53 ರ ತರುಣ ಈ  ಹಯಗ್ರೀವ  

53  ರ ತರುಣ ಈ  ಹಯಗ್ರೀವ  

ಈ ಲೇಖನವನ್ನು ಬರೆಯುವ ಸಮಯಕ್ಕೆ ಕ್ರೀಡಾರಂಗದಲ್ಲಿ ಹಲವಾರು ಬೆಳವಣಿಗೆಗಳಾಗಿವೆ.  ಒಂದೂವರೆ ತಿಂಗಳಿಗಿಂತ ಹೆಚ್ಚು ಕಾಲ ವಿಶ್ವ ಕಪ್ ಕ್ರಿಕೆಟ್ ನಡೆದದ್ದರಿಂದ ಬೇರಾವ ಕ್ರೀಡೆಯ ಕುರಿತು ಬರೆಯಲಾಗಲಿಲ್ಲ. ಆ ಪಂದ್ಯಾವಳಿಯ ಬಗ್ಗೆಯೇ, ಅದು ಮುಗಿದ ನಂತರವೂ ಬರೆಯುವುದು ಸಾಕಷ್ಟಿದೆ. ಆದರೆ ವಾರಕ್ಕೊಂದು ಅಂಕಣ ಬರೆಯುವಾಗ ಇತಿಮಿತಿಗಳಿರುವುದರಿಂದ ಹೇಳಬೇಕಾದ್ದನ್ನೆಲ್ಲ ನಿಮ್ಮೊಡನೆ ಹಂಚಿಕೊಳ್ಳುವುದಕ್ಕಾಗುವುದಿಲ್ಲ. ಈ ಲೇಖನಕ್ಕೆ ಕೂಡ ನೀವು ಅಪೇಕ್ಷಿಸಬಹುದಾದಂತಹ ವಸ್ತುವನ್ನು ಬಿಟ್ಟು ಬೇರೆಯೇ ವಿಷಯವನ್ನು ಕೈಗೆತ್ತಿಕೊಂಡಿದ್ದೇನೆ. ಅದೇ ಮಿಲಿಂದ್ ಸೋಮನ್. ಡಿಪ್ಲೊಮ ಎಂಜಿನಿಯರ್ ಆದ ಮಿಲಿಂದ್ ಆ ಕ್ಷೇತ್ರದಲ್ಲಿ ಅವಕಾಶ ಕಡಿಮೆ ಎಂಬ ಕಾರಣಕ್ಕಾಗಿ ಮಾಡೆಲ್ ರಂಗಕ್ಕೆ ಪ್ರವೇಶಿಸಿ, ನಂತರ ಚಲನಚಿತ್ರ ರಂಗಕ್ಕೂ ಕಾಲಿಟ್ಟು, ಚಿತ್ರನಿರ್ಮಾಣಕ್ಕೂ ಕೈಹಚ್ಚಿದರು. ಆದರೆ, ಮೂಲತಃ ಕ್ರೀಡಾಪಟುವಾದ ಮಿಲಿಂದ್ ಕ್ರೀಡಾರಂಗದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಪಟುವೂ ಹೆಮ್ಮೆ ಪಡುವಂಥಾದ್ದು. 

