ಏರೋಸ್ಪೇಸ್ ಪಾರ್ಕ್ ನಲ್ಲಿ 10 ಕೋಟಿ ರೂ. ಹೂಡಿಕೆ! ಎಸ್ ಮೂರ್ತಿಗೆ ಸುತ್ತಿಕೊಳ್ಳಲಿದೆ ಇನ್ನೊಂದು ಕುಣಿಕೆ 

ಮಾನವ ಸಂಪನ್ಮೂಲ ಸೇವೆ ಒದಗಿಸುತ್ತಿರುವ ಕಂಪನಿಗೆ ತಾಂತ್ರಿಕ ಅರ್ಹತೆ, ಅನುಭವ ಇಲ್ಲದಿದ್ದರೂ ಏರೋಸ್ಪೇಸ್ ಪಾರ್ಕ್ನಲ್ಲಿ ಜಮೀನು ಮಂಜೂರಾಗಿದ್ದೇ ಅಚ್ಚರಿ.

ಏರೋಸ್ಪೇಸ್ ಪಾರ್ಕ್ ನಲ್ಲಿ 10 ಕೋಟಿ ರೂ. ಹೂಡಿಕೆ! ಎಸ್  ಮೂರ್ತಿಗೆ ಸುತ್ತಿಕೊಳ್ಳಲಿದೆ ಇನ್ನೊಂದು ಕುಣಿಕೆ 

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಎಸ್ ಮೂರ್ತಿ ಅವರ ಪತ್ನಿ ಪೂರ್ಣಿಮಾ ಮಾಲೀಕತ್ವದ ಮ್ಯಾಗ್ ನಕಾರ್ಟ ಹೆಸರಿನ ಕಂಪನಿ, ದೇವನಹಳ್ಳಿಯಲ್ಲಿರುವ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲಿ 10 ಕೋಟಿ ರು. ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಎಸ್ ಮೂರ್ತಿ ಅವರಿಗೆ ಸೇರಿರುವ ಮನೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ದಾಳಿ ನಡೆದ ಬೆನ್ನಲ್ಲೇ ಏರೋಸ್ಪೇಸ್ ಪಾರ್ಕ್ ನಲ್ಲಿ 10 ಕೋಟಿ ರು. ಮೊತ್ತದ ಹೂಡಿಕೆ ಯೋಜನೆಗೆ 2 ಎಕರೆ ಜಾಗ ಹೊಂದಿರುವ ದಾಖಲೆಗಳು ಹೊರ ಬಿದ್ದಿವೆ. ಇದೇ ಕಂಪನಿ ವಿರುದ್ಧ ಜಯಕುಮಾರ್ ಹಿರೇಮಠ್ ಎಂಬುವರು ಸಲ್ಲಿಸಿದ್ದ ದೂರಿನ ಕುರಿತು ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಇದೇ ಕಂಪನಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಜಮೀನು ಮಂಜೂರು ಮಾಡಿರುವುದು ಅಚ್ಚರಿ ಮೂಡಿಸಿದೆ.

ಇದು ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನ ಹಾರ್ಡ್ ವೇರ್ ಸೆಕ್ಟರ್ ನಲ್ಲಿ 10 ಕೋಟಿ ರು.ಹೂಡಿಕೆಯಲ್ಲಿ ಕಂಪ್ಯೂಟರ್ ಮತ್ತು ಹಾರ್ಡ್ವೇರ್ ಉಪಕರಣಗಳ ತಯಾರಿಕೆ ಉದ್ದೇಶದ ಯೋಜನೆಯಾಗಿದೆ. ಆದರೆ ತಾಂತ್ರಿಕ ಅರ್ಹತೆ ಹೊಂದಿರುವ ಮತ್ತು ಉದ್ದೇಶಿತ ಯೋಜನೆಯಲ್ಲಿ ಅನುಭವ ಹೊಂದಿರುವ ಬಗ್ಗೆ ಯಾವುದೇ  ದಾಖಲೆಗಳಿಲ್ಲ ಎಂದು ತಿಳಿದು ಬಂದಿದೆ.  

