ ಎನ್ನುವ ನಿರ್ಧಾರಕ್ಕೆ ನಮ್ಮ ಈಗಿನ ಪೀಳಿಗೆ ಬಂದರೆ ಅಚ್ಚರಿ ಇಲ್ಲ.

ಈ ಎಪ್ಪತ್ತು ವರ್ಷಗಳ ಆಡಳಿತದ ಸತ್ಯಶೋಧನೆ ವಾಸ್ತವಾಂಶಗಳತ್ತ ಮತ್ತೆ ಒಂದು ಹೊಸ ನೋಟ ನೋಡುವುದೇ ಆಗಿದೆ ಹೊರತು ಪ್ರಧಾನಿ ಅವರ ಮಾತನ್ನು ಸುಳ್ಳು ಎಂದು ಸಾಧಿಸಲು ಹೊರಟಿರುವ ಕೆಲಸ ಇದಲ್ಲ.

ದೇಶ ಸ್ವತಂತ್ರವಾದಾಗ ಆಡಳಿತ ವ್ಯವಸ್ಥೆ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವುದು ಸುಲಭದ ಕೆಲಸವಲ್ಲ. ಬ್ರಿಟಿಷರು ಆಡಳಿತ ವ್ಯವಸ್ಥೆಯನ್ನು ಚೆನ್ನಾಗಿಯೇ ರೂಪಿಸಿದ್ದರಾದರೂ ನಮ್ಮ ಆದ್ಯತೆಗಳಿಗೆ ಅನುಗುಣವಾಗಿ ಮಾರ್ಪಾಟು ಮಾಡಿಕೊಳ್ಳಬೇಕಾದುದು ಅನಿವಾರ್ಯ. ದೇಶದ ಆಂತರಿಕ ಉತ್ಪನ್ನಕ್ಕಾಗಿ ಹಲವಾರು ಬೃಹತ್ ಉದ್ದಿಮೆಗಳನ್ನು ಪ್ರಧಾನಿ ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾಗಿ ಯುದ್ಧ ವಿಮಾನಗಳನ್ನು ತಯಾರಿಸುವ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್, ಟ್ರಾಕ್ಟರ್, ಕೈಗಡಿಯಾರಗಳನ್ನು ತಯಾರಿಸುವ ಎಚ್.ಎಂ.ಟಿ, ತೈಲ ಆಮದು ಮತ್ತು ಪೂರೈಕೆ ನಿರ್ವಹಣೆ ಮಾಡುವ ಒಎನ್‍ಜಿಸಿ, ಟೆಲಿಫೋನ್ ಉಪಕರಣಗಳನ್ನು ತಯಾರಿಸುವ ಐಟಿಐ, ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುವ ಬಿಎಚ್‍ಇಎಲ್, ವೈಜ್ಞಾನಿಕ ಸಂಶೋಧನೆ ಮಾಡುವ ಐಸಿಎಆರ್. ಇಂಡಿಯನ್ ಇನ್ಸಿಟಿಟೂಟ್ ಆಫ್ ಸೈನ್ಸ್, ಕೆಲವು ವಿಶ್ವ ವಿದ್ಯಾನಿಲಯಗಳು, ನವದೆಹಲಿಯಲ್ಲಿನ ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ ಹೀಗೆ ನೂರಾರು ಸಂಸ್ಥೆಗಳನ್ನು ಆಯಾ ಕಾಲಕ್ಕೆ ಆರಂಭಿಸಲಾಗಿದೆ.

