ಬಳೆ ಮಾರುವ ಹುಡುಗ ಮತ್ತು ಕಾಶ್ಮೀರದ ಸಮಸ್ಯೆ..

ಬಳೆ ಮಾರುವ ಹುಡುಗ ಮತ್ತು ಕಾಶ್ಮೀರದ ಸಮಸ್ಯೆ..

ಬಡಾವಣೆಯೊಂದರ ಗಲ್ಲಿಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಪರಿಚಯದ ಹುಡುಗನೊಬ್ಬ ಖುಷಿಖುಷಿಯಿಂದ‌ ಬಂದು "ನೋಡಣ್ಣ ಕಾಶ್ಮೀರ ಹೆಂಗಾಯ್ತು.. ಅದಕ್ಕೇನಣ್ಣ ಮೋದಿ, ಅಮಿಶ್ ಶಾ ಅನ್ನೋದು.. ಸಾಬರ ಹುಟ್ಟಡಿಗಿಸೋಕೆ‌ ಅವ್ರೇ ಸರಿ.." ಎಂದು ಏನೇನೋ ಹೇಳುತಿದ್ದ.

ನಾನು ಅವನ ಮಾತಿನ ಮೇಲೆ ಗಮನ ಹರಿಸದೆ "ಬಳೆ ಅಂಗಡಿ ಹೆಂಗೆ ನಡೀತಿದ್ಯೋ ..?" ಅಂದೆ.

"ಇಲ್ಲಣ್ಣ ವ್ಯಾಪಾರಿಗಳೇ ಇಲ್ಲ.. ಬಳೆಯಂತೂ ಯಾರೂ ಕೊಳ್ಳಲ್ಲ.. ಒಂದಷ್ಟು ಸ್ಟೇಷನರಿ ಸಾಮಾನು ಇಡುತ್ತಿದ್ದೆ, ಈಗ ಜಿ.ಎಸ್.ಟಿ. ಬಂದ ಮೇಲೆ ಅದೂ ಇಲ್ಲ.." ಅಂದ.

ಈಗ ಕಾಶ್ಮೀರದಲ್ಲಿ ಆರ್ಟಿಕಲ್ 370, 35ಚಿ ತೆಗೆದಿರೋದರಿಂದ ನಿನಗೇನು ಲಾಭ..?" ಅಂದೆ.

"ಇಲ್ಲಣ್ಣ ದೇಶಕ್ಕೆ ಒಳ್ಳೇದಾಗುತ್ತಲ್ಲಣ್ಣ" ಅಂದ,

ಏನು ಒಳ್ಳೇದಾಗುತ್ತೆ..? ಹೇಗೆ ಒಳ್ಳೇದಾಗುತ್ತಪ್ಪ? ನನಗೆ ಗೊತ್ತಿಲ್ಲ ಹೇಳು?" ಎಂದೆ. ಅವನಿಂದ ಮಾತು ಹೊರಡಲಿಲ್ಲ. "ಕಾಶ್ಮೀರ ಎಲ್ಲಿದೆಯೋ..?" ಅಂದೆ, ಸುಮ್ಮನಿದ್ದ "ನಮ್ಮ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಮಾಲೂರು, ಮುಳಬಾಗಿಲು ಈಗ ಅಂಗಡಿ ಇಟ್ಟ ಮೇಲೆ ಬೆಂಗಳೂರು ಬಿಟ್ಟು ಬೇರೆ ಏನು ನೋಡಿದ್ದೀಯ.." ಅಂದೆ. ಕೊಂಚ ಆಲೋಚಿಸಿ

"ತಿರುಪತಿ ನೋಡಿದ್ದೀನಿ" ಅಂದ.

"ಹೋಗ್ಲಿ ಬಿಡು.. ಈ ಜಿ.ಎಸ್.ಟಿ. ಬಂದ ಮೇಲೆ ನಿನ್ನ ವ್ಯಾಪಾರ ಯಾಕೆ ಕಡಿಮೆ‌ ಆಯಿತು ಅಂತ ಯೋಚನೆ ಮಾಡಿದೀಯ.." ಎಂದೆ. "ಅದಕ್ಕೂ ಇದಕ್ಕೂ ಏನು ಸಂಬಂಧ ?" ಎನ್ನುವಂತೆ ಮುಖ ನೋಡಿದ.!