ಮೂಲತಃ ಈ ಕಂಪನಿ ಮಾನವ ಸಂಪನ್ಮೂಲ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು ಎಂದು ಹೇಳಲಾಗಿದೆ. ಆದರೂ ಕಂಪ್ಯೂಟರ್ ಮತ್ತು ಹಾರ್ಡ್ ವೇರ್ ಉಪಕರಣಗಳ ತಯಾರಿಕೆ ಯೋಜನೆಗೆ ಜಮೀನು ಹಂಚಿಕೆಯಾಗಿರುವುದು ಸಂಶಯಗಳಿಗೆ ಕಾರಣವಾಗಿದೆ.

ಕಂಪನಿ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯ ಇರುವ ದಾಖಲೆ ಪ್ರಕಾರ ಮ್ಯಾಗ್ನಾಕಾರ್ಟಾ ವೆಂಚರ್ಸ್ ಪ್ರೈವೈಟ್ ಲಿಮಿಟೆಡ್ ನ ಮೂಲ 2 ಲಕ್ಷ ಮತ್ತು ದುಡಿಯುವ ಬಂಡವಾಳ 2 ಲಕ್ಷ ರು.ಇದೆ ಎಂದು ಗೊತ್ತಾಗಿದೆ.

2016ರಲ್ಲಿ ಈ ಕಂಪನಿಯಲ್ಲಿ ವೀರಪ್ಪ ಮಾಯಣ್ಣ, ವಿನಯಕುಮಾರ್ ಎಂಬುವರು ನಿರ್ದೇಶಕರಾಗಿದ್ದರೆ, 2018-19ರ ಮಧ್ಯೆ ಮ್ಯಾಗ್ನಾಕಾರ್ಟಾ ವೆಂಚರ್ಸ್ ಪ್ರೈವೈಟ್ ಲಿಮಿಟೆಡ್ ಎಂದು ಹೆಸರನ್ನು ಬದಲಿಸಿಕೊಂಡ ನಂತರ 2019ರ ಜನವರಿ 24ರಂದು ಮೂರ್ತಿ ಮಧುಸೂದನ್ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಮಧುಸೂದನ್ ಅವರು ಎಸ್ ಮೂರ್ತಿ ಅವರ ಪುತ್ರ ಎಂದು ತಿಳಿದು ಬಂದಿದೆ.

ಖಾಸಗಿ ಕಂಪನಿಗಳಿಗೆ ಮಾನವ ಸಂಪನ್ಮೂಲ ಸೇವೆ ಮತ್ತು ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಈ ಕಂಪನಿಗೆ ಕಂಪ್ಯೂಟರ್ ಮತ್ತು ಹಾರ್ಡ್ ವೇರ್ ಉಪಕರಣಗಳ ತಯಾರಿಕೆಯಲ್ಲಿ ಅನುಭವ ಇರುವ ಬಗ್ಗೆ ಹಲವು ಅನುಮಾನಗಳಿವೆ.

ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿಗೆ 2017ರ ಡಿಸೆಂಬರ್ 1ರಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಅಡಿಯಲ್ಲಿ ಮ್ಯಾಗ್ನಾಕಾರ್ಟಾ ಕಂಪನಿ ಅರ್ಜಿ ಸಲ್ಲಿಸಿತ್ತು. ದಾಖಲಾತಿಗಳನ್ನು ಪರಿಶೀಲಿಸಿದ್ದ ಸಮಿತಿ, 2017ರ ಡಿಸೆಂಬರ್ 28ರಂದು ಅಂದರೆ ಅರ್ಜಿ ಸಲ್ಲಿಸಿದ  27 ದಿನದೊಳಗೇ ಯೋಜನೆಗೆ ಅನುಮೋದನೆ ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಏರೋಸ್ಪೇಸ್ ಪಾರ್ಕ್ ನಲ್ಲಿ 3 ಎ, 3ಎ10, 4ಎ4 4ಎ3, 3ಎ11 ಮತ್ತು 4ಎ2 ಸಂಖ್ಯೆಯ ಮೂಲೆ ನಿವೇಶನಗಳು ಕಂಪನಿಗೆ ಮಂಜೂರಾಗಿದೆ. ಒಟ್ಟು 5,50,00,000 ರು.ಮೌಲ್ಯ ಹೊಂದಿರುವ ನಿವೇಶನಗಳನ್ನು ಪರಿಶಿಷ್ಟ ಜಾತಿ, ಪಂಗಡದ ಉದ್ದಿಮೆದಾರರಿಗೆ ನೀಡುವ ಶೇ.50ರ ರಿಯಾಯಿತಿ ದರದಲ್ಲಿ ಮಂಜೂರಾಗಿದೆ. ಈ ಸಂಬಂಧ ಕಂಪನಿ 2018ರ ಜನವರಿ 11 ಮತ್ತು 12ರಂದು 65 ಲಕ್ಷ ರು. ಜನವರಿ 20ರಂದು 2,50,000 ರು. ಪಾವತಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ, ಅಧಿಕಾರ ಮತ್ತು ಹಣ ದುರುಪಯೋಗ ಸೇರಿದಂತೆ ವಿವಿಧ ಆರೋಪಗಳಿಗೆ ಗುರಿಯಾಗಿರುವ ಎಸ್ ಮೂರ್ತಿ ಅವರನ್ನು ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಅಮಾನತುಗೊಳಿಸಿದ್ದರು. ಇದಾದ ನಂತರ ಬಲ್ಲ ಮೂಲಗಳ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಶಂಕೆ ಮೇರೆಗೆ ರಮೇಶ್ ಕುಮಾರ್ ಅವರು ತನಿಖೆ ನಡೆಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಿ ಪತ್ರ ಬರೆದಿದ್ದರು ಎನ್ನಲಾಗಿದೆ.

ಈ ಸೂಚನೆ ಮೇರೆಗೆ ಎಸ್. ಮೂರ್ತಿ ಅವರ ಸದಾಶಿವನಗರದಲ್ಲಿರುವ ಮನೆ, ಜಾಲಹಳ್ಳಿ ಕ್ರಾಸ್ ನ ಎಚ್.ಎಂ.ಟಿ ಕಾಲೋನಿಯಲ್ಲಿರುವ ಮನೆ, ಆರ್.ಟಿ. ನಗರದ ಓಂ ಶಕ್ತಿ ಅಪಾರ್ಟ್ ಮೆಂಟ್ ನಲ್ಲಿರುವ ಎರಡು ಫ್ಲ್ಯಾಟ್, ಕೊಡಗು ಜಿಲ್ಲೆಯ ಕೆ. ನಿಡುಗಣೆ ಗ್ರಾಮದ ಕಾಫಿ ತೋಟದ ಮನೆ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು, ಕೊಡಗು ಸೇರಿದಂತೆ, ಅನೇಕ ಕಡೆ ಮೂರ್ತಿ ಆಸ್ತಿ ಸಂಪಾದಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಆ ನಂತರ ದಾಳಿ ನಡೆಸಿರುವ ಅಧಿಕಾರಿಗಳು ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳು, ಆಸ್ತಿ- ಪಾಸ್ತಿಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಒಂದೂವರೆ ವರ್ಷದ ಹಿಂದೆ ಮೂರ್ತಿ ಕೊಡಗಿನಲ್ಲಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಅದರಿಂದ ಒಂದು ಕೋಟಿ ಆದಾಯ ಬಂದಿದೆ ಎಂದು ಮೂರ್ತಿ ಹೇಳಿಕೆ ನೀಡಿದ್ದಾರೆ. ಆದರೆ, ಆ ಭೂಮಿ ಕಾಡು ಪ್ರದೇಶವಾಗಿದ್ದು, ಅಲ್ಲಿ ಏನನ್ನೂ ಬೆಳೆದಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.