ಆರೋಗ್ಯ ಸಹಾಯವಾಣಿಗೆ ಬಂದ ಕರೆಗಳಲ್ಲಿ ಲೈಂಗಿಕ ಸಮಸ್ಯೆಗಳು ರಿಂಗಣಿಸಿದ್ದೇ ಹೆಚ್ಚು!

ಸಾರ್ವಜನಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಆರಂಭಿಸಿದ್ದ ಆರೋಗ್ಯ ಸಹಾಯವಾಣಿ ಕೇಂದ್ರಗಳಿಗೆ ಗುಪ್ತ ಸಮಾಲೋಚನೆಯ ಕರೆಗಳೇ ಹೆಚ್ಚಿವೆ.

ಆರೋಗ್ಯ ಸಹಾಯವಾಣಿಗೆ ಬಂದ ಕರೆಗಳಲ್ಲಿ  ಲೈಂಗಿಕ ಸಮಸ್ಯೆಗಳು ರಿಂಗಣಿಸಿದ್ದೇ ಹೆಚ್ಚು!

ಚಿಕ್ಕಪುಟ್ಟ ಅನಾರೋಗ್ಯ ಹೊರೆ ತಗ್ಗಿಸುವುದು ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲ ಉದ್ದೇಶ ಹೊಂದಿರುವ '104 ಆರೋಗ್ಯ ಸಹಾಯವಾಣಿ' ದೂರವಾಣಿ ಸಂಖ್ಯೆಗೆ ಹಸ್ತ ಮೈಥುನ, ನಿಮಿರುವಿಕೆ ಸಮಸ್ಯೆ, ಲೈಂಗಿಕ ಸಂಭೋಗದ ವೇಳೆ ನೋವು, ಸ್ವಪ್ನಸ್ಖಲನ ಸೇರಿದಂತೆ ಸುಪ್ತ ಅಗತ್ಯಗಳಿಗಾಗಿ ನೆರವು ಕೋರಿ ರಾಜ್ಯದ ವಿವಿಧೆಡೆಗಳಲ್ಲಿ ಕರೆ ಮಾಡಿದ್ದಾರೆ.

ಹಿಂದಿನ ಕಾಂಗ್ರೆಸ್ಸರ್ಕಾರ ಜಾರಿಗೊಳಿಸಿದ್ದ ಆರೋಗ್ಯ ಸಹಾಯವಾಣಿ ಸೇವೆ ಕುರಿತು ಐಸಿಆರ್ ಮ್ಯಾನೇಜ್ಮೆಂಟ್ಕನ್ಸಲ್ಟಿಂಗ್ಸರ್ವಿಸಸ್ಸಂಸ್ಥೆ ಮಾಡಿರುವ ಅಧ್ಯಯನ ವರದಿ ಹಲವು ಕುತೂಹಲಕರ ಸಂಗತಿಗಳನ್ನು ಹೊರಗೆಡವಿದೆ. ಅಧ್ಯಯನ ವರದಿ 'ಡೆಕ್ಕನ್‌'ನ್ಯೂಸ್ಗೆ ಲಭ್ಯವಾಗಿದೆ.

ಸೇವಾ ಸಂಬಂಧಿತ ಕುಂದುಕೊರತೆಗಳ ಪ್ರಮಾಣ ಅತ್ಯಧಿಕವಾಗಿದ್ದರೂ ಭ್ರಷ್ಟಾಚಾರ ಸಂಬಂಧಿತ ಕುಂದುಕೊರತೆಗಳ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಒಟ್ಟು ಕರೆಗಳ ಪೈಕಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಯಚೂರು(ಶೇ.11), ಬಳ್ಳಾರಿ, ಬೆಳಗಾವಿ, ಹಾವೇರಿ, ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ  ಒಟ್ಟು ಶೇ.17.7ರಷ್ಟು ಸ್ವೀಕರಿಸಿರುವ ಕರೆಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಔಷಧಾಲಯ, ಶಸ್ತ್ರ ಚಿಕಿತ್ಸೆ ಘಟಕ, ರೋಗ ಪತ್ತೆ ಘಟಕಗಳಲ್ಲಿ ಕಂಡು ಬಂದಿರುವ ಲಂಚಗುಳಿತನಕ್ಕೆ ಸಂಬಂಧಿಸಿವೆ.