ಸ್ಟಾರ್ ಪಟ್ಟ ಗಳಿಸಬೇಕಿದ್ದಲ್ಲಿ ರೂಪಕ್ಕಿಂತ ಅಂದವಾದ ಮೈಕಟ್ಟು ಮುಖ್ಯ ಎನ್ನುವಂಥ ಪರಿಸ್ಥಿತಿ ಚಲನಚಿತ್ರರಂಗದಲ್ಲಿದೆ. ಹಾಲಿವುಡ್ ನ ಆರ್ನಾಲ್ಡ್ ಶ್ವಾರ್ಝನೆಗರ್, ಸಿಲ್ವೆಸ್ಟರ್ ಸ್ಟಾಲೊನ್ರಿಂದ ಹಿಡಿದು, ಬಾಲಿವುಡ್ ನ ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್, ಕಮಲ್ ಹಾಸನ್, ಕನ್ನಡದ ದರ್ಶನ್, ಪುನೀತ್, ಎಲ್ಲರೂ ಜಿಮ್ ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿದವರೇ. 48 ಇಂಚು ಎದೆ, ಸಿಂಹಕಟಿ ಸಧೃಡವಾದ ತೊಡೆ-ತೋಳುಗಳು ಮಾಡೆಲ್ ಅಥವಾ ನಟನ ಆಯ್ಕೆಗೆ ಇರಲೇಬೇಕಾದ ಕನಿಷ್ಠ ಅರ್ಹತೆಗಳು. ಸ್ವಲ್ಪ ಸುಂದರನಾಗಿದ್ದರೆ ಸಾಕು. ಜಿಮ್ ಎಂದರೆ ಇಷ್ಟಪಡದ ಅತಿ ಕೆಲವು ಸೆಲೆಬ್ರಿಟಿಗಳಲ್ಲಿ ಮಿಲಿಂದ್ ಮುಖ್ಯರು. ಮುಕ್ತ ಬಯಲಿನಲ್ಲಿ ಓದುವ ಖುಷಿಯೇ ಅವರ್ಣನೀಯ ಎನ್ನುತ್ತಾರೆ, ಮಿಲಿಂದ್. ಆ ಮುಕ್ತತೆಯ ಕುರುಹಾಗಿ ಅವರು ಮಾಡೆಲ್ಲಿಂಗ್ ವೃತ್ತಿಯನ್ನು ಪ್ರವೇಶಿಸಿದ ಆರಂಭದಲ್ಲೇ ಟಫ್ ಬ್ರಾಂಡ್ ಷೂಗಾಗಿ ಅಂದಿನ ಹೆಸರುವಾಸಿ ಮಾಡೆಲ್ ಮಧು ಸಪ್ರೆ ಅವರೊಂದಿಗೆ ನಗ್ನರಾಗಿ ಜಾಹಿರಾತೊಂದರಲ್ಲಿ ಕಾಣಿಸಿಕೊಂಡು ಅದು ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಆ 1995 ರಲ್ಲಿ ಆಯ್ದ ಪತ್ರಿಕೆಗಳಲ್ಲಿ ಪ್ರಕಟವಾದ ಆ ಜಾಹಿರಾತಿನಲ್ಲಿ ಮಿಲಿಂದ್ ಮತ್ತು ಮಧು ವಿವಸ್ತ್ರರಾಗಿ ಪೋಸ್ ನೀಡಿದಾಗ ಅವರಿಬ್ಬರನ್ನು ಬಳಸಿದ್ದುದು ಒಂದು ಹೆಬ್ಬಾವು. ಅದು ಬಿಟ್ಟರೆ ಅವರು ಅನುಮೋದಿಸಿದ ಷೂಗಳು. ರಾಷ್ಟ್ರವ್ಯಾಪಿ ಪ್ರತಿಭಟನೆ ಕಂಡ ಆ ಜಾಹೀರಾತು ಅವರಿಬ್ಬರನ್ನೂ ನ್ಯಾಯಾಲಯದ ಮೆಟ್ಟಿಲನ್ನೂ ಏರಿಸಿತು. ಹದಿನಾಲ್ಕು ವರ್ಷಗಳ ನಂತರ ಅಶ್ಲೀಲತೆ ಗಾಗಿ ಅವರ ವಿರುದ್ಧ ದಾಖಲಾದ ಪ್ರಕರಣದಿಂದ ಅವರನ್ನು ಖುಲಾಸೆಗೊಳಿಸಲಾಯಿತು. 

ನಮ್ಮ ವ್ಯವಸ್ಥೆಯಲ್ಲಿ ಕೋರ್ಟಿಗೆ ಅಲೆಯುವುದೆಂದರೆ ಮ್ಯಾರಥಾನ್ ಓಟಕ್ಕೆ ಬೇಕಾದ ಶಕ್ತಿ-ಸಾಮರ್ಥ್ಯ ಬೇಕು. ಅದಕ್ಕೆ ತಕ್ಕಂತೆ, ಮಿಲಿಂದ್ 2008 ರಲ್ಲಿ ಪ್ರಪ್ರಥಮವಾಗಿ ಮುಂಬೈ ಮ್ಯಾರಥಾನ್ ನಲ್ಲಿ ಪಾಲ್ಗೊಂಡರು. 