"ನೀನು ಅರ್ಧ ಬಿ.ಎ. ಓದಿ ಬಿಟ್ಟಿದ್ದೀಯ ನಿನಗೆ ಕಾಶ್ಮೀರದಲ್ಲಿ ನಡೆದಿದ್ದು ಯಾವ ಕಾರಣಕ್ಕೋ ಸಂತೋಷ ಉಂಟು ಮಾಡಿದೆ.. ಅದು ನಿನ್ನ ಮುಗ್ದ 'ದೇಶಪ್ರೇಮ' ಇರಲಿ, ಮಿಕ್ಕಂತೆ ದೇಶದಲ್ಲಿ ಏನು ನಡೀತಿದೆ ಎಂಬುದನ್ನು ತಿಳಕೊಂಡಿದ್ದೀಯ..?" ಎಂದು ಹೇಳತೊಡಗಿದೆ. ತಣ್ಣಗೆ ಕೇಳಿಸಿಕೊಳ್ಳುತಿದ್ದ...

"ನಿನ್ನ ಕೈಯಲ್ಲಿರೋ ಪೋನಿನ ಸಿಮ್‌ ಯಾವುದು..?" ಎಂದೆ 

"ಜಿಯೋ" ಅಂದ

"ಯಾಕೆ..? ಬಿ.ಎಸ್.ಎನ್.ಎಲ್ ಸಿಮ್ ಏನಾಯ್ತು..?" ಎಂದೆ

"ಇಲ್ಲಣ್ಣೋ ಅದು ಕನೆಕ್ಷನ್ ಸಿಕ್ಕಲ್ಲ.." ಅಂದ

"ಯಾಕೆ..? ಕಾರಣ ಏನು..? ಬಿ.ಎಸ್.ಎನ್.ಎಲ್ ಎಂಬ ನಿಮ್ಮ ಸರ್ಕಾರಿ ಸಂಸ್ಥೆಯ ಕತ್ತು ಹಿಸುಕಿ ಅಂಬಾನಿಯ ಜಿಯೋಗೆ ಜೀವ ಕೊಟ್ಟಿದ್ದು ಯಾರು..? ಈಗ ಬಿ.ಎಸ್.ಎನ್.ಎಲ್.ನ 34 ಸಾವಿರ ಜನ ನೌಕರರು ಬೀದಿಗೆ ಬೀಳುತಿದ್ದಾರೆ.. ಅದು ಯಾರಿಂದ?" ಅಂದೆ. ಅವನು ಸುಮ್ಮನಿದ್ದ!

ನಾನು ಹೇಳತೊಡಗಿದೆ "ನಿಮ್ಮ ಸರ್ಕಾರದ ಏರ್ ಇಂಡಿಯ ಮುಚ್ಚಲು ರೆಡಿಯಾಗಿದೆ. ಎಚ್.ಎ.ಎಲ್ ನಲ್ಲಿ ಕಾರ್ಮಿಕರಿಗೆ ಕೊಡಲು ಸಂಬಳವಿಲ್ಲ.. ಪೋಸ್ಟಲ್ ಇಲಾಖೆ 15 ಸಾವಿರ ಕೋಟಿ ನಷ್ಟದಲ್ಲಿದೆ.. ಓ.ಎನ್.ಜಿ.ಸಿ ಕೊನೆಯುಸಿರೆಳೆಯುತ್ತಿದೆ.. ರೈಲ್ವೆ ಇಲಾಖೆಯನ್ನು ಮಾರಾಟಕ್ಕಿಟ್ಟಿದ್ದಾರೆ.. ರೆಡ್ ಫೋರ್ಟ್‌ ಅನ್ನು ಬಾಡಿಗೆಗೆ ಕೊಟ್ಟಿದ್ದಾರೆ.. ಐದು ವಿಮಾನ ನಿಲ್ದಾಣಗಳನ್ನು ಅದಾನಿಗೆ ಕೊಟ್ಟಿದ್ದಾರೆ, ಇವೆಲ್ಲವೂ ನೀವು ಹೇಳುತ್ತಿರುವ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳ ಗತಿ..!" ಎಂದೆ. ಆತ ಸುಮ್ಮನೆ ಕುಂತಿದ್ದ..