ಆರೋಗ್ಯ ಶಿಕ್ಷಣ ಮತ್ತು ಸಣ್ಣ ಕಾಯಿಲೆಗಳಿಗೆ ಸಂಬಂಧಿಸಿದ ಸುಪ್ತ ಅಗತ್ಯವನ್ನು ಆರೋಗ್ಯ ಸಹಾಯವಾಣಿ ಪೂರೈಸಿದೆಯಾದೆಯಾದರೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿಲ್ಲ. ಅಲ್ಲದೆ ಕಳೆದ ಹಲವು ವರ್ಷಗಳಲ್ಲಿ ಕಿರಿಕಿರಿ ಕರೆಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆಯಲ್ಲದೆ 2013-14ರಲ್ಲಿ 37,171ರಷ್ಟಿದ್ದ ಇಂತಹ ಕರೆಗಳ ಸಂಖ್ಯೆ 2016-17 ಸಾಲಿನ ವೇಳೆಗೆ 2.10 ಲಕ್ಷಕ್ಕೆ ಏರಿಕೆಯಾಗಿವೆ. ನೈಜ ಕರೆಗಳು ಹೆಚ್ಚಾಗಿದ್ದರೂ ಶೇಕಡವಾರು ಲೆಕ್ಕದಲ್ಲಿ ಕಡಿಮೆಯಾಗಿದೆ. ಕಿರಿಕಿರಿ ಕರೆಗಳ ನಿಯಂತ್ರಣವಾದಲ್ಲಿ ನೈಜ ಕರೆದಾರರಿಗೆ ಅವಕಾಶ ಹೆಚ್ಚಿಸಬಹುದು ಎಂದು ಅಧ್ಯಯನ ವರದಿ ತಿಳಿಸಿದೆ.

ಗ್ಯಾಸ್ಟ್ರೋ ಮತ್ತು ಕರುಳಿಗೆ ಸಂಬಂಧಿಸಿದ ಅತಿ ಆಮ್ಲೀಯತೆ, ಎದೆಯುರಿ, ಅಜೀರ್ಣ, ಅತಿಸಾರ, ರಕ್ತ ಸಮೇತ ಕೆಮ್ಮು, ಉಸಿರಾಟದ ತೊಂದರೆ, ಮೂತ್ರ ವಿಸರ್ಜನೆ ವೇಳೆ ಉರಿ, ಋತುಚಕ್ರದ ಸಮಯದಲ್ಲಿ ಉರಿ, ಬಿಳಿಸೆರಗು, ಮುಟ್ಟು ಪೂರ್ವ ಲಕ್ಷಣ, ಪದೇ ಪದೇ ಮೂತ್ರ ವಿಸರ್ಜನೆ, ಹಿಗ್ಗಿದ ಗರ್ಭಕೋಶ,  ರಕ್ತ ಸ್ರಾವ, ಮಾನಸಿಕ ಆರೋಗ್ಯ, ದೃಷ್ಟಿ ದೋಷ ನಿವಾರಣೆ, ಕುಷ್ಠ ರೋಗಕ್ಕೆ ಸಂಬಂಧಿಸಿದ ವಿಭಾಗಗಳನ್ನು ಆರೋಗ್ಯ ಸಹಾಯವಾಣಿ ಪರಿಗಣಿಸದಿರುವುದು ವರದಿಯಿಂದ ಗೊತ್ತಾಗಿದೆ

.ಸ್ಥೂಲ ದೇಹ ಸೂಚಿ, ಎತ್ತರ ಮತ್ತು ಹಸ್ತಮೈಥುನದಂತಹ ಸುಪ್ತ ಅಗತ್ಯಗಳು ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳ ಕುರಿತು 104ರಲ್ಲಿ ಸ್ವೀಕರಿಸಿರುವ ವಿಚಾರಣೆ ಕರೆಗಳನ್ನು ವಿಶ್ಲೇಷಿಸಿರುವ ಅಧ್ಯಯನ ತಂಡ,  ಕರೆ ಕೇಂದ್ರವು ಸ್ವೀಕರಿಸಿದ ಒಟ್ಟು ಕರೆಗಳ ಪೈಕಿ ಸುಮಾರು ಶೇ.40ರಷ್ಟು ಕಾಯಿಲೆಗಳಿಗೆ ಸಂಬಂಧಿಸಿಲ್ಲ ಎಂಬ ಅಂಶ ವರದಿಯಿಂದ ಗೊತ್ತಾಗಿದೆ.