ಕೋರ್ಟಿಗೆ ಅಲೆಯುವುದರ ಜತೆಗೆ, ಕೋರ್ಟಿನ ಹೊರಗೆ ಕಾಯಬೇಕಾದ್ದು ಮತ್ತೊಂದು ಪರಿಪಾಟಲು. ಮಾಡೆಲ್ ಆಗಿ ಮಿಲಿಂದ್ ಸೆಟ್ ನಲ್ಲಿ ಕಾಯುವ ಅನುಭವ ಪಡೆದಿದ್ದರು. ಶೂಟಿಂಗ್ ನಡುವೆ ದೀರ್ಘಾವಧಿ ಕಾಯುತ್ತಲೇ ಕುಳಿತಿರಬೇಕಾದ ಅಂತಹ ಸಮಯದಲ್ಲಿ ಮಿಲಿಂದ್ ಸಿಗರೆಟ್ ಸೇವಿಸತೊಡಗಿದರು. ಜತೆಗೆ ಚಹಾ. ಇಪ್ಪತ್ತು ಕಪ್ ಟೀ ಕುಡಿಯುವುದು ಸರ್ವೇಸಾಮಾನ್ಯವಾಯಿತು. ಸಿಗರೆಟ್ ದಿನಕ್ಕೆ ಮೂವತ್ತಾದರೂ ಆದೀತು. ದೇಹನಾಶಕ್ಕೆ ಇದಕ್ಕಿಂತ ಬೇರೇನು ಬೇಕು? 

ಕ್ಯಾನ್ಸರ್ ಗೆ ಆತಿಥ್ಯ ನೀಡಬಲ್ಲ ತಂಬಾಕಿನ ಸಾಮರ್ಥ್ಯ ಒಂದು ಕಡೆ. ಅದಕ್ಕಿಂತ ಮೊದಲು ಅದು ಬಲಿತೆಗೆದುಕೊಳ್ಳುವುದು ಧೂಮಪಾನಿಗಳ ಶ್ವಾಸಕೋಶದ ಸಾಮರ್ಥ್ಯವನ್ನು. ಧೂಮಪಾನಿಗಳ ದಮ್ಮು ಕಡಿಮೆ ಆಗುವುದು ಆ ಕಾರಣಕ್ಕೆ. ದಿನಕ್ಕೊಂದು ಪ್ಯಾಕ್ (ಹತ್ತು) ಸಿಗರೆಟ್  ಸೇದಿದರೇ ಸಾಕು, ಲಂಗ್ಸ್ ಎಕ್ಕುಟ್ಟಿ ಹೋಗುತ್ತದೆ. ಹಾಗಿರುವಾಗ ಮೂವತ್ತು ಸಿಗರೆಟ್ ವರೆಗೆ ಸೇದುತ್ತಿದ್ದ ಮಿಲಿಂದ್ ಅದು ಹೇಗೆ ಮ್ಯಾರಥಾನ್ ಓಡಲಿಕ್ಕೆ ಶುರುಮಾಡಿದರು? ಸಿಗರೆಟ್ ಸೇದುವರು ಹತ್ತು ಮೆಟ್ಟಿಲು ಹತ್ತಿದರೆ ಸಾಕು ಉಬ್ಬಸ ಪಡುತ್ತಾರೆ. 