"ಈ ದೇಶಕ್ಕೆ ಅಷ್ಟೋ ಇಷ್ಟೋ ಟ್ಯಾಕ್ಸ್ ಕಟ್ಟುತ್ತಾ ದೇಶದ ಪ್ರಗತಿಗೆ ಪೂರಕವಾಗಿದ್ದ ಕಾರ್ ಕಂಪೆನಿಗಳಲ್ಲಿ ಕೊಳ್ಳುವವರಿಲ್ಲದೆ 55 ಸಾವಿರ ಕಾರುಗಳು ಕಿಲುಬು ಹಿಡಿಯುತ್ತಿವೆ.. ಮಾರುತಿ ಕಾರಿನ ತಯಾರಿಕೆಯನ್ನೇ ನಿಲ್ಲಿಸಲಾಗಿದೆ.. ಮನೆ ನಿರ್ಮಾಣದ ವಸ್ತುಗಳ ಮೇಲೆ ನಿಮ್ಮ ಸರ್ಕಾರ 18% ನಿಂದ 28% ಗೆ ಜಿ.ಎಸ್.ಟಿ. ಏರಿಸಿದ ಪರಿಣಾಮ ಬಹು ಮಹಡಿ ಕಟ್ಟಡ ಕಟ್ಟುವವರೂ ಇಲ್ಲ, ಕೊಳ್ಳುವವರೂ ಇಲ್ಲ! ಇದರಿಂದಾಗಿ ಸಾವಿರಾರು ಮಂದಿ ಕಟ್ಟಡ ಕಾರ್ಮಿಕರ ಮತ್ತು ಸಣ್ಣಪುಟ್ಟ ಮನೆ ಕಟ್ಟಡ ಸಾಮಗ್ರಿ ಮಾರುವ ಸಣ್ಣ ವ್ಯಾಪಾರಿಗಳ ಬದುಕುಗಳು ಬೀದಿಗೆ ಬಿದ್ದಿವೆ..ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಪಡೆದ 36 ಮಂದಿ ಮಿಲಿಯಾಧಿಪತಿಗಳು ದೇಶ ಬಿಟ್ಟು ಓಡಿಹೋಗಿದ್ದಾರೆ.. ಇವರು ಓಡಿ ಹೋಗಲು ಕಾರಣರಾರು..?

ಈ ಕಾರಣಕ್ಕೆ ದೇಶ 131100 ಮಿಲಿಯನ್ ಡಾಲರ್ ಗಳಷ್ಟು ನಷ್ಟವಾಗಿದೆ! ಪಿ.ಎನ್.ಬಿ. ಬೀಗ ಹಾಕಲು ಸಜ್ಜಾಗಿದೆ.. ಜೆಟ್ ಏರ್‌ವೇಸ್ ಮುಚ್ಚಲು ಸಿದ್ದವಾಗಿದೆ.. ಟಾಟಾ ಡೋಕೋಮೋ ಬೀಗ ಹಾಕಿದೆ, ಏರ್ಟೆಲ್ ಮುಚ್ಚಲು ಸಿದ್ದವಾಗಿದೆ.. ಇವೆಲ್ಲ ಸಾಯಲು ಕಾರಣರಾದವರು ಜಿಯೋ ಅನ್ನು ಉಳಿಸಲು ಹೊರಟ ನಿಮ್ಮ ನಾಯಕರಲ್ಲವೆ ? ಇದೆಲ್ಲದರಿಂದಾಗಿ ಕಳೆದ 45 ವರ್ಷಗಳಲ್ಲೇ ಅತಿದೊಡ್ಡ ನಿರುದ್ಯೋಗ ಸೃಷ್ಟಿಯಾಗಿದೆ..ಅತಿದೊಡ್ಡ ಹಣದುಬ್ಬರ ಸೃಷ್ಡಿಯಾಗಿದೆ..." 

"ಈಗ ಹೇಳು ಕಾಶ್ಮೀರದಲ್ಲಿ ವಿಧಿ ಬದಲಿಸಿದರೆ ನಿನ್ನ ನಿಧಿ ವೃದ್ದಿಯಾಗುವುದೆ..? ಕಾಶ್ಮೀರದಲ್ಲಿ 370 ಮತ್ತು 35a ವಿಧಿಗಳನ್ನು ರದ್ದು ಗೊಳಿಸಿದ್ದರಿಂದ ಮೇಲಿನ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆಯೆ? ನಿನ್ನ ಬಳೆ‌‌ ಅಂಗಡಿ ವ್ಯಾಪಾರ‌ ಏನಾದರೂ ವೃದ್ದಿಯಾಗುತ್ತದೆಯೇ..?" ಎಂದೆ. ಮುಂದುವರೆದು "ಇದೆಲ್ಲವನ್ನೂ ಮುಚ್ಚಿಕೊಳ್ಳುವ ಹುನ್ನಾರ ಅಲ್ಲವೇನೋ ಇದು..?" ಎನ್ನುತಿದ್ದಂತೆ

ಮೆಲ್ಲನೆ ಎದ್ದು ಹೋದ..!