ಮುಖ್ಯವಾಗಿ ನಮ್ಮದು ಕೃಷಿ ಆಧಾರಿತ ದೇಶ. 1950-51ರಲ್ಲಿ 20 ಮಿಲಿಯನ್ ಟನ್ ಭತ್ತ ಬೆಳೆಯಲಾಗುತ್ತಿತ್ತು. ನನಗೆ ದೊರೆತ ಮಾಹಿತಿಯಂತೆ 2013-14ರ ಅವಧಿಯಲ್ಲಿ ಇದು 106 ಮಿಲಿಯನ್ ಟನ್ ಗೆ ಹೆಚ್ಚಳವಾಗಿದೆ. ಅಂದರೆ ಶೇ. 430ರಷ್ಟು ಉತ್ಪಾದನೆ ಹೆಚ್ಚಾಗಿದೆ. ದೇಶದ ಉತ್ತರ ಭಾಗದ ಮುಖ್ಯ ಆಹಾರವಾದ ಗೋದಿಯ ಉತ್ಪಾದನೆ 1967-68ರಲ್ಲಿ 17 ಮಿಲಿಯನ್ ಟನ್ ಇದ್ದದ್ದು 2014-15ರಲ್ಲಿ 88.94 ಮಿಲಿಯನ್ ಟನ್ ಗೆ ಹೆಚ್ಚಿದೆ. ಈ ಹೆಚ್ಚಳಕ್ಕೆ ಕಾರಣ ಕೃಷಿ ಭೂಮಿಯ ವಿಸ್ತರಣೆ, ನೀರಾವರಿ ಸೌಲಭ್ಯ ಹೆಚ್ಚಳ, ಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರಗಳು, ಉಪಕರಣಗಳ ಪೂರೈಕೆ ಮತ್ತು ರಸಗೊಬ್ಬರ ತಯಾರಿಕೆ , ಹಾಗು ಉತ್ಪನ್ನ ಇತ್ಯಾದಿ.

ಸ್ವಾತಂತ್ರ್ಯ ಬಂದ  ದಿನಗಳಲ್ಲಿ ಲಕ್ಷಾಂತರ ಹಳ್ಳಿಗಳಿಗೆ ವಿದ್ಯುತ್ ದೀಪಗಳಿರಲಿಲ್ಲ. ಇಂದು ಕೆಲವು ಹಳ್ಳಿಗಳಲ್ಲಿ ಮಾತ್ರ ಆ ಸ್ಥಿತಿ ಇದೆ. ವಿದ್ಯುತ್ ತಯಾರಿಕೆ ಇಂದು 145, 554, 97ಮೆಗಾ ವಾಟ್ಸ್ ಸಾಮಥ್ರ್ಯದ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಮಾಡಿವೆ. ಇದರಲ್ಲಿ ಜಲ ವಿದ್ಯುತ್, ಥರ್ಮಲ್, ಕಲ್ಲಿದ್ದಲು, ಗಾಳಿ ಮತ್ತು ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಮತ್ತು ಅಲ್ಲಿನ ಉತ್ಪಾದನೆಗಳಿಂದ ಸಾಧ್ಯವಾಗಿದೆ. ನಮ್ಮ ಉದ್ಯಮ ಮತ್ತು ಸರ್ವಾಂಗೀಣ ಬೆಳವಣಿಗೆಗೆ ವಿದ್ಯುತ್ ಲಭ್ಯತೆಯೂ ಪ್ರಮುಖ ಪಾತ್ರವಹಿಸಲಿದೆ.

ಸ್ವಾತಂತ್ರ್ಯದ ಪೂರ್ವದಲ್ಲಿ ನಮ್ಮಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇತ್ತು. ಸಂವಿಧಾನವನ್ನು ಅಂಗೀಕರಿಸಿದ ಮೇಲೆ 14 ವರ್ಷ ತುಂಬುವವರೆಗೆ ಪ್ರತಿಯೊಂದು ಮಗುವಿಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡುವ ಕರ್ತವ್ಯ ಸರ್ಕಾರದ ಮೇಲೆ ಬಿದ್ದಿತು. ಪ್ರತಿಯೊಂದು ಮಗುವನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವುದು, ಉಚಿತ ಶಿಕ್ಷಣ ನೀಡುವುದು, ಮಧ್ಯದಲ್ಲಿಯೇ ಶಾಲೆಗಳನ್ನು ಬಿಡುವ ಪ್ರವೃತ್ತಿಗೆ ಕಡಿವಾಣ ಹಾಕಲು, ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಹಾಗಾಗಿ ಇಂದು ಹೊಲಗದ್ದೆಗಳಲ್ಲಿ ಮತ್ತು ನಗರದ ಗುಜರಿ ಹಾಗು ಹೋಟೆಲುಗಳಲ್ಲಿ ದುಡಿಯುವ ಮಕ್ಕಳು ಸಾಮಾನ್ಯವಾಗಿ ಕಾಣುವುದಿಲ್ಲ. ಇದೆಲ್ಲ ಈ ಐದುವರ್ಷಗಳಲ್ಲಿ ಆಗಿರುವ ಸಾಧನೆಯಲ್ಲ.