ಸ್ಕಾಟ್ಲೆಂಡಿನ ಗ್ಲಾಸ್ ಗೋನಲ್ಲಿ ಜನಿಸಿದ ಮಿಲಿಂದ್ ಚಿಕ್ಕಂದಿನಲ್ಲೇ ಬಾಂಬೆಗೆ (1973) ಸ್ಥಳಾಂತರಗೊಂಡರು.  ಹತ್ತು ವರ್ಷದ ಬಾಲಕನಾಗಿ ಈಜಲು ಆರಂಭಿಸಿ, ಇಪ್ಪತ್ತು ವರ್ಷದವನಾಗಿ ಮೊದಲ ಬಾರಿಗೆ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ ಆಗಿ ಆ ದಾಖಲೆಯನ್ನು ಸತತವಾಗಿ ಮೂರುವರ್ಷ ಉಳಿಸಿಕೊಂಡರು. ದಕ್ಷಿಣ ಏಷ್ಯಾ ಫೆಡರೇಶನ್ ಗೇಮ್ಸ್  ನಲ್ಲಿ ರಜತ ಪದಕವನ್ನು ಪಡೆದ ಕೀರ್ತಿ ಮಿಲಿಂದ್ರದು. ಚಿಕ್ಕಂದಿನಲ್ಲೇ ಬಿದ್ದ ಆ ಅಡಿಪಾಯವೇ ನಂತರದ ವರ್ಷಗಳ ತಂಬಾಕಿನ ಸೇವನೆಯಿಂದಾದ ದುಷ್ಪರಿಣಾಮಗಳಿಂದ ಮಿಲಿಂದ್ರನ್ನು ಕಾಪಾಡಿರಬೇಕು. ಮೂರು ವರ್ಷದ ಸತತ ಪ್ರಯತ್ನದಿಂದ ತಂಬಾಕು ಚಟದಿಂದ ಹೊರಬಂದ ಮಿಲಿಂದ್ ಶರಬತ್ತಿನಷ್ಟು ಸಿಹಿಯಾದ ಚಹಾ ಸೇವನೆಯನ್ನೂ ತ್ಯಜಿಸಿದರು. ಮಾಂಸಾಹಾರಿಯಾಗಿದ್ದ ಅವರು ಈಗ ಅದನ್ನು ವರ್ಜಿಸಿದ್ದಾರೆ. ನಮ್ಮ ಓದುಗರಿಗೆ ಪ್ರಿಯವಾದ ಸಮಾಚಾರವೆಂದರೆ, ಮಿಲಿಂದ್ ಗೆ ಇಷ್ಟವಾದದ್ದು ರಾಗಿ. ರಾಗಿಗೆ ಬೆಲ್ಲವನ್ನು ಸೇರಿಸಿ ನೀರಿನಲ್ಲಿ ಬೆರೆಸಿ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿರುವ ಮಿಲಿಂದ್ ಆ ಪೇಯ ತಮ್ಮ ಓಟಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ ಎನ್ನುತ್ತಾರೆ. 

ಅದೇನು ಹಿಂದಿನ ಜನ್ಮದಲ್ಲಿ ರೇಸ್ ಕುದುರೆಯಾಗಿದ್ದರೋ ಏನೊ, ಓಡುವುದೆಂದರೆ ಮಿಲಿಂದ್ ಗೆ ಇನ್ನಿಲ್ಲದ ಖುಷಿ. ಮನುಷ್ಯನ ದೇಹರಚನೆಯಾಗಿರುವುದೇ ಓಡುವುದಕ್ಕೆ ಎನ್ನುವ ಮಿಲಿಂದ್ ಮೈಲಿಗಟ್ಟಲೆ ಓಡುವುದರಲ್ಲಿ ನಿಸ್ಸೀಮರು. ದೆಹಲಿಯಿಂದ ಮುಂಬಯಿಗೆ 1500 ಕಿಮೀ. ಆ ದೂರವನ್ನು ಮಿಲಿಂದ್ ಇಬ್ಬರು ಮಹಿಳೆಯರೂ ಸೇರಿದಂತೆ ಮತ್ತಿತರ  ಓಟಗಾರರೊಂದಿಗೆ 30 ದಿನಗಳಲ್ಲಿ ಓಡಿ ಲಿಮ್ಕಾ ದಾಖಲೆ ನಿರ್ಮಿಸಿದರು. 1500 ಕಿಮೀ ದೂರವನ್ನು ಓಡುವುದೆಂದರೆ ಹುಡುಗಾಟವಲ್ಲ. ಮ್ಯಾರಥಾನ್ ಸ್ಪರ್ಧಿಗಳು ತಿಂಗಳುಗಳಷ್ಟು ಮುಂಚಿತವಾಗಿಯೇ ತಯಾರಿಯಲ್ಲಿ ತೊಡಗುತ್ತಾರೆ. ಮಾರಾಥಾನ್ ನಲ್ಲಿ ಕ್ರಮಿಸಬೇಕಾದ ದೂರ 42. 95 ಕಿಮೀ. ಪರಿಣತರು ಆ ದೂರವನ್ನು ಸುಮಾರು ನಾಲ್ಕೂವರೆ ಗಂಟೆಗಳಲ್ಲಿ ಕ್ರಮಿಸುತ್ತಾರೆ. ಅಂದರೆ, ಮಿಲಿಂದ್ ಮತ್ತು ತಂಡ ಒಂದು ತಿಂಗಳ ಕಾಲ ದಿನಂಪ್ರತಿ ಮ್ಯಾರಥಾನ್ ದೂರಕ್ಕಿಂತ ಹೆಚ್ಚು ಕ್ರಮಿಸುತ್ತಿದ್ದರು. ಇದು ಊಹೆಗೂ ಸಿಲುಕದ ಸಾಧನೆ. ಪರಿಸರ ಪ್ರಜ್ಞೆ ಬೆಳೆಸಲು ಎನ್ ಡಿ ಟಿವಿ ಆಯೋಜಿಸುವ ಗ್ರೀನ್ ರನ್ ಪ್ರಯುಕ್ತ ಈ ಸುದೀರ್ಘ ಓಟದ ನಂತರ ಮಿಲಿಂದ್ ಏಳು ಕಿಲೊ ತೂಕದ ಜತೆಗೆ ಕಾಲ್ ಗಳ ಐದು ಉಗುರುಗಳನ್ನೂ ಕಳೆದುಕೊಂಡರೆಂದರೆ ಆ ಸಾಧನೆಯ ಸ್ವರೂಪದ ಸಣ್ಣ ಅಂದಾಜು ತಿಳಿಯುತ್ತದೆ. ಕಾಲಾಂತರದಲ್ಲಿ ಮಿಲಿಂದ್ ಶೂಗಳನ್ನೂ ತ್ಯಜಿಸಿ ಬರಿಗಾಲಲ್ಲಿ ಓದುವ ಕ್ರಮ ಬೆಳೆಸಿಕೊಂಡರು. 

