ಎ.ಕೆ.ಸುಬ್ಬಯ್ಯ ಅವರೊಂದಿಗೆ ಒಂದು ಮಾತುಕತೆ

 

ಎ.ಕೆ.ಸುಬ್ಬಯ್ಯ ಅವರೊಂದಿಗೆ ಒಂದು ಮಾತುಕತೆ

ಪ್ರಿಯ ಓದುಗರೇ, 

ಸುದ್ದಿ ಮಾಡುವ ಸುಬ್ಬಯ್ಯ, ನಂಜು ನಾಲಗೆಯ ಸುಬ್ಬಯ್ಯ ಎಂದೆಲ್ಲ ಒಂದು ಕಾಲದಲ್ಲಿ ಹೆಸರಾಗಿದ್ದ ಎ.ಕೆ.ಸುಬ್ಬಯ್ಯ ಅವರನ್ನು ಕೆಲವು ತಿಂಗಳುಗಳಿಂದ ಭೇಟಿಯಾಗಿರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಲೇಬೇಕೆಂಬ ತುಡಿತ. ನನ್ನ ಕೆಲಸದ ಒತ್ತಡದಲ್ಲಿ ಈಗ, ಆಗ ಅನ್ನುತ್ತಾ ಹದಿನೈದು ದಿನಗಳಿಂದ ಎಳೆದಾಡಿ ನಿನ್ನೆಯಷ್ಟೇ ಮಠದಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಕೊನೆಗೂ ಭೇಟಿಯಾದೆ. ಎತ್ತರದ ಧೀರ, ಗಂಭೀರ ವ್ಯಕ್ತಿತ್ವ, ನಿಷ್ಠುರ ಮಾತುಗಳಿಂದಲೇ ಗಮನ ಸೆಳೆಯುತ್ತಿದ್ದ ಸುಬ್ಬಯ್ಯ ದೈಹಿಕವಾಗಿ ಕೃಶವಾಗಿರುವುದನ್ನು ನೋಡಿ ಅಚ್ಚರಿ, ಬೇಸರ ಒಮ್ಮೆಲೇ ಕಾಡಿತು. ಅಂಥ ಸುಬ್ಬಯ್ಯ ಹೀಗೆ? ಕಳೆದ ವರ್ಷ ಭೇಟಿಯಾಗಿದ್ದಾಗ ವಾರದಲ್ಲಿ ಮೂರು ಸಲ ಡಯಾಲಿಸಿಸ್ ಮಾಡಿಸಲು ಆಸ್ಪತ್ರೆಗೆ ಹೋಗುತ್ತಿರುವುದಾಗಿಯೂ. ವಯೋಸಹಜ ಆರೋಗ್ಯ ಸಮಸ್ಯೆಗಳಿವೆ ಎಂದೂ ಹೇಳಿದ್ದರು. ಆಗ ಕೂಡ ಹೀಗೆ ಕಂಡಿರಲಿಲ್ಲ. ಅವರು ಹಾಗಿರುವುದನ್ನು ನನಗೇಕೋ ಒಪ್ಪಲು ಸಾಧ್ಯವಾಗಲಿಲ್ಲ. ಈಗ ಆಸ್ಪತ್ರೆಗೆ ಹೋಗುತ್ತಿಲ್ಲ, ಮನೆಯಲ್ಲೇ ದಿನಕ್ಕೆ ಮೂರು ಸಲ ಡಯಾಲಿಸಿಸ್ ಮಾಡುತ್ತಿರುವುದಾಗಿ ಸುಬ್ಬಯ್ಯ ತಿಳಿಸಿದರು. ನಾನು ಹೋದಾಗ ಕೂಡ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. 