1951ರಲ್ಲಿ ಇಡೀ ದೇಶದಲ್ಲಿ ಕೇವಲ 51 ವಿಶ್ವ ವಿದ್ಯಾಲಯಗಳು ಇದ್ದವು. ಅವುಗಳ ಸಂಖ್ಯೇ ಈಗ 300 ದಾಟಿವೆ. ಇದಲ್ಲದೆ ನೂರಾರು ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳು, ಪಶು ಪಾಲನಾ ವಿವಿಗಳು, ತೋಟಗಾರಿಕೆ, ಮೀನುಗಾರಿಕೆ ಮತ್ತು ವಿಶ್ವ ದರ್ಜೆಯÀ ವೈಜ್ಞಾನಿಕ ಮತ್ತು ಆಡಳಿತ ನಿರ್ವಹಣೆ ಶಿಕ್ಷಣ ನೀಡುವ ಐಐಟಿ, ಐಐಎಂ ಸಂಸ್ಥೆಗಳು ಹಲವು ವರ್ಷಗಳಿಂದ ಬಹುತೇಕ ರಾಜ್ಯಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ.

ಹಾಗೆಯೇ ದೇಶದ ಭಾರೀ ನೀರಾವರಿ ಯೋಜನೆಗಳ ಜಲಾಶಯಗಳಲ್ಲಿ ಮುಖ್ಯವಾದವು ಹಿರಾಕುಡ್ ಜಲಾಶಯ ( 1957) ಕೃಷ್ಣ (1960), ಬಾಕ್ರಾ ನಂಗಲ್ ( 1963), ಲಿಂಗನಮಕ್ಕಿ (1964), ಇಡುಕ್ಕಿ 1973, ಶ್ರೀರಾಂ ಸಾಗರ್ ( 1977), ಶ್ರೀಶೈಲಂ 1984, ನರ್ಮದಾ 2005 ಹೀಗೆ ನೂರಾರು ಅಣೆಕಟ್ಟುಗಳು ಸ್ವಾತಂತ್ರ್ಯಾ ನಂತರ ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು ರಾಜ್ಯ ಸರ್ಕಾರದ ಹಣವೇ ಆಗಿದ್ದರೂ, ಆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೂ ಆಡಳಿತ ಮಾಡಿದ ಉದಾಹರಣೆಗಳಿವೆ.