ನಾಲ್ಕು ವರ್ಷದ ಕೆಳಗೆ ಮಿಲಿಂದ್ ಮಿಲಿಂದ್ ಗೆ ಐವತ್ತು ವರ್ಷ ತುಂಬಿತು. ಅದಕ್ಕಾಗಿ ಅವರು ಅವರಿಗೆ ಕೊಟ್ಟುಕೊಂಡ ಕೊಡುಗೆ ವಿಶಿಷ್ಟವಾದದ್ದು. ಸ್ವಿಟ್ಝರ್ಲ್ಯಾಂಡ್ ನಲ್ಲಿ ನಡೆಯುವ ಐರನ್ಮ್ಯಾನ್ ಟ್ರೈಯಥ್ಲಾನ್ ಪ್ರತಿಷ್ಠಿತವಾದದ್ದು. ಆ ಸ್ಪರ್ಧೆಯಲ್ಲಿ ಭಾಗವಹಿಸುವವರು ಒಂದೇ ದಿನದಲ್ಲಿ 3.86 ಕಿಮೀ ಈಜುವುದರೊಂದಿಗೆ, 180.25 ಕಿಮೀ ಸೈಕಲ್ ತುಳಿಯಬೇಕು, ಕೊನೆಯದಾಗಿ 42. ಕಿಮೀ ಓಡಬೇಕು. ಇದಿಷ್ಟನ್ನೂ ತಮ್ಮ ಮೊದಲನೇ ಪ್ರಯತ್ನದಲ್ಲೇ ಸಾಧಿಸಿದ ಮಿಲಿಂದ್ ಅದಕ್ಕೆ ತೆಗೆದುಕೊಂಡ ಒಟ್ಟು ಸಮಯ 15 ಗಂಟೆ 19 ನಿಮಿಷ, 39 ಸೆಕೆಂಡುಗಳು. ೨೦೧೫ರ ಜೂಲೈ 19 ರಂದು ಆ ಸಾಧನೆ ಮಾಡುವುದಕ್ಕೆ ಮುಂಚೆ ಮಿಲಿಂದ್ ಗೆ ಸೈಕಲ್ ಹೊಡೆದು ಅಭ್ಯಾಸವಿರಲಿಲ್ಲ. ಆ ಸ್ಪರ್ಧೆಯಲ್ಲಿ 7 ಮಂದಿ ಇತರೇ ಭಾರತೀಯರೂ ಪಾಲ್ಗೊಂಡಿದ್ದರು. 

ಇದಾದ ಎರಡು ವರ್ಷಕ್ಕೆ ಅಮೆರಿಕದ  Florida ದಲ್ಲಿ ನಡೆದ ಅಲ್ಟ್ರಾಮ್ಯಾನ್ ಟ್ರೈಯಥ್ಲಾನ್ ನಲ್ಲಿ ಪಾಲ್ಕೊಂಡಾಗ ಎದುರಿಸಬೇಕಿದ್ದ ಸವಾಲು ಮೂರು ದಿವಸದಲ್ಲಿ 423 ಕಿಮೀ ಸೈಕ್ಲಿಂಗ್, 10 ಕಿಮೀ ಸ್ವಿಮ್ಮಿಂಗ್ ಮತ್ತು 84 ಕಿಮೀ ಓಟ. ಆ ದೂರವನ್ನು ಅವರು ಬರಿಗಾಲಿನಲ್ಲಿ ಓಡಿದ ಏಕೈಕ ಸ್ಪರ್ಧಿ. 