ಕೊಡಗಿನ ಮೂಲನಿವಾಸಿಯಾಗಿದ್ದರೂ ಅಲ್ಲಿನ ಇತರ ಅಹಿಂದ ಸಮುದಾಯಗಳೊಂದಿಗೆ ಗುರುತಿಸಿಕೊಂಡಿರುವ ಏಕೈಕ ದನಿ ಸುಬ್ಬಯ್ಯ. ಒಂದು ಹೇಳಿಕೆ ನೀಡಿದರೆ ಅದೆಂಥ ವಿರೋಧಿ ನಿಲುವಿನ ಗುಂಪಾದರೂ ಸರಿ ಬಾಯಿ ಮುಚ್ಚಿ ಕೂರಬೇಕಿತ್ತು ಅಂಥ ಶಕ್ತಿ ಸುಬ್ಬಯ್ಯ. ಕಳೆದ ವರ್ಷ ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ರಚಿಸಿದ್ದ ಸ್ವಾಗತ ಸಮಿತಿಯಲ್ಲಿ ಆರಂಭದಲ್ಲಿ ನನ್ನ ಸೇರ್ಪಡೆಯಾಗದಿದ್ದರೂ ಅದು ಯಾರಿಂದಲೋ ಏನೋ ಕೊನೆಗೆ ನನ್ನ ಹೆಸರನ್ನೂ ಸೇರಿಸಿಕೊಂಡಿದ್ದರು. ಆದರೆ ಅದರಲ್ಲಿ ಸಕ್ರಿಯವಾಗಿ ನಾನು ಪಾಲ್ಗೊಂಡಿರಲಿಲ್ಲ. ನಾನು ಅಲ್ಲಿ ನಿರ್ವಹಿಸುವಂಥ ಕೆಲಸವೇನೂ ಇರಲಿಲ್ಲ ಅನ್ನಿಸಿ ಸಮಿತಿಯಿಂದ ನಿರ್ಗಮಿಸಿದ್ದೆ. ಹಾಗೆ ಮಾಡಿದ್ದು ನನಗೆ ಸುಬ್ಬಯ್ಯ ಅವರ ಮೇಲಿನ ಪ್ರೀತಿ ಕಡಿಮೆಯಾಗಿತ್ತೆಂದಲ್ಲ.  ಅವರಿಗೆ 75 ವರ್ಷ ತುಂಬಿದಾಗ ಕೊಡಗಿನಲ್ಲಿ ನಡೆದ ಮೊದಲ ಕಾರ್ಯಕ್ರಮದಲ್ಲಿ ಕೂಡ  ನಾನೂ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆಗಲೂ ನಾನು ಪಾಲ್ಗೊಂಡಿರಲಿಲ್ಲ. ಅದೇ ವರ್ಷ ಕುಶಾಲನಗರದಲ್ಲಿ ನಡೆದ ಎ.ಕೆ.ಸುಬ್ಬಯ್ಯ-75  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದೆ. ನಾನು ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಂಘಟಕರ ಕಾರಣಗಳಿಂದಾಗಿ ಪಾಲ್ಗೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವೇ ಹೊರತು ಇದಕ್ಕೆ ಸುಬ್ಬಯ್ಯ ಅವರು ಕಾರಣರಾಗಿರಲಿಲ್ಲ. 

ಕೊಡಗಿನಲ್ಲಿ ನನ್ನ ಇಷ್ಟದ ರಾಜಕಾರಣಿಗಳೆಂದರೆ ಎಂ.ಸಿ.ನಾಣಯ್ಯ, ಎ.ಕೆ.ಸುಬ್ಬಯ್ಯ ಮತ್ತು ಬಿ.ಎ.ಜೀವಿಜಯ. ನಾಣಯ್ಯ ನನ್ನ ತಂದೆಯ ಪರಮಾಪ್ತ ಸ್ನೇಹಿತರು. ಹೀಗಾಗಿ ಅವರಿಗೆ ನನ್ನ ಬಗ್ಗೆ ಸಲುಗೆ ಇದೆ. ಅದು ವೈಯಕ್ತಿಕ ಸಂಬಂಧ. ಇದು ನನ್ನ ವೃತ್ತಿ ಜೀವನಕ್ಕೆ ಎಂದೂ ಅಡ್ಡಿಯಾಗಲಿಲ್ಲ. ಆದರೆ ಎ.ಕೆ.ಸುಬ್ಬಯ್ಯ ಮತ್ತು ನನ್ನ ಸಂಬಂಧ ವೈಚಾರಿಕ ನೆಲೆಗಟ್ಟಿನಲ್ಲಿತ್ತು. ಅವರ ರಾಜಕೀಯ ಬದುಕಿನ ಎಲ್ಲ ಅಧ್ಯಾಯಗಳನ್ನೂ ಬಲ್ಲ ನನಗೆ ಅವರಲ್ಲಿನ ವೈಚಾರಿಕ ನಿಲುವಿನಲ್ಲಾದ ಅಗಾಧ ಬದಲಾವಣೆ ನನಗೆ ಅಚ್ಚರಿ ಮತ್ತು ಖುಷಿಯನ್ನೂ ತಂದಿತ್ತು. ನಾನು ಬೆಂಗಳೂರಿಗೆ ಬಂದ ಶುರುವಿನಲ್ಲಿ ಆಗ ವಿಧಾನಪರಿಷತ್ ಸದಸ್ಯರಾಗಿದ್ದ ಸುಬ್ಬಯ್ಯನವರೇ ಒಂದು ರೀತಿಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಗೆ ಸಂಬಂಧಿಸಿದಂತೆ ಮಾರ್ಗದರ್ಶಕರಾಗಿದ್ದರು. ಹಾಗೇ ನಾಣಯ್ಯನವರೂ ಕೂಡ. 