ದಕ್ಷಿಣ ಕನ್ನಡ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ ಜಿಲ್ಲೆಯಿಂದ ಕರೆ ಮಾಡಿರುವವರು ಕುಂಠಿತಗೊಂಡ ಲೈಂಗಿಕ ಬಯಕೆ ಕುರಿತು ಮಾಹಿತಿ ಪಡೆದಿದ್ದಾರೆ. ಅದೇ ರೀತಿ ಲೈಂಗಿಕವಾಗಿ ಹರಡುವ ರೋಗಗಳ(ಸಮಗ್ರವಾಗಿ) ಕುರಿತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕರೆ ಸ್ವೀಕರಿಸಲಾಗಿದೆ ಎಂದು ವರದಿ ತಿಳಿಸಿದೆ.

ಹಾಗೆಯೇ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಡಗು, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆನ್ನು ನೋವಿನಿಂದ ಬಳಲುವರ ಸಂಖ್ಯೆ ಹೆಚ್ಚಿದೆ. ಗರ್ಭನಿರೋಧಕ ಮತ್ತು ಸುರಕ್ಷಿತ ಲೈಂಗಿಕತೆ ಕುರಿತು ಬೆಂಗಳೂರು ಗ್ರಾಮಾಂತರ,  ದಕ್ಷಿಣ ಕನ್ನಡದಿಂದ ಕರೆ ಮಾಡಿದ್ದರೆ, ಚಾಮರಾಜನಗರ ಜಿಲ್ಲೆಯಿಂದ ಅಸ್ತಮಾ ಕುರಿತು ಸಹಾಯವಾಣಿ ಕೇಂದ್ರಗಳು ಕರೆ ಸ್ವೀಕರಿಸಿವೆ.

ಅದೇ ರೀತಿ ಗರ್ಭಧಾರಣೆ ಕುರಿತು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು,ಕೋಲಾರ ಮತ್ತು ಉಡುಪಿ ಜಿಲ್ಲೆಯಿಂದ ಕರೆಗಳು ಸ್ವೀಕೃತಗೊಂಡಿದ್ದರೆ,  ಪುರುಷ ಬಂಜೆತನ, ಮಹಿಳೆ ಬಂಜೆತನದ ಬಗ್ಗೆ ಬೀದರ್ಜಿಲ್ಲೆಯಿಂದ ಕರೆಗಳನ್ನು ಸಹಾಯವಾಣಿ ಕೇಂದ್ರಗಳು ಸ್ವೀಕರಿಸಿದೆ ಎಂದು ಅಧ್ಯಯನ ತಂಡ ವರದಿಯಲ್ಲಿ ಮಾಹಿತಿ ಒದಗಿಸಿದೆ.

ಆರೋಗ್ಯ ಸಹಾಯವಾಣಿ ಕೇಂದ್ರಗಳು ಸ್ವೀಕರಿಸಿರುವ ಒಟ್ಟು ಕರೆಗಳ ಪೈಕಿ ಮೊಡವೆ ಕುರಿತು ಕರೆಗಳ ಸಂಖ್ಯೆ 3,01,645 ಸಂಖ್ಯೆಯಷ್ಟಿವೆ. ಶೀತ ಕುರಿತು 1,95,249, ಸ್ವಪ್ನಸ್ಖಲನ 1,66,212, ಲೈಂಗಿಕ ಸಂಭೋಗದ ವೇಳೆ ನೋವಿನ ಕುರಿತು 1,64,321, ತಲೆ ನೋವಿಗೆ ಸಂಬಂಧಿಸಿದಂತೆ 99,978, ಹಸ್ತಮೈಥುನ ಕುರಿತು 99,355, ಎದೆಉರಿ 96,789, ತಲೆ ಬೇನೆ 92,609, ನಿಮಿರುವಿಕೆ ಸಮಸ್ಯೆ ಕುರಿತು 91,730,  ಕೂದಲು ಉದುರುವಿಕೆ ಕುರಿತು 91,554, ಫಂಗಲ್ಸೋಂಕು 88,292, ಹೊಟ್ಟೆ ನೋವು 80,655, ಜ್ವರ 80,353, ಸುಸ್ತು/ಮೈ ಕೈ ನೋವು 78,973, ಅತಿಸಾರ 68,852, ಶೀಘ್ರ ಸ್ಖಲನ 60,729, ಸೈನಸಿಟಿಸ್ಕುರಿತು 58,060 ಸಂಖ್ಯೆಯಲ್ಲಿ ಕರೆಗಳನ್ನು ಸಹಾಯವಾಣಿ ಸ್ವೀಕರಿಸಿದೆ.

