ಭಾರತದಲ್ಲಿ ಕಾಯಿಲೆಗಳಿಗೆ ಪ್ರತಿರಕ್ಷೆ ಪಡೆಯದ ಕಡುಬಡ ಮಕ್ಕಳ ಪ್ರಮಾಣ ಶೇ.47

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2010 ಮತ್ತು 2015 ರ ನಡುವೆ ಜಗತ್ತಿನಾದ್ಯಂತ ಒಂದು ಕೋಟಿ ಮಕ್ಕಳನ್ನು ಲಸಿಕೆಗಳು ಕಾಪಾಡಿವೆ.

ಭಾರತದಲ್ಲಿ ಕಾಯಿಲೆಗಳಿಗೆ ಪ್ರತಿರಕ್ಷೆ ಪಡೆಯದ ಕಡುಬಡ ಮಕ್ಕಳ ಪ್ರಮಾಣ ಶೇ.47

ಭಾರತದ ಶೇ.47 ರಷ್ಟು ಕಡು ಬಡಮಕ್ಕಳು ರೋಗಗಳಿಂದ ಸಂಪೂರ್ಣ ಪ್ರತಿರಕ್ಷೆ ಪಡೆದಿಲ್ಲ.ಈ ಪ್ರಮಾಣ ಪ್ರತಿರಕ್ಷೆ ಪಡೆಯದ ಸಿರಿವಂತ ಮಕ್ಕಳ ಪ್ರಮಾಣಕ್ಕಿಂತ ಶೇ.17 ರಷ್ಟು ಹೆಚ್ಚಿದೆ.

ರಾಷ್ಟ್ರೀಯ ಆರೋಗ್ಯ ದತ್ತಾಂಶ ಈ ಮಾಹಿತಿ ಒದಗಿಸಿದೆ. ಇದರಿಂದಾಗಿ ಮೊದಲೇ ತಡೆಯಬಹುದಾದ ಕಾಯಿಲೆಗಳಿಗೆ ಈ ಮಕ್ಕಳು ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಜತೆಗೆ ಈ ಕಾಯಿಲೆಗಳಿಗೆ ಪಡೆಯುವ ಚಿಕಿತ್ಸೆಯ ವೆಚ್ಚವೂ ಬಡ ಕುಟುಂಬಗಳಿಗೆ ಕೈಗೆಟುಕದಂತಿದೆ.

ಕ್ಷಯ ಮತ್ತು ದಡಾರಕ್ಕಾಗಿ ತಲಾ ಒಂದು ಸಲ ಬಿಸಿಜಿ ಮತ್ತು ದಡಾರ ಲಸಿಕೆ, ಮೂರು ಸಲ  ಡಿಪಿಟಿ ಮತ್ತು ಪೊಲಿಯೋ ಲಸಿಕೆ ಪಡೆಯುವ 12 ರಿಂದ 23 ತಿಂಗಳ ಮಕ್ಕಳು ಸಂಪೂರ್ಣ ಪ್ರತಿರಕ್ಷೆ ಪಡೆದಿದ್ದಾರೆ ಎನ್ನಲಾಗುವುದು. 2015-16 ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ರ ಪ್ರಕಾರ ದೇಶದ ಶೇ.38 ರಷ್ಟು ಮಕ್ಕಳು ಸಂಪೂರ್ಣ ಪ್ರತಿರಕ್ಷೆ ಪಡೆದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2010 ಮತ್ತು 2015 ರ ನಡುವೆ ಜಗತ್ತಿನಾದ್ಯಂತ ಒಂದು ಕೋಟಿ ಮಕ್ಕಳನ್ನು ಲಸಿಕೆಗಳು ಕಾಪಾಡಿವೆ. ಅದಕ್ಕೂ ಮಿಗಿಲಾಗಿ ನ್ಯುಮೋನಿಯಾ, ದಡಾರ, ಪೊಲಿಯೋದಂಥ ಕಾಯಿಲೆಗಳ ನೋವು ಮತ್ತು ಅಶಕ್ತತೆಯಿಂದಲೂ ಲಸಿಕೆಗಳು ಪಾರುಮಾಡಿವೆ. 

ಲಸಿಕೆಗಳಿಂದಾಗಿ ದಡಾರ ಮೊದಲಾದ ಕಾಯಿಲೆಗಳಿಗೆ ಪಡೆಯಬಹುದಾದ ವೆಚ್ಚವನ್ನೂ ಗಣನೀಯವಾಗಿ ಕಡಿಮೆ ಮಾಡಿದೆ. ಇದು ಬಡ ಕುಟುಂಬಕ್ಕೆ ವರವಾಗಿ ಪರಿಣಮಿಸಿದೆ ಎಂದು ಹಾರ್ವರ್ಡ್  ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಧ್ಯಯನ ತಿಳಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 2016 ರ ಅಂಕಿ ಅಂಶದಂತೆ ಭಾರತದಲ್ಲಿ ಒಬ್ಬ ವ್ಯಕ್ತಿಯೂ ಆರೋಗ್ಯ ವಿಮೆ ಪಡೆಯದ ಶೇ.71 ರಷ್ಟು ಕುಟುಂಬಗಳಿವೆ. ಇದರಿಂದಾಗಿ ಚಿಕಿತ್ಸೆಗಾಗಿ ಅನಗತ್ಯ ಗರಿಷ್ಠ ವೆಚ್ಚ ಭರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಭಾರತದಲ್ಲಿದೆ. ಈ ಪ್ರಮಾಣ ಬಡ ಕುಟುಂಬಗಳಲ್ಲಿ ಶೇ.78 ರಷ್ಟಿದೆ.2017 ರ ಮೇ ತಿಂಗಳ ವರದಿ ಪ್ರಕಾರ ಕೆಳ ಮಧ್ಯಮ ಆದಾಯ ಇರುವ 50 ದೇಶಗಳ ಪಟ್ಟಿಯಲ್ಲಿ ಚಿಕಿತ್ಸೆಗಾಗಿ ಕೈಯಿಂದಲೇ ಖರ್ಚು ಮಾಡುವುದರಲ್ಲಿ ಆರನೇ ಸ್ಥಾನದಲ್ಲಿದೆ. ಹೀಗೆ ಚಿಕಿತ್ಸೆಗಾಗಿ ಖರ್ಚು ಮಾಡುವ ಬಡತನ ರೇಖೆ ಕೆಳಗಿನ ಭಾರತೀಯರ ಸಂಖ್ಯೆ 32 ರಿಂದ 39 ದಶಲಕ್ಷದಷ್ಟಿದೆ.