ನಿನ್ನೆ ಸುಬ್ಬಯ್ಯನವರು ಕೃಶವಾಗಿದ್ದನ್ನು ನೋಡಿ ಬೇಸರವಾಗಿತ್ತಾದರೂ ಅವರ ಮಾತುಗಳನ್ನು ಕೇಳುತ್ತಾ ಹೋದಂತೆ ಅದೇ ಉತ್ಸಾಹ, ಕೋಮುವಾದಿಗಳ ವಿರುದ್ಧದ ಆಕ್ರೋಶ, ದುರ್ಬಲಗೊಳ್ಳದ ಚಿಂತನೆ ಹರಿದುಬರುತ್ತಿದ್ದಂತೆ ನನ್ನ ಆತಂಕ ದೂರವಾಯಿತು. ಅವರ ಮನಸ್ಸಿಗೆ ಮುಪ್ಪಾಗಿರಲಿಲ್ಲ. ಅವರು ಮಾತಿಗೆ ಶುರು ಮಾಡಿದರೆಂದರೆ ಒಂದೊಂದು ವಿಷಯವನ್ನು ತರ್ಕಬದ್ಧವಾಗಿ ಮಂಡಿಸುತ್ತಾರೆ. ನಿನ್ನೆ ಹಾಗೆಯೇ ಆಯಿತು. ಇವತ್ತು ದೇಶದಲ್ಲಿ ಮಹಾತ್ಮ ಗಾಂಧಿಯ ಹಿಂದುತ್ವದ ಎದುರು ಗೋಡ್ಸೆಯ ಹಿಂದುತ್ವದ ನೇರ ಸಂಘರ್ಷ ನಡೆಯುತ್ತಿದೆ. ತಾತ್ಕಾಲಿಕವಾಗಿ ಗಾಂಧಿಯ ಹಿಂದುತ್ವಕ್ಕೆ ಸೋಲಾಗಿರುವಂತೆ ಭಾಸವಾಗಬಹುದು. ಅದು ನಿಜವಾದ ಸೋಲಲ್ಲ.ಪ್ರಗತಿಪರರೂ ತಮ್ಮ ವೈಫಲ್ಯದ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲಿ ಎಡವಿದ್ದೇವೆ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು. ಹೋರಾಟ ಪ್ರಾಮಾಣಿಕವಾಗಿದ್ದರೆ ಜನತೆಗೆ ಅದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರೆ ಸೋಲುವುದು ಸಾಧ್ಯವೇ ಇಲ್ಲ ಎಂದು ಸುಬ್ಬಯ್ಯ ಅಚಲ ಭರವಸೆಯಿಂದ ನುಡಿದರು. ಮಹಾತ್ಮ ಗಾಂಧಿಯ ಹಿಂದುತ್ವ ಎಂದರೆ ಅದು ಜೀವಪರವಾದದ್ದು, ಗೋಡ್ಸೆಯ ಹಿಂದುತ್ವ ಜೀವ ತೆಗೆಯುವಂಥದ್ದು ಎಂದು ಕೋಪದಿಂದಲೇ ಹೇಳಿದರು. ಅವರ ಬೌದ್ಧಿಕ ಚೈತನ್ಯ ಉಡುಗಿರಲಿಲ್ಲ ಎನ್ನುವುದು ಅವರ ಮಾತುಗಳಿಂದಲೇ ಅರ್ಥವಾಗುತ್ತಿತ್ತು. 