ಇಷ್ಟೆಲ್ಲಾ ವಿಕ್ರಮಗಳನ್ನು ಸಾಧಿಸಿರುವ ಮಿಲಿಂದ್ ಒಟ್ಟಾರೆ ನಿರ್ಲಕ್ಷಿಸಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ಇಂಬುಕೊಡುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ ಅವರಿಗಾಗಿಯೇ ಮೀಸಲಾಗಿರುವ ಪಿಂಕೆಥಾನ್ ಎಂಬ ದೂರದೋಟವನ್ನು ನಿಯೋಜಿಸುತ್ತಾ ಬಂದಿದ್ದಾರೆ. ಮುಂದಿನ ತಿಂಗಳು 8ನೇ ದಿನಾಂಕದಂದು ನಡೆಯುವ ಓಟ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ದೇಶಾದ್ಯಂತ ರಾಯಭಾರಿಗಳನ್ನು ಹೊಂದಿರುವ ಪಿಂಕೆಥಾನ್ ನಲ್ಲಿ ಈ ಬಾರಿ ಕಳೆದ ವರ್ಷ, ಕಿವುಡರ ಮಿಸ್ ಏಷ್ಯಾ ಟೈಟಲ್ ಪಡೆದ ನಿಶ್ತಾ ದುಡೇಜ ಪಾಲ್ಗೊಳ್ಳುತ್ತಿದ್ದಾರೆ. 

ಓಟವನ್ನು ಪೂರ್ಣಗೊಳಿಸಿದ ಎಲ್ಲ ಸ್ಪರ್ಧಿಗಳಿಗೂ ಸುನಾಮಿಕ ಎಂಬ ಮಹಿಳೆಯರಿಂದಲೇ ಮಾಡಿದ ಪದಕ ಹಾಗೂ ಬೊಂಬೆಯೊಂದನ್ನು ಪಾರಿತೋಷಕ ನೀಡಲಾಗುತ್ತದೆ. ಸುನಾಮಿಯಲ್ಲಿ ಎಲ್ಲವನ್ನೂ ಕಳೆದುಕೊಂಡು ಮತ್ತೆ ತಮ್ಮ ಕಾಲಮೇಲೆ ತಾವು ನಿಂತುಕೊಂಡ ಅಪೂರ್ವ ಮಹಿಳೆಯರು ಈ ಬೊಂಬೆಗಳನ್ನು ಮಾಡುತ್ತಾರೆ. 

ಮಿಲಿಂದ್ ಸೋಮನ್ ರಿಗೆ, ಅವರ ಜೀವನೋತ್ಸಾಹಕ್ಕೆ ಶುಭ ಹಾರೈಸೋಣ. ಮಹಿಳೆಯರ ಆರೋಗ್ಯದ ಬಗ್ಗೆ, ಅವರ ಸಬಲೀಕರಣದ ಬಗ್ಗೆ ಇರುವ ಕಾಳಜಿ ಅನುಕರಣೀಯ. ಮಿಲಿಂದ್ ಓಡಿದ ಭೂಮಿ ಸವೆಯಬಹುದು, ಮಿಲಿಂದ್ ನ ಮೂಳೆಗಳು ಸವೆಯಲಾರವು. ಅದೇ ರೀತಿಯ ಶಕ್ತಿ ಸಾಮರ್ಥ್ಯಗಳು ಸಕಲ ಮಹಿಳೆಯರಿಗೂ ದೊರಕಲಿ. 

ತನಗಿಂತ ಕಾಲು ಶತಮಾನ ಕಿರಿಯಳಾದ ಅಂಕಿತ ಕೋನ್ವರ್ ಎಂಬ ಬೆಡಗಿಯನ್ನು ಬಾಳಸಂಗಾತಿಯನ್ನಾಗಿಸಿಕೊಳ್ಳುವಷ್ಟು ಯೌವನ ವೂ ಮಿಲಿಂದ್ ನಲ್ಲಿದೆ. ಅವರ ಕುಗ್ಗದ ಸಂಭ್ರಮ ಎಲ್ಲೆಡೆ ಪಸರಿಸಲಿ.