ಕರ್ನಾಟಕದ ದಕ್ಷಿಣ ಮತ್ತು ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ಉತ್ತರ ಮತ್ತು ಕೇಂದ್ರ ಭಾಗದ ಜಿಲ್ಲೆಗಳಲ್ಲಿ ಆರೋಗ್ಯ ಸಹಾಯವಾಣಿ ಬಳಕೆ ಹೆಚ್ಚಿದೆ. ರಾಜ್ಯಾದಾದ್ಯಂತ ಸಮಾನವಾಗಿ ಅರಿವಿನ ಕೊರತೆಯಿಂದಾಗಿ ಸಹಾಯವಾಣಿ ಬಳಕೆಯಲ್ಲಿ ಭೌಗೋಳಿಕವಾಗಿ ಅಸಮಾನತೆಗೆ ಕಾರಣವಾಗಿದೆ. ಕರೆ ಕೇಂದ್ರ ಉತ್ತರ ಕರ್ನಾಟಕದಲ್ಲಿರುವುದು ಮತ್ತು ಜಾಗೃತಿ ಅಭಿಯಾನಗಳನ್ನು ಉತ್ತರ ಕರ್ನಾಟಕದಲ್ಲಿಯೇ ಹಮ್ಮಿಕೊಳ್ಳುತ್ತಿರುವುದು ಕೂಡ ಭೌಗೋಳಿಕ ಅಸಮಾನತೆಗೆ ಕಾರಣ ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.

ಅಧಿಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ ಬಂದಂತಹ ಕುಂದುಕೊರತೆಗಳ ಪ್ರಮಾಣ ಇಳಿಮುಖವಾಗಿದ್ದರೆ, ಸಾಂಕ್ರಾಮಿಕ ಕುರಿತ ಕುಂದುಕೊರತೆಗಳ ಪ್ರಮಾಣ ಶೇ. 37ರಷ್ಟು ಏರಿಕೆಯಾಗಿವೆ ಎಂದು ವರದಿ ಹೇಳಿದೆ.

ವೈಯಕ್ತಿಕ ಕಾಯಿಲೆಗಳಿಗೆ ಸ್ಥಳೀಯ ಮಟ್ಟದಲ್ಲಿ ಸಿಗುವ ಚಿಕಿತ್ಸೆ, ಸಮುದಾಯದಲ್ಲಿ ಕಂಡು ಬರುವ ಡೆಂಗಿ, ಚಿಕೂನ್ಗುನ್ಯಾ, ಎಚ್1ಎನ್1, ವಾಂತಿ ಭೇದಿ, ಎಚ್ಐವಿ , ಕ್ಷಯ, ಕುಷ್ಠ, ಚರ್ಮರೋಗ, ನವಜಾತ ಶಿಶುವಿನ ಆರೈಕೆ, ಗರ್ಭಿಣಿ ಹಾಗೂ ಬಾಣಂತಿಗೆ ಸೂಕ್ತ ಆರೈಕೆ. ಆಸ್ಪತ್ರೆಗಳಲ್ಲಿ ದೊರಕುವ ಸೌಲಭ್ಯಗಳು, ರಾಜ್ಯದ ಆಸ್ಪತ್ರೆಗಳು, ಅಲ್ಲಿನ ಸೌಲಭ್ಯಗಳನ್ನು ತಿಳಿದುಕೊಳ್ಳಲು ಸಹಾಯವಾಣಿ ಕೇಂದ್ರಗಳನ್ನು  ರಾಜ್ಯ ಸರ್ಕಾರ ಆರಂಭಿಸಿತ್ತು.