ಮಾತು ಲೋಕಸಭಾ ಚುನಾವಣೆಯ ಫಲಿತಾಂಶದತ್ತ ತಿರುಗಿತು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾರರು ದೇವೇಗೌಡರ ಕುಟುಂಬಕ್ಕೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಎಲ್ಲರೂ ಭಾವಿಸಿರುವಂತೆ ಒಕ್ಕಲಿಗರು ಪ್ರಬಲರಾಗಿರುವ ಮಂಡ್ಯ ಕ್ಷೇತ್ರದ ಮತದಾರರು ದೇವೇಗೌಡರ ಕುಟುಂಬ ಬಲಿಷ್ಠವಾಗಲಿ ಎಂದೇನೂ ಮತ ಹಾಕುತ್ತಿರಲಿಲ್ಲ. ಅದು ಫ್ಯೂಡಲ್ ಸೊಸೈಟಿ. ಅವರು ಆಯ್ಕೆ ಮಾಡಿದ ಜನಪ್ರತಿನಿಧಿಯಿಂದ ಕೆಲಸ ಮಾಡಿಸಿಕೊಳ್ಳುವುದು ಆ ಜನರಿಗೇ ಗೊತ್ತು. ಹೀಗಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅವರಿಗಿದೆ. ದೇವೇಗೌಡ ಕುಟುಂಬವನ್ನು ಜಾತಿ ಕಾರಣದಿಂದಲೇ ಆಯ್ಕೆ ಮಾಡಬೇಕೆಂಬ ಮನೋಸ್ಥಿತಿ ಅಲ್ಲಿನ ಮತದಾರರಿಗಿದ್ದಿದ್ದರೆ ಸುಮಲತಾ ಅಂಬರೀಷ್ ಆಯ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಸುಬ್ಬಯ್ಯ ತಮ್ಮ ಮಾತನ್ನು ಸಮರ್ಥಿಸಿಕೊಂಡರು. ಅವರಿಗೆ ಈಗಲೂ ಸಿದ್ದರಾಮಯ್ಯ ಬಗ್ಗೆ ಅಪಾರ ಪ್ರೀತಿ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲವು ಶಾಸಕರು ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಮುಂಬೈನಲ್ಲಿ ಅವಿತುಕೊಂಡಿದ್ದರ ಬಗ್ಗೆ ತೀವ್ರ ಕೋಪ ವ್ಯಕ್ತಪಡಿಸಿದರು. ಅಮಿತ್ ಷಾ ನೇರವಾಗಿ ಈ ಎಲ್ಲ ಶಾಸಕರ ಜತೆ ನೇರ ಸಂಪರ್ಕ ಹೊಂದಿದ್ದನಂತೆ. ಮೋದಿ ಮತ್ತು ಷಾ ಪ್ರಜಾಸತ್ತೆಯನ್ನು ಅಣಕಿಸುವಂತೆ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಪ್ರಧಾನಿ ತನ್ನ ಅಧಿಕಾರವನ್ನು ಪಕ್ಷದ ಬೆಳವಣಿಗೆಗೆ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು ಎಂದರು ಸುಬ್ಬಯ್ಯ.

ಕಾಂಗ್ರೆಸ್ ವಿರೋಧಿ ಮನೋಸ್ಥಿತಿಯನ್ನು ದೇಶಾದ್ಯಂತ ತುಂಬುತ್ತಿರುವ ರೀತಿ ಅವರ ಇನ್ನಷ್ಟು ಬೇಸರಕ್ಕೆ ಕಾರಣವಾಗಿತ್ತು. ಸಮಾಜವಾದಿ ಲೋಹಿಯಾ ಕಾಲದಲ್ಲೇ ಕಾಂಗ್ರೆಸ್ ವಿರೋಧಿ ಚಿಂತನೆಗಳನ್ನು ತುಂಬುವ ಕೆಲಸ ಆರಂಭವಾಗಿತ್ತು. ಸ್ವಾತಂತ್ರ್ಯಕ್ಕೆ ಹೋರಾಡಿದ ನೆಹರೂ ಕುಟುಂಬ ಸಹಜವಾಗಿಯೇ ಆರಂಭದಲ್ಲೇ ಅಧಿಕಾರಕ್ಕೆ ಬಂದಿದೆ. ಅವರೆಂದೂ ದೇಶದ ಜನರ ವಿರೋಧಿಯಂತೆ ಕಾರ್ಯನಿರ್ವಹಿಸಲಿಲ್ಲ. ದೇಶದ ಪ್ರಗತಿಯಲ್ಲಿ ಕಾಂಗ್ರೆಸ್ ಮತ್ತು ನೆಹರೂ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಈಗ ಮೋದಿ ಬಳಗವಂತೂ ಕಾಂಗ್ರೆಸ್ ಮುಕ್ತ ಭಾರತದ ಮಾತಾಡುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಕಲ್ಪನೆಯಾದರೂ ಯಾಕೆ ಬೇಕು ಎಂದು ಸುಬ್ಬಯ್ಯ ಪ್ರಶ್ನಿಸಿದರು.