ಇದಲ್ಲದೆ ರೈಲ್ವೆ, ವಿಮಾನಯಾನ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರದಲ್ಲಿ ಇಸ್ರೋ ಸಾಧನೆ, ಯುದ್ಧ ವಿಮಾನಗಳ ತಯಾರಿಕೆ, ಆಹಾರ ಸಂಸ್ಕರಣೆ, ರಸ್ತೆ, ಜಲಸಾರಿಗೆ ನಿರ್ಮಾಣ ಹೀಗೆ ಹೇಳುತ್ತಾ ಹೋದರೆ ನಾನು ಮೊದಲೇ ಹೇಳಿದಂತೆ ಸಮುದ್ರದ ಅಲೆಗಳನ್ನು ಎಣಿಸುವ ಸಾಹಸವಾಗುತ್ತದೆ. ಇದೆಲ್ಲದರ ಜೊತೆಗೆ ವೈರಿ ರಾಷ್ಟ್ರಗಳ ವಿರುದ್ಧದ ಹೊರಾಟ, ಅದಕ್ಕೆ ಪೂರಕವಾಗಿ ನಮ್ಮ ಶಕ್ತಿ ಸಾಮಥ್ರ್ಯವನ್ನು ತೋರಲು ಅಣ್ವಸ್ತ್ರ ಸಾಧನೆಯ (ಪೋಖ್ರಾನ್) ಪರೀಕ್ಷೆ, ವಿದೇಶಾಂಗ ವ್ಯವಾಹರಗಳಲ್ಲಿ ವಿಶ್ವದ ರಾಷ್ಟ್ರಗಳ ಜೊತೆ ಸಂಬಂಧ ವೃದ್ಧಿ ಸೇರಿವೆ.

ನೆಹರೂ ಕಾಲವನ್ನು ಬೃಹತ್ ಕೈಗಾರಿಕೆಗಳ ಸ್ಥಾಪನೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕಾಲದಲ್ಲಿ ಕೃಷಿಗೆ ಪ್ರಾಮುಖ್ಯತೆ ನೀಡಲಾಯಿತೆಂದು, ಇಂದಿರಾ ಗಾಂಧಿ ಅವರ ಕಾಲದಲ್ಲಿ ಜನಸಾಮಾನ್ಯರಿಗೂ ಸ್ಪಂದಿಸುವಂತೆ ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಮೊರಾರ್ಜಿ ದೇಸಾಯಿ ಅವರ ಕಾಲದಲ್ಲಿ ಬಿಗಿಯಾದ ಆಡಳಿತ, ಆರ್ಥಿಕ ಶಿಸ್ತು ತರಲು 10,000 ಮತ್ತು 1000 ನೋಟುಗಳ ನಿಷೇಧ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗಾಗಿ ಬಿ.ಪಿ. ಮಂಡಲ್ ಆಯೋಗ ರಚನೆ, ವಿಪಿ ಸಿಂಗ್ ಆಳ್ವಿಕೆಯಲ್ಲಿ ಮಂಡಲ್ ಆಯೋಗದ ಜಾರಿಗಾಗಿ ಯತ್ನ, ರಾಜೀವ್ ಗಾಂಧಿ ಕಾಲದಲ್ಲಿ ದೇಶದಾದ್ಯಂತ ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರೀಕರಣ , ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿಗಳ ಕಾಯ್ದೆ ರೂಪಿಸಿದ್ದು, ನರಸಿಂಹರಾವ್ ಆಡಳಿತದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿ, ದೇವೇಗೌಡರ ಕಾಲದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ, ಗುಜ್ರಾಲ್ ಆಡಳಿತದಲ್ಲಿ ವಿದೇಶಾಂಗ ನೀತಿಗೆ ವಿಶೇಷ ಒತ್ತು ಹೀಗೆ ಬಿಜೆಪಿ ಹೊರತುಪಡಿಸಿದ ಕಾಂಗ್ರೆಸ್ ಮತ್ತು ಇತರೆ ಸಮ್ಮಿಶ್ರ ಸರ್ಕಾರಗಳ ಆಳ್ವಿಕೆಯಲ್ಲಿ ಸಾಕಷ್ಟು ಸಾಧನೆಗಳಾಗಿರುವುದನ್ನು ತಳ್ಳಿಹಾಕಲಾಗದು.