ವಿವಿಧ ಕಾಲಘಟ್ಟಗಳಲ್ಲಿ ಕಾಂಗ್ರೆಸ್ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅದು ಈಗಲೂ ದುರ್ಬಲರ ದನಿಯಾಗಿದೆ. ಆದರೆ ಅದರ ಮಹತ್ವವನ್ನು ಮರೆಮಾಚುವ ಕಾರ್ಯ ಮೋದಿ ಆಡಳಿತದಲ್ಲಿ ಸುಗಮವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಅನಾರೋಗ್ಯ ವಿಷಯ ತಿಳಿದು ಮೊದಲೆಲ್ಲ ಅನೇಕ ಮಂದಿ ಬರುತ್ತಿದ್ದರು. ಈಗ ಅಷ್ಟಾಗಿ ಯಾರೂ ಬರುತ್ತಿಲ್ಲ. ಯಾರಾದರೂ ಬಂದಾಗ ಸಂತೋಷವಾಗುತ್ತದೆ. ನನ್ನಲ್ಲೂ ಉಲ್ಲಾಸ ಮೂಡುತ್ತದೆ. ಯಾರೂ ಬರದಿದ್ದಾಗ ಸುಮ್ಮನೆ ಮಲಗಿರುತ್ತೇನೆ. ನಾನು ಕೊನೆಯಾಗುವುದನ್ನು ಕಾಯುತ್ತಿದ್ದೇನೆ ಎಂದಾಗ ತುಂಬ ನೋವಾಯಿತಾದರೂ ಅದನ್ನು ತೋರಿಸಿಕೊಳ್ಳಲಿಲ್ಲ. 

ವಿಧಾನಪರಿಷತ್ ನ ದಾಖಲೆ ಪ್ರಕಾರ ಇದೇ ಆಗಸ್ಟ್ 9 ಕ್ಕೆ ಸುಬ್ಬಯ್ಯ ಅವರಿಗೆ  83 ವರ್ಷ. ಮಠದಹಳ್ಳಿಯಲ್ಲಿರುವ ಅವರ ಮನೆಯಲ್ಲಿ ಮೀನಾ ಎಂಬ ಅವರ ಕುಟುಂಬದ ಸದಸ್ಯರೊಬ್ಬರು ಸುಬ್ಬಯ್ಯನವರ ಪ್ರತಿಯೊಂದು ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಾರಾಂತ್ಯದಲ್ಲಿ ಎರಡು ದಿನ ಕೊಡಗಿಗೆ ಹೋಗಿ ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದ ಸುಬ್ಬಯ್ಯ ವೈದ್ಯಕೀಯ ನಿರ್ವಹಣೆ ಸಲುವಾಗಿ ಹೆಚ್ಚು ಸಮಯ ಬೆಂಗಳೂರಿನಲ್ಲೇ ಕಳೆಯುತ್ತಿದ್ದಾರೆ. ಶಾಶ್ವತ ವಿರೋಧ ಪಕ್ಷದ ನಾಯಕರಂತೆ ಕಾರ್ಯ ನಿರ್ವಹಿಸುತ್ತಿರುವ ಸುಬ್ಬಯ್ಯ ಅವರ ದನಿ ನೂರ್ಕಾಲ ಪ್ರತಿಧ್ವನಿಸುತ್ತಿರಲಿ. ಭ್ರಷ್ಟಾಚಾರದ ವಿರುದ್ಧ ಏಕಯೋಧ ಸೇನೆಯಂತೆ ಕ್ರಿಯಾಶೀಲರಾಗಿದ್ದ ಸುಬ್ಬಯ್ಯ ಪ್ರಗತಿಪರ ಹೋರಾಟವನ್ನು ವ್ಯಾಪಾರಿಗಳಿಂದ ಮುಕ್ತಗೊಳಿಸಿ ಪ್ರಾಮಾಣಿಕ ಪ್ರಗತಿಪರ ಚೇತನಗಳನ್ನು ಅವರು ಮುನ್ನಡೆಸುತ್ತಿರಲಿ. ಈ ಹಿನ್ನೆಲೆಯಲ್ಲಿ ಅವರ ದೈಹಿಕ ಶಕ್ತಿ ಮರುಕಳಿಸಲಿ. ಇದು ನಮ್ಮೆಲ್ಲರ ಹಾರೈಕೆ.