ಅಟಲ್ ಬಿಹಾರಿ ವಾಜಪೆಯಿ ಅವರ ಸರ್ಕಾರದಲ್ಲಿ ಭಾರತ -ಪಾಕ್ ಸಂಬಂಧ ಕುದುರಿಸುವ ಯತ್ನ, ಮತ್ತೆ ಅಣ್ವಸ್ತ್ರಗಳ ಪರೀಕ್ಷೆ, ಇಡೀ ದೇಶದ ನಾಲ್ಕು ಭಾಗಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ. ಡಾ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಮುಂದುವರಿದ ಮುಕ್ತ ಆರ್ಥಿಕ ನೀತಿ, ಆಹಾರದ ಹಕ್ಕು, ಬಡಮಕ್ಕಳಿಗೂ ಉತ್ತಮ ಖಾಸಗಿ ಶಾಲೆಗಳ ಪ್ರವೇಶಕ್ಕಾಗಿ ತಂದ ಆರ್ ಟಿ ಇ, ಹಳ್ಳಿಗಳಲ್ಲಿ ಜನರಿಗೆ ವರ್ಷದಲ್ಲಿ ಕಡ್ಡಾಯವಾಗಿ ಕೈಗೆ ಕೆಲಸ ಸಿಗಲು ಜಾರಿಗೆ ತಂದ ನರೇಗಾ ಯೋಜನೆ ಇತ್ಯಾದಿ. ಹೀಗಿರುವಾಗ ಯಾವುದು ನವ ಭಾರತದ ಕಲ್ಪನೆ? ಪ್ರತಿಯೊಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಅವರವರದೇ ಆದ ಮತ್ತು ಆಗಿನ ಕಾಲಕ್ಕೆ ಅವಶ್ಯವಾದ ಆದ್ಯತೆಗಳಿಗೆ ತಕ್ಕಂತೆ ಕೆಲಸ ಮಾಡಿವೆ. ನಿಜ. ಈ ಎಲ್ಲರ ಆಡಳಿತದಲ್ಲೂ ಒಂದಲ್ಲ ಒಂದು ಸಾಂಧರ್ಭಿಕ ತಪ್ಪುಗಳು ಅಂದರೆ ತುರ್ತು ಪರಿಸ್ಥಿತಿ ಜಾರಿ, ನರಸಿಂಹರಾವ್ ಆಡಳಿತದಲ್ಲಿ ಬಾಬರಿ ಮಸೀದಿ ನೆಲಸಮ ಮತ್ತು ಅದರ ಪರಿಣಾಮ ಕೋಮು ಘರ್ಷಣೆಗಳು ನಡೆದಿವೆ. ಆದರೆ ಈ ಹಿಂದಿನ 60 ವರ್ಷಗಳಲ್ಲಿ ಏನೇನೂ ಆಗಿಲ್ಲ ಎನ್ನುವ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವುದಕ್ಕೆ ನಾವು ಈಗಿರುವ ಸ್ಥಿತಿಗೆ ಕಾರಣ. ಆದರೂ ಇಷ್ಟೆಲ್ಲ ಸಾಧನೆ ಮತ್ತು ಅಭಿವೃದ್ಧಿ ಆಗಿದ್ದರೂ, ದೇಶವನ್ನು ವ್ಯಾಪಿಸಿರುವ ಭ್ರಷ್ಟಾಚಾರ, ಹಳ್ಳಿಗಳಲ್ಲಿರುವ ಕಿತ್ತುತಿನ್ನುವ ಬಡತನ, ಕೃಷಿ ವಲಯದಲ್ಲಿನ ಸಮಸ್ಯೆ, ದಲಿತರ ಸ್ಥಿತಿಗತಿ,ಮತ್ತು ದೇಶವನ್ನು ಒಡೆದು ಆಡಳುತ್ತಿರುವ ಕೋಮುವಾದ, ಜಾತಿವ್ಯವಸ್ಥೆ ನಮ್ಮ ಅಭಿವೃದ್ಧಿ ಸಾಧನೆಗೆ ಅಡ್ಡಿಯಾಗಿವೆ. ದೇಶ ಇನ್ನೂ ಅಭಿವೃದ್ಧಿಯತ್ತ ಸಾಗಲು ಇನ್ನೂ ಹಲವಾರು ವರ್ಷಗಳೇ ಬೇಕಾದೀತು.